ಬೆಂಗಳೂರು [ಆ.25]:  ಅನಾರೋಗ್ಯದ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗಿರಿ ನಗರದ 4ನೇ ಹಂತದಲ್ಲಿ ನಡೆದಿದೆ.

ಬಿಇಎಲ್‌ ನಿವೃತ್ತ ಉದ್ಯೋಗಿ ಕೃಷ್ಣಮೂರ್ತಿ (70) ಮತ್ತು ಅವರ ಪತ್ನಿ ಸ್ವರ್ಣಮೂರ್ತಿ (68) ಮೃತರು. ಮನೆಯಲ್ಲಿ ಅನಾರೋಗ್ಯದ ಕಾರಣಕ್ಕೆ ಹಾಸಿಗೆ ಹಿಡಿದಿದ್ದ ಪತ್ನಿಗೆ ವಿಷ ಪ್ರಾಶನ ಮಾಡಿಸಿದ ಬಳಿಕ ಶುಕ್ರವಾರ ರಾತ್ರಿ ಕೃಷ್ಣಮೂರ್ತಿ ವಿಷ ಸೇವಿಸಿ, ನೇಣು ಹಾಕಿಕಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಮುಗಿಸಿಕೊಂಡು ಮೃತರ ಮಗ ಮತ್ತು ಸೊಸೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.

ಮೃತ ಕೃಷ್ಣಮೂರ್ತಿ ಅವರು, ಗಿರಿನಗರದಲ್ಲಿ ತಮ್ಮ ಪತ್ನಿ, ಮಗ, ಸೊಸೆ ಹಾಗೂ ಮೊಮ್ಮಕ್ಕಳ ಜತೆ ನೆಲೆಸಿದ್ದರು. ಬೆನ್ನುಹುರಿ ಸಮಸ್ಯೆಗೆ ತುತ್ತಾಗಿದ್ದ ಸ್ವರ್ಣ ಅವರು, ವರ್ಷದಿಂದ ಹಾಸಿಗೆ ಹಿಡಿದಿದ್ದರು. 

ಮಗ ಮತ್ತು ಸೊಸೆ ಉದ್ಯೋಗಸ್ಥರಾದ ಕಾರಣ ಪತ್ನಿ ಆರೈಕೆಯ ಹೊಣೆಗಾರಿಕೆ ಕೃಷ್ಣಮೂರ್ತಿ ಮೇಲೆ ಬಿದ್ದಿತ್ತು. ಪತ್ನಿ ಆರೋಗ್ಯದಲ್ಲಿ ಚೇತರಿಕೆ ಕಾಣದೆ ದಿನ ಕಳೆದಂತೆ ಕೃಶವಾಗುತ್ತಿದ್ದರು. ಇದರಿಂದ ಖಿನ್ನತೆಗೊಳಗಾದ ದಂಪತಿ, ಕೊನೆಗೆ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.