ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದಲ್ಲಿ ನಾನು ಜಾತಿ ರಾಜಕಾರಣಕ್ಕೆ ಸೀಮಿತವಾಗದೆ ಜಾತ್ಯತೀತ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದು ಶಾಸಕ ಸಾ.ರಾ. ಮಹೇಶ್‌ ತಿಳಿಸಿದರು.

 ಸಾಲಿಗ್ರಾಮ (ಜ.01): ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದಲ್ಲಿ ನಾನು ಜಾತಿ ರಾಜಕಾರಣಕ್ಕೆ ಸೀಮಿತವಾಗದೆ ಜಾತ್ಯತೀತ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದು ಶಾಸಕ ಸಾ.ರಾ. ಮಹೇಶ್‌ ತಿಳಿಸಿದರು.

ಸಾಲಿಗ್ರಾಮದ ಡಾ.ಬಿ.ಆರ್‌. ಅಂಬೇಡ್ಕರ್‌ ಬಡಾವಣೆಯಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಸೋಮಶೇಖರ್‌ ಆಯೋಜಿಸಿದ್ದ ಗ್ರಾಪಂ ಸದಸ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಅಧಿಕಾರಕ್ಕೆ ಬಂದ ಮೇಲೆ ಸೂಕ್ಷ್ಮಾತಿ ಸೂಕ್ಷ್ಮ ಸಮುದಾಯಕ್ಕೂ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದೇನೆ. ರಾಜ್ಯದಲ್ಲೇ ಮೊದಲ ಮಂಗಳಮುಖಿಯನ್ನು ಗ್ರಾಪಂ ಅಧ್ಯಕ್ಷೆ ಮಾಡಿದ್ದೇವೆ. ಹಾಸನ ಮತ್ತು ಮೈಸೂರು ಮುಖ್ಯ ರಸ್ತೆಯ ಕೆ.ಆರ್‌. ನಗರದಲ್ಲಿ ಅತ್ಯಾಧುನಿಕ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಜಿಪಂ ಮಾಜಿ ಸದಸ್ಯ ಅಚ್ಯುತಾನಂದ ಅವರೊಡನೆ ಸೇರಿ ಚಾಲನೆ ನೀಡಲಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಕೆಲವರು ಸುಖಾ ಸುಮ್ಮನೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಯಾವುದಕ್ಕೂ ಜಗ್ಗುವುದಿಲ್ಲ. ನನಗೆ ಕ್ಷೇತ್ರದ ಅಭಿವೃದ್ಧಿ ಮತ್ತು ಸಾರ್ವಜನಿಕರ ಹಿತ ಕಾಪಾಡುವುದು ಮುಖ್ಯ. ಸಾಲಿಗ್ರಾಮ ತಾಲೂಕು ಕೇಂದ್ರ ಆಗಿರುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ, ವ್ಯಾಪಾರ, ವಹಿವಾಟು ಹೆಚ್ಚಾಗಲಿದೆ ಎಂದರು.

ಸಾಲಿಗ್ರಾಮದಲ್ಲಿ ಅಂಬೇಡ್ಕರ್‌ ಬಡಾವಣೆಯಲ್ಲಿ ವಾಸವಾಗಿರುವ ಜನರಿಗೆ ವಸತಿ ಯೋಜನೆಯಡಿ ನಿವೇಶನ ಕೊಡಿಸಲು ಸರ್ಕಾರದಿಂದ ಶೀಘ್ರದಲ್ಲಿಯೇ ಅಧಿಕಾರಿಗಳ ಸಭೆ ಕರೆಯಲಾಗುವುದು. ಇಲ್ಲಿನ ಬಡಾವಣೆಯಲ್ಲಿ ಕಾಂಕ್ರಿಟ್‌ ರಸ್ತೆ, ಚರಂಡಿ, ಹುಚ್ಚಮ್ಮ ದೇವಸ್ಥಾನ ನಿರ್ಮಾಣ ಹೀಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಇನ್ನೂ ಹಲವು ಕಾಮಗಾರಿ ನಡೆಸುವುದಾಗಿ ಅವರು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಸೋಮಶೇಖರ್‌, ಉಪಾಧ್ಯಕ್ಷೆ ನೀಲಮ್ಮ ಗೋವಿಂದೇಗೌಡ, ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ತುಳಸೀರಾಮ್‌, ರಾಜ್ಯ ಕ್ರೀಡಾ ಪಟುಗಳ ಸಂಘದ ರಾಜ್ಯಾಧ್ಯಕ್ಷ ನಾಗೇಶ್ವರ್‌ರಾವ್‌, ಅಂಬೇಡ್ಕರ್‌ ಯುವಕರ ಸಂಘದ ಗೌರವಾಧ್ಯಕ್ಷ ಸುರೇಶ್‌, ಎಸ್‌ಐ ಕುಮುದಾ, ಗ್ರಾಪಂ ಲೆಕ್ಕ ಸಹಾಯಕಿ ಅಶ್ವಿನಿ, ತಾಲೂಕು ಜೆಡಿಎಸ್‌ ಅಧ್ಯಕ್ಷ ಮಂಡಿಕಲ್‌ ರಾಜಣ್ಣ, ಮುಖಂಡರಾದ ಕಲ್ಲೇಶ್‌, ಲಾಲೂ ಸಾಹೇಬ್‌, ಪ್ರಕಾಶ್‌, ಅಯಾಜ್‌ ಅಹಮದ್‌ ವಿಎಸ್‌ಎಸ್‌ಎನ್‌ ಅಧ್ಯಕ್ಷ ಅರುಣ್‌, ಸದಸ್ಯ ನಾಗೇಂದ್ರ, ನಗರ ಅಧ್ಯಕ್ಷ ಮಂಜು, ಶ್ರೀನಿವಾಸ, ಕಾರ್ಯದರ್ಶಿ ರಾಜು, ಅನಂತರಾಜ್‌, ವೈರಮುಡಿ, ರಾಮಯ್ಯ, ಗೋವಿಂದರಾಜು, ವೆಂಕಟೇಶ್‌, ಗಂಗಾಧರ್‌ ಮೊದಲಾದವರು ಇದ್ದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ

 ಕೆ.ಆರ್‌. ನಗರ (ನ.20): ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ನಾನೆಂದೂ ಜಾತಿ ಮತ್ತು ಪಕ್ಷ ರಾಜಕೀಯ ಮಾಡಿಲ್ಲ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

ಪಟ್ಟಣದ ಮುಳ್ಳೂರು ರಸ್ತೆಯ (Road) ಎಡಭಾಗದ ಪ್ರಮುಖ ರಸ್ತೆಗಳಿಗೆ ಸುಮಾರು 1.75 ಕೋಟಿ ರು.ಗಳ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಶಿಕ್ಷಣ, ರಸ್ತೆ, ವಿದ್ಯುತ್‌, ಮನೆ ವಿತರಣೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಲಾಗಿದೆ ಎಂದರು.

ಕೊರೋನಾ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬರಬೇಕಾಗಿದ್ದ ಅನುದಾನ ಸಮರ್ಪಕವಾಗಿ ಬಾರದ ಕಾರಣ ಆ ಸಂಧರ್ಭದಲ್ಲಿ ಅಭಿವೃದ್ದಿ ಕಾರ್ಯಗಳು ಸ್ವಲ್ಪ ಕುಂಠಿತವಾಗುವಂತಾಯಿತು ಆದರೆ ನಂತರದಲ್ಲಿ ಸರ್ಲಾರದ ಮೇಲೆ ಒತ್ತಡ ಹೇರಿ ಅನುದಾನ ಬಿಡುಗಡೆ ಮಾಡಿಸಿ ಹಂತ ಹಂತವಾಗಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಆದ್ಯತೆ ಮೇಲೆ ಕೆಲಸ ಕೊಡಿ

 ಕೆ.ಆರ್‌.ನಗರ : ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಅನಗತ್ಯವಾಗಿ ಅಲೆಸದೆ ಆದ್ಯತೆಯ ಮೇಲೆ ಅವರ ಕೆಲಸ ಮಾಡಿಕೊಡಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ತಾಲೂಕಿನ ಚೀರ್ನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಜನ ಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದೆ ಈ ವಿಚಾರದಲ್ಲಿ ದೂರುಗಳು ಕೇಳಿ ಬಂದರೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಗ್ರಾಮದಲ್ಲಿ (Village) ರಸ್ತೆ (Road) ನಿರ್ಮಾಣ ಮಾಡುವಾಗ ಒತ್ತುವರಿಯಾಗಿ ಜಾಗ ಕಳೆದುಕೊಂಡಿರುವವರ ಪಟ್ಟಿ ಮಾಡಿ ಎಂದು ಪಿಡಿಒ (PDO) ರವಿ ಅವರಿಗೆ ಆದೇಶಿಸಿದ ಅವರು, ಮುಂದೆ ಅವರಿಗೆ ಸರ್ಕಾರದಿಂದ ಪರಿಹಾರ ಕೊಡಿಸಿ ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೂ ಅವಕಾಶ ಮಾಡಿಕೊಡುವ ಭರವಸೆ ನೀಡಿದರು.

ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಇತರ ಸವಲತ್ತುಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಅವರನ್ನು ಗುರುತಿಸಿ ಅನುಕೂಲ ಮಾಡಿಕೊಡಬೇಕು ಹಾಗೂ ಇಂದಿನ ಸಭೆಯಲ್ಲಿ ಬಂದಿರುವ ಕುಂದು ಕೊರತೆ ಅರ್ಜಿಗಳಿಗೆ ವಾರದಲ್ಲಿ ಪರಿಹಾರ ಸೂಚಿಸಬೇಕೆಂದರು.