ಮೈಸೂರು(ಫೆ.21):  ನಾನು ಹುಟ್ಟೂರಿನಲ್ಲಿ(ಸಿದ್ದರಾಮನಹುಂಡಿ) ರಾಮಮಂದಿರ ಕಟ್ಟಿಸುತ್ತಿದ್ದೇನೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಸಹ ಇದಕ್ಕೆ ವಂತಿಗೆ ನೀಡುತ್ತಿದ್ದಾರೆ. ರಾಮ, ಜನರ ಧಾರ್ಮಿಕ ನಂಬಿಕೆ. ಎಲ್ಲಾ ಕಡೆ ರಾಮಮಂದಿರ ಕಟ್ಟುತ್ತಾರೆ, ಅದರಲ್ಲೇನಿದೆ. ದೇವರು ಅನ್ನೋದು ಜನರಿಗೆ ಭಯ ಭಕ್ತಿಯ ಸಂಕೇತ. ಇದನ್ನು ಅವರು ರಾಜಕಾರಣಕ್ಕೆ ಬಳಸುತ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಅಂದಾಜು 45 ಲಕ್ಷ ವೆಚ್ಚ:

ಸಿದ್ದರಾಮನಹುಂಡಿಯಲ್ಲಿದ್ದ  ಹಳೆಯ ಕಾಲದ ರಾಮಮಂದಿರವನ್ನು ಜೀರ್ಣೋದ್ಧಾರಗೊಳಿಸಲಾಗುತ್ತಿದ್ದು, ನೂತನವಾಗಿ ಮಂದಿರ ನಿರ್ಮಿಸಲಾಗುತ್ತಿದೆ. ಈ ಕಾರ್ಯಕ್ಕೆ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ಸಹ ಕೈಜೋಡಿಸಿದ್ದು, ಅಗತ್ಯ ನೆರವು ನೀಡುತ್ತಿದ್ದಾರೆ. ಸುಮಾರು 45 ಲಕ್ಷ ವೆಚ್ಚದಲ್ಲಿ, 120 ಅಡಿ ಉದ್ದ, 45 ಅಡಿ ಅಗಲದ ಜಾಗದಲ್ಲಿ 40 60 ವಿಸ್ತೀರ್ಣದಲ್ಲಿ ಮಂದಿರ ನಿರ್ಮಿಸಲಾಗುತ್ತಿದೆ. 2 ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು, ಏಪ್ರಿಲ್‌ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಸಿದ್ದು ಸಹೋದರನಿಂದ ರಾಮಮಂದಿರಕ್ಕೆ 10ರು. ದೇಣಿಗೆ

ಲೆಕ್ಕ ಕೇಳುವ ಅಧಿಕಾರ ನನಗಿದೆ

ಜನರು ದೇಣಿಗೆ ನೀಡುತ್ತಿರುವುದು ರಾಮ ಮಂದಿರಕ್ಕಾಗಿಯೇ ಹೊರತು ಬಿಜೆಪಿಗಾಗಿ ಅಲ್ಲ. ಲೆಕ್ಕ ಕೇಳುವ ಅಧಿಕಾರ ನನಗೂ ಇದೆ. ನಾನು ಈ ದೇಶದ ಪ್ರಜೆ. ನಾನು ದುಡ್ಡು ಕೊಡಲಿ, ಬಿಡಲಿ ಲೆಕ್ಕ ಕೊಡಬೇಕಾಗಿರುವುದು ಅವರ ಕೆಲಸ. ಕೇಳುವುದು ನಮ್ಮ ಹಕ್ಕು. ಲೆಕ್ಕ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದರೆ ಅದರ ಅರ್ಥ ಹಣ ದುರುಪಯೋಗವಾಗುತ್ತಿದೆ ಎಂದಷ್ಟೆ. ಈ ಹಿಂದೆಯೂ ಇವರು ದೇಣಿಗೆ ಸಂಗ್ರಹಿಸಿ ಲೆಕ್ಕ ಕೊಟ್ಟಿಲ್ಲ. ಇದರ ಅರ್ಥ ಏನು ಅವರೇ ಹೇಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.