ಮುಂದಿನ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ಜೆಡಿಎಸ್ ಮುಖಂಡ ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ಹೇಳಿದ ಮಾತಿಗೆ ಅವರು ಪ್ರತಿಯಾಗಿ ಈ ಮಾತು ಹೇಳಿದ್ದಾರೆ.
ನಾಗಮಂಗಲ (ನ.29): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದರು.
ಪಟ್ಟಣದ ಜೆಡಿಎಸ್ ಪಕ್ಷದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಕ್ಕದಲ್ಲಿ ಶಾಸಕ ಸುರೇಶ್ ಗೌಡ ಕುಳಿತಿರುವಾಗ ಮುಂದಿನ ಚುನಾವಣೆಗೆ ಅವರೇ ಅಭ್ಯರ್ಥಿ ಎನ್ನದೆ ಮತ್ತೇನು ಹೇಳಲು ಸಾಧ್ಯ ಎಂದರು.
ನಿಖಿಲ್ ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೋ ನಾನಂತೂ ಕಾಣೆ. ಅದಕ್ಕೆ ನಾನೂ ಯಾವುದೇ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಆದರೆ, ಮುಂದಿನ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗುವುದು ನಿಜ ಎಂದರು.
ಶಾಸಕ ಸುರೇಶ್‌ಗೌಡರಿಗೆ ಜೆಡಿಎಸ್ ಪಕ್ಷದ ಕಚೇರಿ ನಿರ್ಮಿಸಲು ಶಕ್ತಿಯಿದೆ. ಪಟ್ಟಣದ ಕೋಟೆಬೆಟ್ಟರಸ್ತೆ, ಬಿಂಡಿಗನವಿಲೆ ರಸ್ತೆ, ಬೆಳ್ಳೂರು ರಸ್ತೆ, ಬೋಗಾದಿ ರಸ್ತೆ, ಮೈಸೂರು ರಸ್ತೆ ಸೇರಿದಂತೆ ತಾಲೂಕಿನ ಹಲವೆಡೆ ಪಕ್ಷದ ಕಚೇರಿಗಳನ್ನು ತೆರೆದು ಪಕ್ಷ ಸಂಘಟನೆ ಮಾಡಲಿ ಎಂದು ವ್ಯಂಗ್ಯವಾಡಿದರು.
ತಾಲೂಕಿನಲ್ಲಿ ಭ್ರಷ್ಟಾಚಾರ ಬ್ರಹ್ಮಾಂಡ ರೀತಿಯಲ್ಲಿ ತಾಂಡವವಾಡುತ್ತಿದೆ. ನಾವೇ ಗೆಲ್ಲಿಸಿದ ಶಾಸಕ ಸುರೇಶ್ ಗೌಡರ ಕಾರ್ಯವೈಖರಿಗೆ ನಾವುಗಳೇ ವಿರೋಧ ವ್ಯಕ್ತಪಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರ ತರಿಸಿದೆ ಎಂದು ವಿಷಾದಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್ ವಿಧಾನಸೌಧಕ್ಕೆ ಬಂದಿದ್ನಾ? ಎಚ್‌ಡಿಕೆ ಟಾಂಗ್ ಯಾರಿಗೆ..? ..
ನಾನು ಜಿಪಂ, ವಿಧಾನಸಭೆ, ವಿಧಾನ ಪರಿಷತ್ ಹಾಗೂ ಸಂಸತ್ ಚುನಾವಣೆ ಸೇರಿ ಒಟ್ಟು ಒಂಭತ್ತು ಚುನಾವಣೆಗಳನ್ನು ಎದುರಿಸಿ ನಾಲ್ಕು ಚುನಾವಣೆಗಳಲ್ಲಿ ಗೆದ್ದು ಐದು ಚುನಾವಣೆಯಲ್ಲಿ ಸೋತಿದ್ದೇನೆ. ಆದರೂ ಇಂದಿಗೂ ಸಹ ಜನರ ನಡುವೆ ಇದ್ದುಕೊಂಡು ಜನಸೇವೆ ಮಾಡುತ್ತಿದ್ದೇನೆ ಎಂದರು.
ನನಗೆ ಎಲ್ಲ ಪಕ್ಷಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಅವರುಗಳು ನನ್ನ ಸೇವೆಯನ್ನು ಬಳಸಿಕೊಳ್ಳಬಹುದು. ಇನ್ನು ಮುಂದೆ ತಾಲೂಕಿನ ಪ್ರತಿ ಹಳ್ಳಿಗೂ ಹೋಗಿ ಸಂಘಟನೆ ಮಾಡುತ್ತೇನೆ. ನನ್ನೊಂದಿಗೆ ಇಂದು ಯುವಪಡೆ ಇಲ್ಲದಿರಬಹುದು. ಆದರೆ, ಅವರ ನಾಡಿಮಿಡಿತ ಮತ್ತು ಕುಟುಂಬದ ಹಿನ್ನೆಲೆ ಹಾಗೂ ಹಿರಿಯರ ಪರಿಚಯ ನನಗಿದೆ. ಅದನ್ನೇ ಬಳಸಿಕೊಂಡು ಮುಂದಿನ ಚುನಾವಣೆ ಎದುರಿಸುತ್ತೇನೆ ಎಂದರು.
ಈ ವೇಳೆ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ವಕೀಲ ಟಿ.ಕೆ.ರಾಮೇಗೌಡ, ಪುರಸಭೆ ಮಾಜಿ ಸದಸ್ಯ ಲಾರಿಚನ್ನಪ್ಪ ಇದ್ದರು.
