ಕೆಆರ್‌ಎಸ್‌ ತುಂಬಿ ನೂರಾರು ಟಿಎಂಸಿ ನೀರು ಹರಿದು ಹೋದರೂ ಮಂಡ್ಯದ ಕೆರೆಗಳು ಖಾಲಿ, ಅಧಿಕಾರಿಗಳ ನಿರ್ಲಕ್ಷ್ಯ!

ಕೃಷ್ಣರಾಜಸಾಗರ ಜಲಾಶಯ ಜುಲೈ ತಿಂಗಳಲ್ಲೇ ತುಂಬಿ ನೂರಾರು ಟಿಎಂಸಿ ನೀರು ಹರಿದು ಹೋದರೂ ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಚನೆಯೇ ಮಾಡಿಲ್ಲ. ಜಿಲ್ಲೆಯ 985 ಕೆರೆಗಳಲ್ಲಿ  106 ಮಾತ್ರ ಭರ್ತಿ

hundreds tmc of water flowed from KRS  dam but Mandya district lakes are empty gow

ಎಚ್‌.ಕೆ.ಅಶ್ವಥ್‌ ಹಳುವಾಡಿ
ಮಂಡ್ಯ (ಆ.12): ಕೃಷ್ಣರಾಜಸಾಗರ ಜಲಾಶಯ ಜುಲೈ ತಿಂಗಳಲ್ಲೇ ತುಂಬಿ ನೂರಾರು ಟಿಎಂಸಿ ನೀರು ಹರಿದು ಹೋದರೂ ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕಾಳಜಿ ಪ್ರದರ್ಶಿಸದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಜಿಲ್ಲೆಯಲ್ಲಿರುವ 985 ಕೆರೆಗಳಲ್ಲಿ 106 ಕೆರೆಗಳು ಮಾತ್ರ ಭರ್ತಿಯಾಗಿವೆ. 

111 ಕೆರೆಗಳಲ್ಲಿ ಶೇ.75 ರಿಂದ 100 ರಷ್ಟು ನೀರು ತುಂಬಿದ್ದರೆ, 121 ಕೆರೆಗಳಲ್ಲಿ ಶೇ.50 ರಿಂದ 75 ರಷ್ಟು ನೀರಿದೆ. 183 ಕೆರೆಗಳಲ್ಲಿ ಶೇ.25 ರಿಂದ 40 ರಷ್ಟು ನೀರಿದ್ದರೆ 448  ಕೆರೆಗಳಲ್ಲಿ ಶೇ.25 ಕ್ಕಿಂತಲೂ ಕಡಿಮೆ ನೀರು ಸಂಗ್ರಹವಾಗಿದೆ.ಕಾವೇರಿ ಕಣಿವೆ ಪ್ರದೇಶದ ಗೊರೂರು, ಕೆಆರ್‌ಎಸ್, ಹಾರಂಗಿ ಜಲಾಶಯಗಳು ತುಂಬಿ ಹರಿದಿವೆ. ನೂರಾರು ಟಿಎಂಸಿ ನೀರು ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಹರಿದು ಮೆಟ್ಟೂರು ಜಲಾಶಯವೂ ತುಂಬಿ ಹೆಚ್ಚುವರಿ ನೀರು ಸಮುದ್ರಪಾಲಾಗಿದೆ. ಯಥೇಚ್ಛ ನೀರು ಹರಿಯುತ್ತಿದ್ದರೂ ಅದನ್ನು ಕೃಷಿ ಚಟುವಟಿಕೆಗೆ, ಅಂತರ್ಜಲ ಹೆಚ್ಚಳಕ್ಕೆ, ಕೆರೆಗಳನ್ನು ತುಂಬಿಸಿಕೊಳ್ಳುವುದಕ್ಕೆ ರಾಜ್ಯಸರ್ಕಾರ ಸಮರ್ಪಕವಾಗಿ ಕಾರ್ಯಯೋಜನೆಗಳನ್ನು ರೂಪಿಸಿ ಬಳಸಿಕೊಳ್ಳುವಲ್ಲಿ ವಿಫಲವಾಗಿರುವುದನ್ನು ಸಾಕ್ಷೀಕರಿಸುತ್ತಿದೆ.

ಜನಪ್ರತಿನಿಧಿಗಳು-ಅಧಿಕಾರಿಗಳ ನಿರ್ಲಕ್ಷ್ಯ:ಜಿಲ್ಲೆಯ ಬಹುತೇಕ ಕೆರೆಗಳಿಗೆ ನಾಲಾ ಸಂಪರ್ಕ ಜಾಲವಿಲ್ಲ. ವಿತರಣಾ ನಾಲೆಗಳಲ್ಲಿ ಹೂಳು, ಗಿಡ-ಗಂಟೆಗಳು ತುಂಬಿಕೊಂಡಿದ್ದರೂ ಸ್ವಚ್ಛಗೊಳಿಸಿಲ್ಲ. ಇದು ಜನಪ್ರತಿನಿಧಿಗಳು, ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಮತ್ತೆ ವಿತರಣಾ ನಾಲೆಗಳ ಮೂಲಕ ಹರಿಯುವ ನೀರು ರೈತರ ಹೊಲ-ಗದ್ದೆಗಳನ್ನು ತಣಿಸಿ ಹೆಚ್ಚುವರಿ ನೀರು ಕೆರೆಗಳಿಗೆ ಹರಿಯುವ ವ್ಯವಸ್ಥೆ ಇದೆ. ಕಳೆದ ವರ್ಷ ಭೀಕರ ಬರಗಾಲ ಎದುರಾಗಿದ್ದರಿಂದ ಜಲಾಶಯದಲ್ಲಿ ಸಂಗ್ರಹವಾಗಿದ್ದ ಅಲ್ಪಪ್ರಮಾಣದ ನೀರನ್ನು ತಮಿಳುನಾಡಿಗೆ ಹರಿಯಬಿಟ್ಟು ನಮ್ಮ ರೈತರಿಗೆ ನೀರು ಕೊಡದೆ ಸಂಕಷ್ಟಕ್ಕೆ ದೂಡಲಾಗಿತ್ತು. ಅದರಿಂದಲೂ ಪಾಠ ಕಲಿಯದ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಈಗ ನೂರಾರು ಟಿಎಂಸಿ ನೀರು ಹರಿದುಹೋಗುತ್ತಿದ್ದರೂ ಕೆರೆ-ಕಟ್ಟೆಗಳನ್ನು ತುಂಬಿಸಲಾಗದೆ, ಕೊನೆಯಭಾಗಕ್ಕೆ ನೀರನ್ನೂ ತಲುಪಿಸಲಾಗದೆ ಅಸಹಾಯಕರಾಗಿರುವುದು ಜಿಲ್ಲೆಯ ರೈತರ ದುರ್ದೈವವಾಗಿದೆ.

ತುಂಗಭದ್ರಾ ಡ್ಯಾಂ ಅವಘಡ ಇದೇ ಮೊದಲಲ್ಲ, 2019ರಲ್ಲೂ ನಡೆದಿತ್ತು ದುರಸ್ಥಿಗಾಗಿ ವಾರಗಳ ಕಾಲ ಹರಸಾಹಸ!

ಕೊನೆಯ ಭಾಗಕ್ಕೆ ತಲುಪದ ನೀರು:ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಮಳೆ ಕೊರತೆ ಹಾಗೂ ವಿತರಣಾ ನಾಲೆಗಳಲ್ಲಿ ನೀರು ಹರಿಯದಿರುವುದರಿಂದ ಕೃಷಿ ಚಟುವಟಿಕೆಗೆ ಸ್ವಲ್ಪ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರೆ ಕೃಷಿಗೆ ಹೆಚ್ಚು ನೀರು ಬಳಕೆಯಾಗದೆ ಹೆಚ್ಚುವರಿ ನೀರು ಕೆರೆಯ ಒಡಲನ್ನು ಸೇರಿಕೊಳ್ಳುತ್ತಿತ್ತು. ಮಳೆ ಇಲ್ಲದಿರುವ ಕಾರಣ ರೈತರು ನಾಲೆಯ ನೀರಿಗಾಗಿ ಕಾದು ಕುಳಿತಿದ್ದಾರೆ. ಕೆಆರ್‌ಎಸ್ ತುಂಬಿ ಹರಿದರೂ ಮದ್ದೂರು ಹಾಗೂ ಮಳವಳ್ಳಿಯ ಕೊನೆಯ ಭಾಗಕ್ಕೆ ನೀರು ತಲುಪಿಸಲು ಸಾಧ್ಯವಾಗದಿರುವುದರಿಂದ ರೈತರು ನೀರಾವರಿ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಯಾವುದೇ ಕಾರ್ಯಯೋಜನೆಗಳಿಲ್ಲ: ತಮಿಳುನಾಡಿಗೆ 177 ಟಿಎಂಸಿ ನೀರನ್ನು ಹರಿಸಿದ ಬಳಿಕ ಸಿಗಬಹುದಾದ ಹೆಚ್ಚುವರಿ ನೀರನ್ನು ಕೆರೆಗಳನ್ನು ತುಂಬಿಸುವುದು ಸೇರಿದಂತೆ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳುವುದಕ್ಕೆ ಕಾನೂನಾತ್ಮಕ ಅಡಚಣೆಗಳಿಲ್ಲದಿದ್ದರೂ ಸರ್ಕಾರ ಈವರೆಗೆ ಯಾವುದೇ ಕಾರ್ಯಯೋಜನೆಗಳನ್ನು ರೂಪಿಸಿಟ್ಟುಕೊಂಡಿಲ್ಲ. ಕೆರೆಗಳಿಗೆ ನೇರವಾಗಿ ನಾಲಾ ಸಂಪರ್ಕ ಜಾಲ ಕಲ್ಪಿಸುವ ಆಲೋಚನೆಗಳಿಲ್ಲ, ಹೊಸ ಕೆರೆಗಳನ್ನು ನಿರ್ಮಿಸುವ ಕಾಳಜಿ ಇಲ್ಲ, ಅಲ್ಲಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸುವುದಕ್ಕೆ ಆಸಕ್ತಿ ತೋರುತ್ತಿಲ್ಲ. ಕೆರೆಗಳ ಹೂಳೆತ್ತಿಸಿ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವ ಬದ್ಧತೆಯನ್ನೂ ಪ್ರದರ್ಶಿಸುತ್ತಿಲ್ಲ. ಹೀಗಾಗಿ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಪರ್ಯಾಯ ವ್ಯವಸ್ಥೆಗಳು ಇಲ್ಲದಿರುವುದರಿಂದ ನೀರು ಎಲ್ಲಿಯೂ ನಿಲ್ಲದೆ ತಮಿಳುನಾಡಿನತ್ತ ಶರವೇಗದಲ್ಲಿ ಹರಿದುಹೋಗುತ್ತಿದೆ.

ರೈತರ ಬಗ್ಗೆ ಚಿಂತೆ ಇಲ್ಲ: ನೀರಿಲ್ಲದ ಸಮಯದಲ್ಲಿ ನೀರಿನ ಲೆಕ್ಕ ಹಾಕುತ್ತಾ ಕೂರುವ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸರ್ಕಾರ ಹೆಚ್ಚುವರಿ ನೀರು ಸಿಕ್ಕ ಸಮಯದಲ್ಲಿ ಅದನ್ನು ಎಲ್ಲೆಲ್ಲಿ, ಹೇಗೆ ಸಂಗ್ರಹಿಸಬಹುದು, ಜನರು ಹಾಗೂ ರೈತರಿಗೆ ಅನುಕೂಲವಾಗುವಂತೆ ಏನು ಮಾಡಬಹುದು ಎಂಬ ಬಗ್ಗೆ ಯಾರೊಬ್ಬರೂ ಚಿಂತಿಸುತ್ತಲೇ ಇಲ್ಲ. ಮೇಕೆದಾಟು ಯೋಜನೆಗೆ ಕಾನೂನಾತ್ಮಕ ಅಡಚಣೆಗಳಿರುವುದರಿಂದ ಅದನ್ನು ಬಿಟ್ಟು ನೀರಿನ ಬಳಕೆಗೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳುವ ಕಿಂಚಿತ್ ಪ್ರಯತ್ನಗಳು ಯಾರೊಬ್ಬರಿಂದಲೂ ನಡೆಯದಿರುವುದು ಜಿಲ್ಲೆಯ ಜನರ ದುರಂತದ ಸಂಗತಿಯಾಗಿದೆ. 

Latest Videos
Follow Us:
Download App:
  • android
  • ios