Asianet Suvarna News Asianet Suvarna News

Mandya : 2023ರ ಚುನಾವಣೆಗೆ ನನ್ನ ಸ್ಪರ್ಧೆ ಶತಸಿದ್ಧ

ಹಾಲಿ ಮತ್ತು ಮಾಜಿ ಶಾಸಕರ ಕಿರುಕುಳದಿಂದ ಬೇಸತ್ತು ರಾಜಕೀಯ ಕ್ಷೇತ್ರ ಪ್ರವೇಶ ಮಾಡಿ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಶತಸಿದ್ಧ ಎಂದು ಸಮಾಜ ಸೇವಕ ಮಲ್ಲಿಕಾರ್ಜುನ್‌ (ಫೈಟರ್‌ ರವಿ) ಘೋಷಣೆ ಮೊಳಗಿಸಿದರು.

I will contest in Next 2023 Election says fighter Ravi snr
Author
First Published Oct 24, 2022, 5:05 AM IST

 ನಾಗಮಂಗಲ (ಅ.24):  ಹಾಲಿ ಮತ್ತು ಮಾಜಿ ಶಾಸಕರ ಕಿರುಕುಳದಿಂದ ಬೇಸತ್ತು ರಾಜಕೀಯ ಕ್ಷೇತ್ರ ಪ್ರವೇಶ ಮಾಡಿ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಶತಸಿದ್ಧ ಎಂದು ಸಮಾಜ ಸೇವಕ ಮಲ್ಲಿಕಾರ್ಜುನ್‌ (ಫೈಟರ್‌ ರವಿ) ಘೋಷಣೆ ಮೊಳಗಿಸಿದರು.

ತಾಲೂಕಿನ ದೇವಲಾಪುರದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ (Health)  ಮತ್ತು ನೇತ್ರ ತಪಾಸಣಾ ಶಿಬಿರದ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಾಡುತ್ತಿರುವ ಸಮಾಜ (Social Service) ಸೇವೆಗೆ ಶಾಸಕ ಸುರೇಶ್‌ಗೌಡ, ಮಾಜಿ ಶಾಸಕ ಚಲುವರಾಯಸ್ವಾಮಿ ಅವರಿಂದ ತೀವ್ರ ಅಡ್ಡಿಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಇವರ ಕಿರುಕುಳದಿಂದ ಬೇಸತ್ತು ಅನಿವಾರ್ಯವಾಗಿ ರಾಜಕೀಯ ಕ್ಷೇತ್ರ ಪ್ರವೇಶ ಮಾಡಬೇಕಿದೆ ಎಂದರು.

ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಜೊತೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮೂಲ ಸೌಕರ್ಯಗಳಿಲ್ಲದೆ ಗ್ರಾಮೀಣ ಪ್ರದೇಶದ ಜನರು ಪರದಾಡುತ್ತಿದ್ದಾರೆ. ತಾಲೂಕಿನ ಜನರ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ನಾನು ಸಮಾಜ ಸೇವೆ ಮಾಡುವುದಕ್ಕೂ ಹಾಲಿ ಮತ್ತು ಮಾಜಿ ಶಾಸಕರಿಂದ ಅಡಚಣೆಯಾಗುತ್ತಿರುವುದನ್ನು ತಿಳಿದು ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ ತಿಳಿಸಿದರು.

ತಾಲೂಕಿನಲ್ಲಿ ಕಂದಾಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿಯೂ ಸಹ ಭ್ರಷ್ಟಾಚಾರ ಮಿತಿಮೀರಿದೆ. ರೈತರು ಶೋಷಣೆಗೊಳಗಾಗುತ್ತಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿ ದೌರ್ಜನ್ಯ ದಬ್ಬಾಳಿಕೆ ಹೆಚ್ಚಾಗಿವೆ. ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕಿರುವ ಪೊಲೀಸ್‌ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ. ನಿಜವಾದ ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ದೂರಿದರು.

ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ. ಶಾಸಕ ಸುರೇಶ್‌ಗೌಡರ ವೈಫಲ್ಯದಿಂದಾಗಿ ಇಡೀ ತಾಲೂಕಿನ ಎಲ್ಲ ಅಧಿಕಾರಿ ವರ್ಗಕ್ಕೆ ಯಾವುದೇ ನಿಯಂತ್ರಣವಿಲ್ಲದಂತಾಗಿದೆ. ಶಾಸಕರು ತಮ್ಮ ಹಿಂಬಾಲಕರಿಗಷ್ಟೇ ಜಮೀನು ಮಂಜೂರು ಮಾಡಿಸಿಕೊಡುವ ಮೂಲಕ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.

ಹುಟ್ಟಿದ ಮಣ್ಣಿನ ಋುಣ ತೀರಿಸಬೇಕೆಂಬ ಉದ್ದೇಶದಿಂದ ನಾನು ಸಮಾಜ ಸೇವೆ ಮಾಡಲು ತಾಲೂಕಿಗೆ ಬಂದೆ. ನಾನು ಮಾಡುತ್ತಿರುವ ಸಮಾಜ ಸೇವೆಯು ಶಾಸಕ ಸುರೇಶ್‌ಗೌಡ ಮತ್ತು ಮಾಜಿ ಶಾಸಕ ಚಲುವರಾಯಸ್ವಾಮಿ ಅವರಿಗೆ ಇಷ್ಟವಿಲ್ಲ. ಅದಕ್ಕಾಗಿಯೇ ನನ್ನ ಬೆಂಬಲಿಗರಿಗೆ ತೊಂದರೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಾಗಮಂಗಲ ಪುರಸಭೆಯಿಂದ ನಿರ್ಮಿಸಿರುವ ಸೂಪರ್‌ ಮಾರ್ಕೆಟ್‌ ವಾಣಿಜ್ಯ ಕಟ್ಟಡದ ಮಳಿಗೆಗಳ ಬಾಡಿಗೆ ಹರಾಜು ಟೆಂಡರ್‌ ಪ್ರಕ್ರಿಯೆ ಮುಗಿದು ನಾಲ್ಕæ ೖದು ತಿಂಗಳು ಕಳೆದರೂ ಈವರೆಗೂ ಯಾವೊಬ್ಬ ಫಲಾನುಭವಿಗಳಿಗೂ ಅಂಗಡಿ ಮಳಿಗೆಗಳನ್ನು ಹಸ್ತಾಂತರಿಸಿಲ್ಲ. ಇದಕ್ಕೆ ಕಾರಣ ಏನೆಂಬುದು ತಿಳಿಯುತ್ತಿಲ್ಲ ಎಂದರು.

ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡಿರುವ ನೂರಾರು ಕೋಟಿ ರು.ಗಳ ಕಾಮಗಾರಿ ಟೆಂಡರನ್ನು ಶಾಸಕ ಸುರೇಶ್‌ಗೌಡ ದೌರ್ಜನ್ಯ ದಬ್ಬಾಳಿಕೆ ನಡೆಸಿ ತಮ್ಮ ಇಬ್ಬರು ಬೆಂಬಲಿಗ ಗುತ್ತಿಗೆದಾರರ ಹೆಸರಿಗೆ ನಿಲ್ಲಿಸ್ಟಿದ್ದಾರೆ. ಇದರಿಂದ ಬೇರೆ ಗುತ್ತಿಗೆದಾರರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ನಾನು ಯಾವುದೇ ರಾಜಕೀಯ ಪಕ್ಷಗಳಲ್ಲಿ ಸದಸ್ಯತ್ವ ಹೊಂದಿಲ್ಲವಾದರೂ ಜೆಡಿಎಸ್‌ ವರಿಷ್ಠರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ನನಗೆ ಅಪಾರ ನಂಬಿಕೆ ಮತ್ತು ಗೌರವವಿದೆ. ಅವರು ಹೇಳಿದರೆಂಬ ಕಾರಣಕ್ಕೆ ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಸುರೇಶ್‌ಗೌಡರಿಗೆ ಎಲ್ಲ ರೀತಿಯಲ್ಲಿಯೂ ಸಹಾಯ ಮಾಡಿದೆ ಎಂದರು.

ಸುರೇಶ್‌ಗೌಡ ಒಬ್ಬ ನಂಬಿಕೆ ದ್ರೋಹಿ, ಮೋಸಗಾರ. ನಾನು ಕೊಟ್ಟಸಾಲದ ಹಣವನ್ನು ಈವರೆಗೂ ವಾಪಸ್‌ ನೀಡಿಲ್ಲ. ಹಣ ಮತ್ತು ಆಸ್ತಿ ವಿಚಾರದಲ್ಲಿ ಶಾಸಕ ಸುರೇಶ್‌ಗೌಡ ನನಗೆ ಬಹಳ ಮೋಸ ಮಾಡಿದ್ದಾರೆ. ಹಾಗಾಗಿ ನಾನು ಸುರೇಶ್‌ಗೌಡ ವಿರುದ್ಧ ಹೋರಾಟ ಮಾಡುತ್ತೇನೆ ಎಂದರು.

ಕಳೆದ ಮೂರು ಚುನಾವಣೆಗಳಲ್ಲಿ ಸುರೇಶ್‌ಗೌಡಗೆ ಸಹಾಯ ಮಾಡಿದೆ ಎಂಬ ಕಾರಣಕ್ಕೆ ಮಾಜಿ ಶಾಸಕ ಚಲುವರಾಯಸ್ವಾಮಿ ನನ್ನ ವಿರುದ್ಧ 15 ಸುಳ್ಳು ಕೇಸ್‌ಗಳನ್ನು ಹಾಕಿಸಿದ್ದರು. ಅವೆಲ್ಲವೂ ರಾಜ್ಯ ಉಚ್ಛನ್ಯಾಯಾಲಯದಲ್ಲಿ ವಜಾಗೊಂಡಿವೆ ಎಂದರು.

ನನಗೆ ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರೊಂದಿಗೆ ಉತ್ತಮ ಸ್ನೇಹ ವಿಶ್ವಾಸವಿದೆ. ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ಪಕ್ಷದ ನಾಯಕರನ್ನು ಭೇಟಿಯಾಗಿದ್ದು ನಿಜ. ಅದೊಂದು ಸೌಜನ್ಯದ ಭೇಟಿ ಅಷ್ಟೆರಾಜಕೀಯವಾಗಿ ಯಾವುದೇ ಚರ್ಚೆ ನಡೆಸಿಲ್ಲ ಎಂದರು.

ಹಾಲಿ ಶಾಸಕ ಸುರೇಶ್‌ಗೌಡರನ್ನು ಬಿಟ್ಟು ಬೇರೆ ಯಾರಿಗಾದರೂ ಟಿಕೆಚ್‌ ಕೊಟ್ಟರೆ ಮಾತ್ರ ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸಬಹುದು. ಇಲ್ಲವೇ ನಾನೇ ಅಭ್ಯರ್ಥಿಯಾಗಬೇಕೆಂದುಕೊಂಡಿದ್ದೇನೆ. ನನಗೆ ಜೆಡಿಎಸ್‌ ಸೇರಿದಂತೆ ಯಾವುದೇ ಪಕ್ಷದ ಟಿಕೆಟ್‌ ಕೊಟ್ಟರೂ ಚುನಾವಣೆ ಎದುರಿಸುತ್ತೇನೆ. ಇಲ್ಲವಾದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಶ್ಚಿತ ಎಂದು ಸ್ಪಷ್ಟಪಡಿಸಿದರು.

ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ನವ ನಾಗಮಂಗಲ ಕಟ್ಟಬೇಕಿದೆ. ಈವರೆಗೆ ಆಡಳಿತ ನಡೆಸಿರುವ ಜನಪ್ರತಿನಿಧಿಗಳು ಜನರಿಗೆ ಯಾವರೀತಿ ಮೋಸ ಮಾಡಿದ್ದಾರೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತೇನೆ. ತಾಲೂಕಿನ ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಚುನಾವಣೆ ಎಂದ ಮೇಲೆ ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ನನಗೆ ಕ್ಷೇತ್ರದ ಮತದಾರರು ಮೋಸಮಾಡುವುದಿಲ್ಲವೆಂಬ ನಂಬಿಕೆಯಿದೆ ಎಂದು ವಿಶ್ವಾವ್ಯಕ್ತಪಡಿಸಿದರು.

Follow Us:
Download App:
  • android
  • ios