ಮೈಸೂರು(ಫೆ.27): ಹುಣಸೂರು ಹನಗೋಡಿಗೆ ಸಮೀಪದ ಕಿರಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಹಾಲು ಸೇವಿಸಿದ ನಂತರ ವಾಂತಿ, ಹೊಟ್ಟೆನೋವಿನಿಂದ ಅಸ್ವಸ್ಥಗೊಂಡಿದ್ದಾರೆ.

ಶಾಲೆಯಲ್ಲಿ ಬುಧವಾರ ಬೆಳಗ್ಗೆ ಎಂದಿನಂತೆ ಹಾಲನ್ನು ಮಕ್ಕಳಿಗೆ ನೀಡಿದ್ದಾರೆ, ಹಾಲು ಕುಡಿದ ಸ್ವಲ್ಪ ಹೊತ್ತಿನ ನಂತರ 7ನೇ ತರಗತಿಯ ವೆಂಕಟೇಶ್‌, 6ನೇ ತರಗತಿಯ ಅನುಶ್ರೀ, ದಿಕ್ಷೀತ್‌ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡು ವಾಂತಿ ಮಾಡಿಕೊಂಡಿದ್ದಾರೆ. ನಂತರ ಶಾಲೆಯ ಇತರೆ ಮಕ್ಕಳಿಗೂ ವಾಕರಿಕೆ, ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ.

 

ಇದನ್ನು ಗಮನಿಸಿದ ಶಿಕ್ಷಕರು ತಕ್ಷಣವೇ ಪೋಷಕರಿಗೆ ಮಾಹಿತಿ ನೀಡಿ, ಖಾಸಗಿ ವಾಹನಗಳಲ್ಲಿ ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ವೆಂಕಟೇಶ್‌, ಅನುಶ್ರೀ, ದಿಕ್ಷೀತ್‌ ಅವರನ್ನು ದಾಖಲಿಸಿಕೊಂಡ ಡಾ.ಜೋಗೇಂದ್ರನಾಥ್‌ ತುರ್ತು ಚಿಕಿತ್ಸೆ ನೀಡಿದರು. ಉಳಿದ 26 ವಿದ್ಯಾರ್ಥಿಗಳಿಗೂ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಜ್ಯೋತಿ, ಶ್ರುತಿ, ಶಿವಣ್ಣ, ಶಿವಮ್ಮ ಚಿಕಿತ್ಸೆ ನೀಡಿ ಉಪಚರಿಸಿದರು.

ಸಂಜೆ ವೇಳೆಗೆ ಎಲ್ಲರೂ ಚೇತರಿಸಿಕೊಂಡ ಪರಿಣಾಮ ಪೋಷಕರೇ ಮನೆಗೆ ಕರೆದೊಯ್ದರು. ಮಿಕ್ಸ್‌ ಆಗದ ಹಾಲಿನ ಪೌಡರ್‌: ಶಾಲೆಯಲ್ಲಿ ಹಾಲಿನ ಪೌಡರ್‌ನ್ನು ಸರಿಯಾಗಿ ನೀರಿನಲ್ಲಿ ಮಿಕ್ಸ್‌ ಮಾಡದ ಪರಿಣಾಮ ಮಕ್ಕಳಲ್ಲಿ ವಾಕರಿಕೆ, ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಎಲ್ಲ ಮಕ್ಕಳಿಗೂ ಸೂಕ್ತ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಂಡಿದ್ದಾರೆ ಯಾವುದೇ ಅಪಾಯವಿಲ್ಲವೆಂದು ವೈದ್ಯ ಡಾ.ಜೋಗೇಂದ್ರನಾಥ್‌ ಪತ್ರಿಕೆಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಎ.ಸಿ, ತಹಸೀಲ್ದಾರ್‌, ಇಒ ಭೇಟಿ:

ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ಇತ್ತ ಉಪ ವಿಭಾಗಾಧಿಕಾರಿ ವೀಣಾ, ತಹಸೀಲ್ದಾರ್‌ ಬಸವರಾಜ್‌ ಮಕ್ಕಳ ಆರೋಗ್ಯವನ್ನು ವಿಚಾರಿಸಿದರು. ವೈದ್ಯರಿಂದ ಮಾಹಿತಿ ಪಡೆದುಕೊಂಡು ಪೋಷಕರನ್ನು ಗಾಬರಿಯಾಗದಂತೆ ಸಂತೈಸಿದರು. ನಂತರ ಶಾಲೆಗೆ ತೆರಳಿ ಬಿಸಿಯೂಟದ ಪರಿಕರ, ಅಡುಗೆ ಕೋಣೆ, ನೀರಿನಟ್ಯಾಂಕ್‌, ದಾಸ್ತಾನು ಕೊಠಡಿ ಹಾಗೂ ಹಾಲಿನ ಪೌಡರ್‌ ಪ್ಯಾಕೆಟ್‌ಗಳನ್ನು ಪರಿಶೀಲಿಸಿದರು. ಇವರೊಂದಿಗೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಪೂವಯ್ಯ ಅಕ್ಷರ ದಾಸೋಹದ ಜಿಲ್ಲಾ ಶಿಕ್ಷಣಾಧಿಕಾರಿ ಲಿಂಗರಾಜಯ್ಯ, ಬಿಇಒ ನಾಗರಾಜ್‌, ಜಿಪಂ ಸದಸ್ಯ ಕಟ್ಟನಾಯಕ, ಗ್ರಾಪಂ ಅಧ್ಯಕ್ಷ ಚೆಲುವರಾಜು, ಅಕ್ಷರದಾಸೋಹ ಸಹಾಯಕ ನಿರ್ದೇಶಕ ರಾಜೆಂದ್ರ ಇದ್ದರು.