ಬೆಂಗಳೂರು(ಅ.16): ಉಪಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್‌ನದ್ದೇ ಭಯ ಇದ್ದು, ಪಕ್ಷದ ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗೆ ಸಮರ್ಪಕವಾಗಿ ಶ್ರಮ ಹಾಕಬೇಕು ಎಂದು ಪಕ್ಷದ ಮುಖಂಡ ಟಿ.ಎ.ಶರವಣ ತಿಳಿಸಿದ್ದಾರೆ.

ಗುರುವಾರ ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ಪರ ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪ್ರಚಾರದ ಸಭೆಯಲ್ಲಿ ಮಾತನಾಡಿದ ಅವರು, ಈ ಉಪಚುನಾವಣೆಯು ಪಕ್ಷಕ್ಕೆ ಪೂರ್ವ ಪರೀಕ್ಷೆ ಸಮಯ ಇದ್ದಂತೆ. ವಾರ್ಷಿಕ ಪರೀಕ್ಷೆ ಮುಂದೆ ಬರಲಿದೆ. ಬಿಜೆಪಿ ಸ್ಥಳೀಯ ನಾಯಕರನ್ನು ಕಡೆಗಣಿಸಿ ವಲಸಿಗರಿಗೆ ಟಿಕೆಟ್‌ ನೀಡಿದೆ. ಅರಾಜಕತೆ ಮಾಡಿದವರಿಗೆ ಮಣೆ ಹಾಕಲಾಗಿದೆ. ಕಾಂಗ್ರೆಸ್‌ನವರಿಗೆ ಗೆಲುವಿಗೆ ಆತಂಕ ಇದೆ. ಹೀಗಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ. ಎರಡು ಪಕ್ಷಗಳಿಗೂ ಜೆಡಿಎಸ್‌ನದ್ದೇ ಭಯ ಇದೆ. ಆದರೆ, ಕಾರ್ಯಕರ್ತರು ಮುಂದಿನ 15 ದಿನಗಳ ಕಾಲ ಹಗಲಿರುಳು ಶ್ರಮಪಟ್ಟು ಕೆಲಸ ಮಾಡಬೇಕು. ಪಕ್ಷದ ಕರಪತ್ರಗಳನ್ನು ಹಂಚಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

RR ನಗರ ಉಪಕದನ: ಬಿಜೆಪಿ ಜೊತೆ ಜೆಡಿಎಸ್‌ ಒಳ ಒಪ್ಪಂದ, ಎಚ್‌ಡಿಕೆ ಪ್ರತಿಕ್ರಿಯೆ

ಜೆಡಿಎಸ್‌ ಪಕ್ಷವನ್ನು ಸಮಾಧಿ ಮಾಡುವ ಬಗ್ಗೆ ಕಾಂಗ್ರೆಸ್ಸಿಗರು ಹೇಳಿಕೆ ನೀಡಿದ್ದಾರೆ. ಆ ರೀತಿ ಹೇಳಿಕೆ ನೀಡಿದವರು ಯಾವ ಪಕ್ಷದಿಂದ ಹೋದವರು ಎಂಬುದರ ಬಗ್ಗೆ ಅವಲೋಕಿಸಬೇಕು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿಕೆ ನೀಡಿದವರೇ, ಕುಮಾರಸ್ವಾಮಿ ಅವರನ್ನು ಕರೆದು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಉಪಮುಖ್ಯಮಂತ್ರಿ ಸ್ಥಾನ ಸೇರಿದಂತೆ ಇತರ ಸ್ಥಾನಮಾನವನ್ನು ಯಾವ ಪಕ್ಷದಿಂದ ಅನುಭವಿಸಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಆರ್‌.ಆರ್‌.ನಗರದಲ್ಲಿ ಜೆಡಿಎಸ್‌ ಜಯಗಳಿಸಿದರೂ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ, ಪಕ್ಷದ ಅಸ್ತಿತ್ವದ ಪ್ರಶ್ನೆ ಮತ್ತು ಪ್ರಾದೇಶಿಕ ಪಕ್ಷ ಉಳಿಯಬೇಕು. ಈ ಕಾರಣಕ್ಕಾಗಿ ಜೆಡಿಎಸ್‌ ಗೆಲುವು ಸಾಧಿಸಬೇಕು. ಆರ್‌.ಆರ್‌.ನಗರದಲ್ಲಿ ಜೆಡಿಎಸ್‌ ಬಾವುಟ ಹಾರಿಸಬೇಕು ಎಂದರು.

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16(ಇಂದು) ಕೊನೆಯ ದಿನವಾಗಿದೆ.