ಮೂಕಾಂಬಿಕೆಯ ಆಶೀರ್ವಾದದಿಂದ ಮಂತ್ರಿಯಾಗಿದ್ದೇನೆ: ನಿರ್ಮಲಾ ಸೀತಾರಾಮನ್
* ಮೂಕಾಂಬಿಕೆ, ಆದಿ ಶಂಕರಾಚಾರ್ಯ, ವೀರಭದ್ರ ದೇವರ ದರ್ಶನ ಪಡೆದ ಕೇಂದ್ರ ಸಚಿವೆ
* ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಶಾಲು ಹೊದೆಸಿ ಪ್ರಸಾದ ನೀಡಿ ಗೌರವಿಸಲಾಯಿತು
* ಸಚಿವೆ ನಿರ್ಮಲಾಗೆ ಮತ್ತೆ ರಾಜ್ಯಸಭೆ ಟಿಕೆಟ್ ನಿಶ್ಚಿತ
ಕುಂದಾಪುರ(ಮೇ.15): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಶನಿವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ(Kollur Sri Mookambika Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅವರನ್ನು ದೇವಳದ ವತಿಯಿಂದ ಪೂರ್ಣಕುಂಭದೊಂದಿಗೆ ಬರ ಮಾಡಿಕೊಳ್ಳಲಾಯಿತು. ನಂತರ ಅವರು ಶ್ರೀ ಮೂಕಾಂಬಿಕೆ, ಆದಿ ಶಂಕರಾಚಾರ್ಯ ಹಾಗೂ ವೀರಭದ್ರ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ನಂತರ ಅವರನ್ನು ಶಾಲು ಹೊದೆಸಿ ಪ್ರಸಾದ ನೀಡಿ ಗೌರವಿಸಲಾಯಿತು.
ನಂತರ ಮಾತನಾಡಿದ ಸಚಿವೆ ನಿರ್ಮಲಾ, ನನ್ನ ಬಾಲ್ಯದಿಂದಲೂ ಅನೇಕ ಬಾರಿ ಹಿರಿಯರೊಂದಿಗೆ ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬಂದಾಗಲೆಲ್ಲ ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ. ನಾನು ಇಂದು ಈ ಸ್ಥಾನದಲ್ಲಿ ಇದ್ದೇನೆ ಎಂದರೆ ಅದಕ್ಕೆ ತಾಯಿ ಮೂಕಾಂಬಿಕೆಯ ಆಶೀರ್ವಾದವೂ ಕಾರಣ ಎಂದು ಹೇಳಿದರು.
ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಸರಳತೆಗೆ ಶ್ಲಾಘನೆ: ವಿಡಿಯೋ ವೈರಲ್
ಅರ್ಚಕರಾದ ನರಸಿಂಹ ಅಡಿಗ ಹಾಗೂ ಪರಮೇಶ್ವರ ಅಡಿಗ ಅವರ ನೇತೃತ್ವದಲ್ಲಿ ಪೂಜೆಗಳು ನಡೆದವು. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ನಿರ್ಮಲಾ ಸಂಬಂಧಿ ಲಕ್ಷ್ಮೇನಾರಾಯಣ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಕೆರಾಡಿ, ಸದಸ್ಯರಾದ ಡಾ. ಅತುಲಕುಮಾರ ಶೆಟ್ಟಿ, ಗೋಪಾಲಕೃಷ್ಣ ನಾಡಾ, ಜಯಾನಂದ ಹೋಬಳಿದಾರ್, ರತ್ನಾ ರಮೇಶ್ ಕುಂದರ್, ಸಂಧ್ಯಾ ರಮೇಶ್, ರಾಜ್ಯ ಬಿಜೆಪಿ ಕಾರ್ಯದರ್ಶಿ ನಯನಾ ಗಣೇಶ್, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕೊಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮಕೃಷ್ಣ ಭಟ್, ತಹಸೀಲ್ರ್ದಾ ಶೋಭಾಲಕ್ಷ್ಮೇ, ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ. ಮಹೇಶ್ ಮುಂತಾದವರಿದ್ದರು.
ಇದಕ್ಕೆ ಮೊದಲು ಬೆಳಗ್ಗೆ ಸಚಿವೆ ನಿರ್ಮಲಾ ಅವರು ಉಡುಪಿ ಶ್ರೀಕೃಷ್ಣಮಠಕ್ಕೆ(Udupi Shri Krishna Matha) ಭೇಟಿ ನೀಡಿ, ಕನಕನ ಕಿಂಡಿಯಲ್ಲಿ ದೇವರ ದರ್ಶನ ಪಡೆದವರು. ನಂತರ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ತಹಸೀಲ್ದಾರ್ ಅರ್ಚನಾ ಭಟ್, ಪರ್ಯಾಯ ಮಠದ ದಿವಾನರಾದ ವರದರಾಜ ಭಟ್, ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್, ವಾಸುದೇವ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಸಚಿವೆ ನಿರ್ಮಲಾಗೆ ಮತ್ತೆ ರಾಜ್ಯಸಭೆ ಟಿಕೆಟ್ ನಿಶ್ಚಿತ
ಬೆಂಗಳೂರು: ರಾಜ್ಯಸಭೆಯ(Rajya Sabha) ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ(Election) ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ಆಡಳಿತಾರೂಢ ಬಿಜೆಪಿ(BJP) ಮೂರನೇ ಸ್ಥಾನಕ್ಕೂ ಸ್ಪರ್ಧಿಸಲು ಮುಂದಾಗಿದೆ.
ನಿರಾಯಾಸವಾಗಿ ಗೆಲ್ಲಬಹುದಾದ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನ ಹಾಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಲಭಿಸಲಿದೆ. ಅಂದರೆ, ಅವರನ್ನು ಮತ್ತೊಂದು ಅವಧಿಗೆ ಮುಂದುವರೆಸಲು ಪಕ್ಷ ತೀರ್ಮಾನಿಸಿದೆ ಎನ್ನಲಾಗಿದೆ.
ಬಡ್ಡಿ ದರ ಏರಿಸಿದ ಸಮಯದ ಬಗ್ಗೆ ಅಚ್ಚರಿಯಾಯ್ತು: ನಿರ್ಮಲಾ ಸೀತಾರಾಮನ್
ಎರಡನೇ ಸ್ಥಾನಕ್ಕೆ ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನಾ, ವಿಧಾನಪರಿಷತ್ತಿನಿಂದ ನಿವೃತ್ತಿ ಹೊಂದುತ್ತಿರುವ ಲೆಹರ್‌ಸಿಂಗ್, ಉದ್ಯಮಿ ಪ್ರಕಾಶ್ ಶೆಟ್ಟಿಹಾಗೂ ರಾಜ್ಯಸಭೆಯಿಂದ ನಿವೃತ್ತಿ ಹೊಂದುತ್ತಿರುವ ಕೆ.ಸಿ.ರಾಮಮೂರ್ತಿ ಅವರ ಹೆಸರುಗಳೂ ಪ್ರಸ್ತಾಪವಾಗಿವೆ. ಆದರೆ, ಸುರಾನಾ ಅವರಿಗೇ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ರಾಜ್ಯಸಭೆಯ ನಾಲ್ಕು ಸ್ಥಾನಗಳ ಪೈಕಿ ಎರಡು ಬಿಜೆಪಿಗೆ, ಒಂದು ಕಾಂಗ್ರೆಸ್‌ಗೆ ನಿಶ್ಚಿತ. ಆದರೆ, ನಾಲ್ಕನೇ ಸ್ಥಾನವನ್ನು ಯಾವುದೇ ಒಂದು ಪಕ್ಷ ಗೆಲ್ಲುವ ಪರಿಸ್ಥಿತಿಯಿಲ್ಲ. ಮೂರು ಪಕ್ಷಗಳ ಪೈಕಿ ಎರಡು ಪಕ್ಷಗಳು ನೇರವಾಗಿ ಅಥವಾ ಪರೋಕ್ಷವಾಗಿ ಕೈಜೋಡಿಸಬೇಕಾಗುತ್ತದೆ. ಎರಡು ಪಕ್ಷಗಳ ಬೆಂಬಲ ಗಳಿಸುವ ಪಕ್ಷೇತರ ಅಭ್ಯರ್ಥಿ ಕೂಡ ಕಣಕ್ಕಿಳಿದು ಗೆಲ್ಲಬಹುದಾಗಿದೆ. ಅಂದರೆ, ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 46 ಮತಗಳು ಬೇಕಾಗುತ್ತದೆ. ಬಿಜೆಪಿಗೆ ಎರಡು ಸ್ಥಾನಗಳನ್ನು ಗೆದ್ದ ಬಳಿಕ ಪಕ್ಷೇತರ ಸೇರಿದಂತೆ ಹೆಚ್ಚುವರಿಯಾಗಿ 29 ಮತಗಳು ಲಭಿಸುತ್ತವೆ. ಕಾಂಗ್ರೆಸ್‌ಗೆ ಒಂದು ಸ್ಥಾನ ಗೆದ್ದ ಬಳಿಕ ಹೆಚ್ಚುವರಿಯಾಗಿ 23 ಸ್ಥಾನ ಸಿಗುತ್ತವೆ. ಜೆಡಿಎಸ್‌ನ ಒಟ್ಟು ಬಲ 32.
ಹೀಗಾಗಿ, ಪಕ್ಷದ ವತಿಯಿಂದ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅದೃಷ್ಟ ಪರೀಕ್ಷಿಸಲು ಬಿಜೆಪಿ ಗಂಭೀರ ಪ್ರಯತ್ನ ಆರಂಭಿಸಿದೆ. ಲೆಹರ್ ಸಿಂಗ್, ಪ್ರಕಾಶ್ ಶೆಟ್ಟಿ ಹಾಗೂ ಕೆ.ಸಿ.ರಾಮಮೂರ್ತಿ ಪೈಕಿ ಒಬ್ಬರನ್ನು ಮೂರನೇ ಅಭ್ಯರ್ಥಿನ್ನಾಗಿ ಕಣಕ್ಕಿಳಿಸುವ ಸಂಭವವಿದೆ ಎನ್ನಲಾಗುತ್ತಿದೆ.
ರಾಜ್ಯಸಭೆಯ ಸಂಭವನೀಯರು
1. ನಿರ್ಮಲಾ ಸೀತಾರಾಮನ್
2. ನಿರ್ಮಲ್‌ಕುಮಾರ ಸುರಾನಾ/ಲೆಹರ್ ಸಿಂಗ್/ಪ್ರಕಾಶ್ ಶೆಟ್ಟಿ/ಕೆ.ಸಿ.ರಾಮಮೂರ್ತಿ
3. ಲೆಹರ್ ಸಿಂಗ್/ಪ್ರಕಾಶ್ ಶೆಟ್ಟಿ/ಕೆ.ಸಿ.ರಾಮಮೂರ್ತಿ