ಹುನಗುಂದ: ಗಾಂಧಿ ಕೊಂದವರೇ ಭಯೋತ್ಪಾದಕರು, ಕಾಶಪ್ಪನವರ
* ಕಾಂಗ್ರೆಸ್ ಉಗ್ರಗಾಮಿಗಳ ಸಂತಾನ ಎಂಬ ಸವದಿ ಹೇಳಿಕೆಗೆ ಕಾಶಪ್ಪನವರ ಕಿಡಿ
* ಸಿ.ಟಿ.ರವಿ ಸೇರಿದಂತೆ ಕೆಲವರ ಮಾತುಗಳಿಗೆ ಏನು ಹಿಡಿತವಿದೆ
* ಯಾರು ಸಂಘಟನೆಯ ಹೆಸರಿನಲ್ಲಿ ದೇಶವನ್ನು ಒಡೆಯುತ್ತಿದ್ದಾರೆ ಎಂಬುವುದು ಜನತೆಗೆ ಗೊತ್ತಾಗಿದೆ
ಬಾಗಲಕೋಟೆ(ಜೂ.11): ಮಹಾತ್ಮಾ ಗಾಂಧಿ ಕೊಂದ ಸಂಘಟನೆಯ ಹಿನ್ನಲೆ ಇರುವವರೇ ನಿಜವಾದ ಭಯೋತ್ಪಾದಕರು ಎಂದು ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಉಗ್ರಗಾಮಿಗಳ ಸಂತಾನ ಎಂಬ ಬಿಜೆಪಿಯ ಶಾಸಕ ಸಿದ್ದು ಸವದಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ಕೊಂದ ನಾತುರಾಮ್ ಗೋಡ್ಸೆ ಯಾರು? ವಿಚಾರವಾದಿ, ಹಿರಿಯ ಸಾಹಿತಿ ಎಂ.ಎಂ. ಕಲಬುರ್ಗಿ ಅವರನ್ನು ಹಾಗೂ ಗೌರಿ ಲಂಕೇಶ ಅವರನ್ನು ಕೊಂದವರು ಯಾರು? ಕಾಂಗ್ರೆಸ್ ಪಕ್ಷವನ್ನು ಉಗ್ರಗಾಮಿ ಸಂಘಟನೆ ಎಂದ ಶಾಸಕ ಸಿದ್ದು ಸವದಿಯವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೊಮ್ಮಾಯಿ ನೇಮಕಗೊಂಡ ಮುಖ್ಯಮಂತ್ರಿ: ಸಿದ್ದರಾಮಯ್ಯ
ಆರ್‌ಎಸ್‌ಎಸ್ ಸಂಘಟನೆಯು ತನ್ನ ಕಾರ್ಯಕರ್ತರಿಗೆ ಚಡ್ಡಿ ಹಾಕಿಕೊಂಡಿರುವ ಅವರ ಕೈಯಲ್ಲಿ ಬದುಕು ಕೊಟ್ಟು ತರಬೇತಿ ನೀಡಲು ಹೊರಟವರು ದೇಶವನ್ನು ಏನು ಮಾಡಲು ಹೊರಟಿದ್ದಾರೆ. ಈ ದೇಶದಲ್ಲಿ ಯಾರು ಭಯೋತ್ಪಾದನೆ ಮಾಡುತ್ತಿದ್ದಾರೆ. ಯಾರು ಸಂಘಟನೆಯ ಹೆಸರಿನಲ್ಲಿ ದೇಶವನ್ನು ಒಡೆಯುತ್ತಿದ್ದಾರೆ ಎಂಬುವುದು ಜನತೆಗೆ ಗೊತ್ತಾಗಿದೆ ಎಂದರು.
ಪ್ರತಿ ಹಂತದಲ್ಲಿಯು ಕಾರ್ಯಕರ್ತರ ಕೈಯಲ್ಲಿ ಬದುಕು ಟ್ರೇನಿಂಗ್, ಥ್ರಿಶೂಲ ನೀಡಿ ಎಲ್ಲರ ಕೈಯಲ್ಲಿ ಚಾಕು ಮಚ್ಚನ್ನು ನೀಡುವ ಕೆಲವು ಸಂಘಟನೆಗಳ ವರ್ತನೆ ಭಯೋತ್ಪಾದನೆ ಅಲ್ಲವೆ? ಎಂದು ಅವರು ಬಿಜೆಪಿಗೆ ಆತ್ಮಸಾಕ್ಷಿ ಎನ್ನುವದಿದ್ದರೆ ಇಂತಹ ತಪ್ಪುಗಳನ್ನು ಒಪ್ಪಿಕೊಳ್ಳಲಿ ಎಂದು ಸಲಹೆ ನೀಡಿದರು.
ಸಿದ್ದರಾಮಯ್ಯ ಭೇಟಿಗೆ ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ
ಸಿದ್ದರಾಮಯ್ಯ ಕುರಿತು ಟೀಕಿಸುವ ಬಿಜೆಪಿಯ ನಾಯಕರುಗಳ ಕುರಿತು ಸಹ ಅಸಮಧಾನ ವ್ಯಕ್ತಪಡಿಸಿದ ಕಾಶಪ್ಪನವರ, ಸಿ.ಟಿ.ರವಿ ಸೇರಿದಂತೆ ಕೆಲವರ ಮಾತುಗಳಿಗೆ ಏನು ಹಿಡಿತವಿದೆ. ಎಲ್ಲವನ್ನು ತಿಳಿದವರ ಹಾಗೇ ಮಾತನಾಡುವುದನ್ನು ಮೊದಲು ನಿಲ್ಲಿಸಲಿ ಎಂದರಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಮುಖ್ಯಮಂತ್ರಿಯಾದವರು. ಆದರೆ, ಇಂದು ಅವರು ಕೇವಲ ಸಂಘ ಪರಿವಾರದ ತೀರ್ಮಾನಗಳನ್ನೇ ಜಾರಿಗೆ ತರಲು ಹೊರಟಿದ್ದಾರೆ ಇದಕ್ಕೆ ಏನು ಹೇಳಬೇಕು ಎಂದರು.
ಮಕ್ಕಳ ತಲೆಯಲ್ಲಿ ಇತಿಹಾಸ ಹೋಗಬೇಕು.ಆದರೆ, ಪಠ್ಯ ಕ್ರಮದ ಪರಿಷ್ಕರಣೆ ಹೆಸರಿನಲ್ಲಿ ನಿಜವಾದ ಇತಿಹಾಸಕಾರರನ್ನು ಮರೆತು ಹೆಗಡೆವಾರ್, ಸೂಲಿಬೆಲೆ ಚಕ್ರವರ್ತಿಯಂತವರ ಪಾಠವನ್ನು ಹಾಕಲು ಹೊರಟಿದ್ದಾರೆ. ಇವರೇನು ಹೋರಾಟಗಾರರೇ ಅಥವಾ ಪಂಡಿತರೇ? ಮಾನ ಮಾರ್ಯಾದೆ ಇದ್ದರೇ ಆಗಿರುವ ಪ್ರಮಾದವನ್ನು ಮೊದಲು ಸರಿಪಡಿಸಿಕೊಳ್ಳುವ ಕೆಲಸ ಮಾಡಲಿ ಅಂತ ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ.