ಮೈಸೂರು(ಡಿ.10): ಹುಣಸೂರು ಉಪಚುನಾವಣೆ ಮುಗಿದಿದ್ದು, ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್‌ ಈಗ ಸಚಿವ ಸ್ಥಾನಕ್ಕೆ ಲಾಭಿ ನಡೆಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ಪಕ್ಷ ಮೊದಲೇ ನೀಡಿತ್ತು. ಇದೀಗ ಸಚಿವ ಸ್ಥಾನಕ್ಕೆ ಸೋತ ಅಭ್ಯರ್ಥಿಯೂ ಲಾಭಿ ನಡೆಸುತ್ತಿದ್ದಾರೆ.

ವಿಶ್ವನಾಥ್ ಸೋತರೂ ಮನಸ್ಸಿಂದ ಮಂತ್ರಿಗಿರಿಯ ಆಸೆ ಮಾತ್ರ ಹೋಗಿಲ್ಲ. ಮಂತ್ರಿಗಿರಿಗೆ ಹಳ್ಳಿಹಕ್ಕಿ ಲಾಭಿ ನಡೆಸುತ್ತಿದ್ದು, ವಿಶ್ವನಾಥ್‌ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಹುಣಸೂರು ಉಪಚುನಾವಣೆಯಲ್ಲಿ ಪರಾಜಿತರಾಗಿರುವ ಎಎಚ್‌ವಿ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಮಾತುಕತೆ ನಡೆಸಿದ್ದಾರೆ.

ಅಥಣಿಯಲ್ಲಿ ಮತ್ತೆ ಅಸ್ತಿತ್ವ ಸಾಧಿಸಿದ ಕುಮಟಳ್ಳಿ

ದೂರವಾಣಿ ಕರೆ ಮೂಲಕ ಸಮಾಧಾನ ಹೇಳಿದ ಬಿಎಸ್‌ವೈ, ನಿಮ್ಮೊಂದಿಗೆ ನಾವು ಇದ್ದೇವೆ ಎಂದಷ್ಟೇ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಸಿಎಂ ಜತೆ ಅನರ್ಹ ಶಾಸಕರ ಸಭೆ ನಡೆಯಲಿದ್ದು, ಹೊಸಕೋಟೆ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಹಾಗೂ ವಿಶ್ವನಾಥ್ ಇಬ್ಬರು ಮಾತ್ರ ಸೋತಿದ್ದಾರೆ.

ನಾಲ್ಕೈದು ಅನರ್ಹ ಶಾಸಕರು ಸೋತಿದ್ದರೆ ಸಚಿವ ಸ್ಥಾನ ಕೇಳುವುದು ಕಷ್ಟ ಆಗುತ್ತಿತ್ತು. ವಿಶ್ವನಾಥ್‌ಗೆ ಸಚಿವ ಸ್ಥಾನ ಕೊಡಬೇಕೋ, ಬೇಡವೋ ಎಂಬುದು ಪಕ್ಷದ ಆಂತರಿಕ ವಿದ್ಯಮಾನಗಳ‌ ಮೇಲೆ ಅವಲಂಬಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.