ನಾನು ಅಲೆಮಾರಿಯಲ್ಲ ಸ್ವಾಭಿಮಾನಿ. ನನ್ನನ್ನು ಜನ ಅಲೆಮಾರಿ ಎನ್ನುವುದಿಲ್ಲ ಸ್ವಾಭಿಮಾನದ ಚಕ್ರವರ್ತಿ, ರಾಜಕೀಯ ಮುತ್ಸದ್ದಿ ಎನ್ನುತ್ತಾರೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್‌ ಅವರು ತಮ್ಮದೇ ಪಕ್ಷದ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರ ಆರೋಪಗಳಿಗೆ ತಿರುಗೇಟು ನೀಡಿದರು.

ಮೈಸೂರು: (ಡಿ.17): ನಾನು ಅಲೆಮಾರಿಯಲ್ಲ ಸ್ವಾಭಿಮಾನಿ. ನನ್ನನ್ನು ಜನ ಅಲೆಮಾರಿ ಎನ್ನುವುದಿಲ್ಲ ಸ್ವಾಭಿಮಾನದ ಚಕ್ರವರ್ತಿ, ರಾಜಕೀಯ ಮುತ್ಸದ್ದಿ ಎನ್ನುತ್ತಾರೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್‌ ಅವರು ತಮ್ಮದೇ ಪಕ್ಷದ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರ ಆರೋಪಗಳಿಗೆ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಎಚ್‌.ವಿಶ್ವನಾಥ್‌ ( H Vishwanath) ಅವರೊಬ್ಬರನ್ನು ಅಲೆಮಾರಿ ಎಂದು ಹೇಳಿಲ್ಲ. ನಾನು ಸಿದ್ದರಾಮಯ್ಯನವರನ್ನು ಅಲೆಮಾರಿ ಎಂದು ಹೇಳಿದ್ದೇನೆ. ಶಾಸಕ (MLA) , ಸಚಿವ, ವಿಪಕ್ಷ ನಾಯಕ, ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರದಿಂದ ಕ್ಷೇತ್ರಕ್ಕೆ ಅಲೆದಾಡುತ್ತಿರುವುದಕ್ಕೆ ಅಲೆಮಾರಿ ಎಂದು ಹೇಳಿದ್ದೇನೆ. ಬಾದಾಮಿ ಅಂತಾರೇ, ಕೋಲಾರ ಅಂತಾರೇ, ಯಾಕೆ ಹೀಗೆ ಎಂದು ನಾನು ಹೇಳಿದ್ದೆ. ವಿಶ್ವನಾಥ್‌ಗೂ ನಾನು ಅಲೆಮಾರಿ ರೀತಿ ಮಾತನಾಡುತ್ತಾರೆ ಎಂದು ಹೇಳಿದ್ದೆ ಎಂದರು.

ನನ್ನ ಸಂಸತ್‌ ಸ್ಥಾನದ ಅವಧಿ ಒಂದೂವರೆ ವರ್ಷ ಬಾಕಿಯಿದೆ. ನನ್ನ ಅವಧಿ ಮುಗಿಯುವ ವೇಳೆಗೆ ನಾನು ರಾಜಕೀಯಕ್ಕೆ ಬಂದು 50 ವರ್ಷವಾಗಲಿದೆ. ನಾನು ಇದುವರೆಗೂ 14 ಚುನಾವಣೆಗಳನ್ನು ಎದುರಿಸಿದ್ದೇನೆ. ರಾಜಕೀಯವಾಗಿ ಏಳು ಬೀಳುಗಳನ್ನು ಕಂಡಿದ್ದೇನೆ ಎಂದು ಅವರು ತಮ್ಮ ರಾಜಕೀಯ ಜೀವನದ ಸುಧೀರ್ಘ ಅವಧಿಯನ್ನು ಎಳೆ ಎಳೆಯಾಗಿ ವಿವರಿಸಿದರು.

ನಾನು ಬೇಕಂತಾ ಪಕ್ಷಾಂತರ ಮಾಡಿಲ್ಲ. ಅನಿವಾರ್ಯ ಕಾರಣಗಳಿಂದಾಗಿ ಬೇರೆ ಬೇರೆ ಪಕ್ಷಗಳಿಗೆ ಹೋಗಬೇಕಾಯಿತು. ರಾಜಕೀಯ ಬೆಳವಣಿಗೆಗೆ ತಕ್ಕಂತೆ ಪಕ್ಷಾಂತರ ಮಾಡಬೇಕಾಯಿತು. ವಿಶ್ವನಾಥ್‌ ನಿಮ್ಮನ್ನು ಬೆಳೆಸಿದ್ದು ದೇವರಾಜ ಅರಸರು. ಆದರೆ, ರಾತ್ರೋರಾತ್ರಿ ನೀವು, ಮಲ್ಲಿಕಾರ್ಜುನ ಖರ್ಗೆಯವರು ದೇವರಾಜ ಅರಸರ ಸಂಸ್ಥಾ ಕಾಂಗ್ರೆಸ್‌ ತೊರೆದು ಇಂದಿರಾ ಕಾಂಗ್ರೆಸ್‌ಗೆ ಸೇರಿದ್ರೀ. ಆ ಮೂಲಕ ನಿಮ್ಮನ್ನು ಬೆಳೆಸಿದ ಅರಸುರವರ ಬೆನ್ನಿಗೆ ಚೂರಿ ಹಾಕಿದ್ರೀ ಎಂದು ಕುಟುಕಿದರು.

ವಿಶ್ವನಾಥ್‌ನಂತಹ ಮೂರ್ಖ ಮತ್ತೊಬ್ಬನಿಲ್ಲ. ನಿನಗೆ ನಾನು ಮಾಡಿದ ಸಹಾಯ ಮರೆತು ಹೋಯಿತಾ ವಿಶ್ವನಾಥ್‌?, ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲುವಿಗೆ ನಾನು ಶ್ರಮಿಸಲಿಲ್ಲವೇ?, 2013 ಚುನಾವಣೆಯಲ್ಲಿ ನನಗೆ ನಂಜನಗೂಡು ಟಿಕೆಟ್‌ ಕೊಡಿ ಎಂದು ದುಂಬಾಲು ಬಿದ್ದಿರಲಿಲ್ಲ. ಆದರೂ ನನಗೆ ಟಿಕೆಟ್‌ ಕೊಟ್ಟರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ನಾನು ಕಾಂಗ್ರೆಸ್‌ ಗೆಲ್ಲಿಸಲಿಲ್ಲವೇ?. ಆದರೆ, ನನಗೆ ಆಮೇಲೆ ಏನು ಮಾಡಿದ್ರು ಎಂದು ಅವರು ಹರಿಹಾಯ್ದರು.

ವಿಶ್ವನಾಥ್‌ಗೆ ಹಲವು ಪ್ರಶ್ನೆ: ನಿನ್ನನ್ನು ರಾಜಕೀಯವಾಗಿ ಮೇಲೆತ್ತಲು ಏನೆಲ್ಲಾ ನೆರವು ನೀಡಿದೆ ಎಂದು ನಿನಗೆ ಗೊತ್ತಿಲ್ಲವೇ ವಿಶ್ವನಾಥ್‌?, 1984ರ ಚುನಾವಣೆಯಲ್ಲಿ ನೀನು ಸೋತಾಗ ನಿನ್ನ ಸ್ಥಿತಿ ಏನಾಗಿತ್ತು?, 1989ರ ಚುನಾವಣೆಯಲ್ಲಿ ಮತ್ತೆ ನೀನು ಗೆದ್ದಾಗ ದೊಡ್ಡವರ ಬಳಿ ನಾನು ಕೈಮುಗಿದು ನಿನ್ನನ್ನು ಮಂತ್ರಿ ಮಾಡುವಂತೆ ಕೇಳಿಕೊಂಡಿದ್ದು ನಿನಗೆ ನೆನಪಿಲ್ಲವೇ?, ಆಗ ನಿನ್ನನ್ನು ಮಂತ್ರಿ ಮಾಡಿದ್ದು ಯಾರು ಎಂದು ಅವರು ಎಚ್‌. ವಿಶ್ವನಾಥ್‌ ಅವರಿಗೆ ಪ್ರಶ್ನೆಗಳ ಸುರಿಮಳೆಗರೆದರು.

ಎಚ್‌.ವಿಶ್ವನಾಥ್‌ದು ಅತ್ಯಂತ ಕೊಳಕು ರಾಜಕಾರಣ. ವಿಶ್ವನಾಥ್‌ ಕಾಂಗ್ರೆಸ್‌ ಬಿಟ್ಟಿದ್ದು ಹಣಕ್ಕಾಗಿ. ಸಿದ್ದರಾಮಯ್ಯ ಬಳಿ ವಿಶ್ವನಾಥ್‌ ಹಣ, ಅಧಿಕಾರ ಕೇಳಿದಾಗ ಕೊಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್‌ ಬಿಟ್ಟರು. ಜೆಡಿಎಸ್‌ಗೆ ಹೋದಾಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೆ.ಆರ್‌.ನಗರದ ಒಂದು ವಾರ್ಡ್‌ನ ಟಿಕೆಟ್‌ ಕೊಡಿಸಲಾಗದೇ ಅಸಹಾಯಕರಾಗಿದ್ದರು. ಹೀಗಾಗಿ ಬಿಜೆಪಿಗೆ ಬರುತ್ತೇನೆಂದು ನನ್ನ ಮನೆಗೆ ಬಂದು ವಿಶ್ವನಾಥ್‌ ದುಂಬಾಲು ಬಿದ್ದಿದ್ದ ಎಂದರು.

ಯಡಿಯೂರಪ್ಪ ನೀವು ಕುಳಿತು ಮಾತನಾಡಿಕೊಳ್ಳಿ ಎಂದು ಹೇಳಿದ್ದೆ. ನನ್ನ ಸಮ್ಮುಖದಲ್ಲಿ ವಿಶ್ವನಾಥ್‌ಗೆ ಯಾರು ಕೂಡ ಹಣ ಕೊಟ್ಟಿಲ್ಲ. ಆದರೆ, ಬಿಜೆಪಿ ಸೇರ್ಪಡೆ ಆದ ಬಳಿಕವೂ ಚುನಾವಣೆಗೆ ನಿಲ್ಲಬೇಡಿ ನಿಮ್ಮನ್ನು ಎಂಎಲ್ಸಿ ಮಾಡ್ತೇವೆಂದು ಹೇಳಿದರೂ ಕೇಳಲಿಲ್ಲ. ಚುನಾವಣೆಗೆ ನಿಂತು ಸೋತರು ಎಂದರು.