ಗ್ರಾಮಾಂತರಕ್ಕೆ ನಾನೆಂದೂ ದ್ವೇಷ, ಜಾತಿ ರಾಜಕಾರಣ ಮಾಡಿಲ್ಲ: ಶಾಸಕ ಸಾ.ರಾ.ಮಹೇಶ್
ಕಳೆದ 14 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಎಂದಿಗೂ ದ್ವೇಷ ಮತ್ತು ಜಾತಿ ರಾಜಕಾರಣ ಮಾಡಿಲ್ಲ. ಜತೆಗೆ ಭ್ರಷ್ಟಾಚಾರಕ್ಕೂ ಅವಕಾಶ ಮಾಡಿಕೊಟ್ಟಿಲ್ಲ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಕೆ.ಆರ್. ನಗರ (ಅ.09): ಕಳೆದ 14 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಎಂದಿಗೂ ದ್ವೇಷ ಮತ್ತು ಜಾತಿ ರಾಜಕಾರಣ ಮಾಡಿಲ್ಲ. ಜತೆಗೆ ಭ್ರಷ್ಟಾಚಾರಕ್ಕೂ ಅವಕಾಶ ಮಾಡಿಕೊಟ್ಟಿಲ್ಲ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಸಾಲಿಗ್ರಾಮ ತಾಲೂಕು ಶ್ರೀರಾಮಪುರ ಗ್ರಾಮದಲ್ಲಿ ಬಸವೇಶ್ವರ ದೇವಾಲಯ (Temple) ಕಾಮಗಾರಿಗೆ ಚಾಲನೆ, ಗ್ರಾಮ ಪರಿಮಿತಿ ರಸ್ತೆ (Road) ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾತನಾಡಿದರು.
ನನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ (Govt) ಅಗತ್ಯ ಅನುದಾನ ತರುವುದರೊಂದಿಗೆ ವೈಯಕ್ತಿಕವಾಗಿಯೂ ಸಾಧ್ಯವಾದಷ್ಟುಸೇವೆ ಮಾಡಿದ್ದು ಇದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಅವರು ತಿಳಿಸಿದರು.
ಅಧಿಕಾರ ಎಂದಿಗೂ ಶಾಶ್ವತವಲ್ಲ ಆದರೆ ನಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ನೊಂದವರು ಮತ್ತು ಹಿಂದುಳಿದವರ ನೆರವಿಗೆ ಬರುವುದು ಎಲ್ಲರ ಕರ್ತವ್ಯ. ಇದನ್ನು ಪ್ರತಿಯೊಬ್ಬ ಚುನಾಯಿತ ಜನಪ್ರತಿನಿಧಿಯು ಮನಗೊಂಡು ಕೆಲಸ ನಿರ್ವಹಿಸಿದರೆ ಸಮಾನತೆಯ ಸಮಾಜ ನಿರ್ಮಾಣ ಮಾಡಬಹುದು ಎಂದರು.
ಮತದಾರರು ನಮ್ಮನ್ನು ಚುನಾಯಿಸುವುದು ಜನರ ಸಂಕಷ್ಟಪರಿಹರಿಸಿ ಕ್ಷೇತ್ರದ ಅಭಿವೃದ್ಧಿ ಮಾಡುವುದಕ್ಕಾಗಿಯೇ ಹೊರತು ತಮ್ಮ ಹಿಂಬಾಲಕರನ್ನು ಬೆಳೆಸುವುದಕ್ಕಾಗಿ ಅಲ್ಲ. ಆದ್ದರಿಂದ ನನ್ನ ಅಧಿಕಾರದ ಅವಧಿಯಲ್ಲಿ ಇಂತಹ ಯಾವುದೇ ಸ್ವಾರ್ಥ ಕೆಲಸವನ್ನೂ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಾನು ಮಾಡುತ್ತಿರುವ ಅಭಿವೃದ್ಧಿ ಪರವಾದ ಕೆಲಸ ಮತ್ತು ಜನ ಸೇವೆಯನ್ನು ಮೆಚ್ಚಿ ಕ್ಷೇತ್ರದ ಮತದಾರರು ಸತತವಾಗಿ 3 ಬಾರಿ ಆಯ್ಕೆ ಮಾಡಿದ್ದು ಅವರ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಅವರು ಭರವಸೆ ನೀಡಿದರು.
ಈ ವೇಳೆ ಗ್ರಾಮದ ಪರವಾಗಿ ಶಾಸಕ ಸಾ.ರಾ. ಮಹೇಶ್ ಮತ್ತು ಅವರ ಪತ್ನಿ ಅನಿತಾ ಸಾ.ರಾ. ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯ ಅಭಿಷೇಕ್, ಯುವ ಮುಖಂಡರಾದ ಪ್ರಸಾದ್, ಸಿದ್ದಾಪುರ ಗ್ರಾಪಂ ಅಧ್ಯಕ್ಷ ತ್ಯಾಗರಾಜು, ಸದಸ್ಯೆ ಉಮಾ ಸೋಮಶೇಖರ್, ಗ್ರಾಮದ ಮುಖಂಡರಾದ ಭೋಜೇಗೌಡ, ಕರೀಗೌಡ, ಜಯರಾಮೇಗೌಡ, ಪ್ರಸನ್ನಕುಮಾರ್, ಸಣ್ಣರಾಮೇಗೌಡ, ಸುರೇಶ್, ಆನಂದ್, ಭಾಸ್ಕರ್, ಲೋಕೇಶ್, ತಹಸೀಲ್ದಾರ್ ಎಸ್. ಸಂತೋಷ್, ತಾಪಂ ಇಒ ಎಚ್.ಕೆ. ಸತೀಶ್, ಪಂಚಾಯತ್ ರಾಜ್ ಇಲಾಖೆ ಎಇ ಓಂಕಾರ್, ಸಿದ್ಧಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್. ಹರಿಚಿದಂಬರ, ಸಿದ್ದಾಪುರ ಗ್ರಾಪಂ ಪಿಡಿಒ ಶಿವಕುಮಾರ್ ಇದ್ದರು.
ಆಡಳಿತದ ಹಿತಕ್ಕೆ ಹೋಟೆಲ್ ವಾಸ
ನಮ್ಮವರು ಹೋಟೆಲ್‌ನಲ್ಲಿ ಇರುತ್ತಿದ್ದರು. ಹಾಗಾದರೇ ನಿಮ್ಮವರು ಗುಡಿಸಿಲಿನಲ್ಲಿ ಇದ್ದರಾ ಎಂದು ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರನ್ನು ಪ್ರಶ್ನಿಸಿದರು. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೋಟೆಲ್‌ನಲ್ಲಿ ಇದ್ದುಕೊಂಡು ಆಡಳಿತ ನಡೆಸುತ್ತಿದ್ದರು ಎಂಬ ಡಾ. ಅಶ್ವತ್ಥನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಾಂಬೆಯಲ್ಲಿ ಇದ್ದವರು ಗುಡಿಸಿಲಿನಲ್ಲಿ ಇದ್ದರಾ? ಅವರನ್ನೆಲ್ಲ ಬಾಂಬೆಯಲ್ಲಿ ಗುಡಿಸಿಲಿನಲ್ಲಿ ಇರಿಸಿದ್ರಾ? ಎಂದು ಕಿಡಿಕಾರಿದದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಿಎಂ ಅಧಿಕೃತ ನಿವಾಸ ಖಾಲಿ ಇರಲಿಲ್ಲ. ಹೀಗಾಗಿ ಕುಮಾರಸ್ವಾಮಿ ಮಧ್ಯಾಹ್ನದ ವೇಳೆ ವಿಧಾನಸೌಧಕ್ಕೆ ಸನಿಹದಲ್ಲಿದ್ದ ಖಾಸಗಿ ಹೋಟೆಲ್‌ನಲ್ಲಿ ಊಟಕ್ಕೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರು. ಆಡಳಿತದ ಹಿತದೃಷ್ಟಿಯಿಂದ ಕುಮಾರಸ್ವಾಮಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ, ಇದೇ ವಿಚಾರ ಮುಂದಿಟ್ಟುಕೊಂಡು ಸಚಿವರು ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.
ಮಿಸ್ಟರ್ ಬ್ಲಾಕ್‌ಮೇಲರ್, ಅದೇನೋ ಬಿಚ್ಚಿಡ್ತಿಯೋ ಬಿಚ್ಚಿಡಪ್ಪ: ಎಚ್‌ಡಿಕೆಗೆ ಅಶ್ವತ್ಥನಾರಾಯಣ ಸವಾಲ್
ಅಶ್ವತ್ಥನಾರಾಯಣ ಒಳ್ಳೆಯ ಸ್ನೇಹಿತ. ನಾನೂ ಬಿಜೆಪಿಯಲ್ಲಿ ಇದ್ದವನು. ರಾಜ್ಯ, ರಾಷ್ಟ್ರೀಯ ನಾಯಕರು ಬಂದರೂ ಕಾರ್ಯಕರ್ತನ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ನಮ್ಮದು ಸಮ್ಮಿಶ್ರ ಸರ್ಕಾರ ಇತ್ತು. ಆಗಿನ ಮಾಜಿ ಮುಖ್ಯಮಂತ್ರಿ ಮನೆ ಖಾಲಿ ಮಾಡಿರಲಿಲ್ಲ. ಕುಮಾರಸ್ವಾಮಿ ಅವರ ಮನೆ ಜೆ.ಪಿ. ನಗರದಲ್ಲಿದೆ. ಹೀಗಾಗಿ, ಅವರು ಹೋಟೆಲ್‌ನಲ್ಲಿದ್ದರು. ನಮ್ಮಲ್ಲೂ ಮಾತನಾಡುವವರು ಇದ್ದಾರೆ. ದೇವೇಗೌಡರು ಇತಿಮಿತಿಯಲ್ಲಿ ಮಾತನಾಡಿ ಎಂದು ಹೇಳಿದ್ದಾರೆ ಎಂದರು.