ಮೀಸಲಾತಿ ಬೇಡ ಎನ್ನಲು ಮುಖ್ಯಮಂತ್ರಿ ಯಾರು?: ಕಾಶಪ್ಪನವರ್
* ನಮಗೆ ಮೀಸಲಾತಿ ಬೇಕಿದೆ. ಅದಕ್ಕಾಗಿಯೇ ರಾಜ್ಯದಲ್ಲಿ ಪಾದಯಾತ್ರೆ ಮಾಡಿದ್ದೇವೆ
* ನೀವು ನಿಮ್ಮಷ್ಟಕ್ಕೆ ಹೋರಾಟ ಮಾಡಿ, ಆದರೆ ನಮ್ಮ ತಂಟೆಗೆ ಬಂದರೆ ಸುಮ್ಮನೆ ಕೂರೋದಿಲ್ಲ
* ನಮಗೆ ಸಂವಿಧಾನಾತ್ಮಕ ಹಕ್ಕು ಇದೆ
ಬಾಗಲಕೋಟೆ(ಆ.23): ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬೇಡ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆನ್ನುವ ಹೇಳಿಕೆ ಕುರಿತು ಹುನಗುಂದ ಮಾಜಿ ಶಾಸಕ, ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬೇಡ ಅನ್ನುವುದಕ್ಕೆ ಮುಖ್ಯಮಂತ್ರಿ ಚಂದ್ರು ಯಾರು? ಅವರೇನು ರಾಜ್ಯದ ಮುಖ್ಯಮಂತ್ರಿಯೋ, ದೇಶದ ಪ್ರಧಾನ ಮಂತ್ರಿಯೋ ಎಂದು ಕಿಡಿಕಾರಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮಗೆ ಮೀಸಲಾತಿ ಬೇಕಿದೆ. ಅದಕ್ಕಾಗಿಯೇ ರಾಜ್ಯದಲ್ಲಿ ಪಾದಯಾತ್ರೆ ಮಾಡಿದ್ದೇವೆ. 10 ಲಕ್ಷ ಜನ ಸೇರಿಸಿ ಸಮಾವೇಶ ಮಾಡಿ ನ್ಯಾಯ ಕೇಳಿದ್ದೇವೆ. ನಮಗೆ ಮೀಸಲಾತಿ ಬೇಡ ಅನ್ನೋದಕ್ಕೆ ಇವರು ಯಾರು? ಎಂದು ಪ್ರಶ್ನಿಸಿದರು.
ಪ್ರಬಲ ಜಾತಿಗಳು 2ಎಗೆ ಬೇಡ: ಸಿಎಂ ಬೊಮ್ಮಾಯಿಗೆ ಮನವಿ
ನೀವು ನಿಮ್ಮಷ್ಟಕ್ಕೆ ಹೋರಾಟ ಮಾಡಿ, ಆದರೆ ನಮ್ಮ ತಂಟೆಗೆ ಬಂದರೆ ಸುಮ್ಮನೆ ಕೂರೋದಿಲ್ಲ. ಜನ ಕೇಳುತ್ತಾರೆ ಅಂತ ಬಾಯಿಗೆ ಬಂದಂತೆ ಮಾತನಾಡೋಕೆ ಇವರಾರಯರು? ಮೀಸಲಾತಿ ಬೇಡ ಅನ್ನೋಕೆ ಅವರಿಗೇನು ಹಕ್ಕು ಇದೆ. ನಮಗೆ ಸಂವಿಧಾನಾತ್ಮಕ ಹಕ್ಕು ಇದೆ. ನಾವು ಮೀಸಲಾತಿ ಕೇಳುತ್ತೇವೆ ಎಂದರು. ಇದೇ ವೇಳೆ, ಆ.26ರಿಂದ ಮಲೆ ಮಹದೇಶ್ವರ ಬೆಟ್ಟದಿಂದ ಮತ್ತೆ ಜಾಗೃತಿ ಸಭೆ ಆರಂಭಿಸುತ್ತೇವೆ ಎಂದು ಹೇಳಿದರು.