ಸಂಜೀವಕುಮಾರ ಹಿರೇಮಠ 
ಹೊಳೆಆಲೂರ(ಸೆ.29):
ಸಮೀಪದ ಹುನಗುಂಡಿ ಗ್ರಾಮದಲ್ಲಿ ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಗ್ರಾಮದೇವತೆ ಹಾಗೂ ಈಶ್ವರ ದೇವಾಲಯಗಳು ಧಾರ್ಮಿಕ ಮಹತ್ವ ಪಡೆದಿವೆ. ಮಹಾನವಮಿ ಸಂದರ್ಭದಲ್ಲಿ ಈ ದೇವಾಲಯಗಳಲ್ಲಿ ನಡೆಯುವ ದೇವಿಪುರಾಣ ಪ್ರವಚನ ನಿರಂತರ 83 ವರ್ಷಗಳಿಂದ ನಡೆದು ಬಂದಿದೆ. 

ಗ್ರಾಮದ ಮನೆ ಮನೆಗಳಲ್ಲಿ ಓದುವ ಭಕ್ತರನ್ನು ಕಂಡು ಅಂದಿನ ಹಿರಿಯರು ಶ್ರೀದೇವಿ ಪುರಾಣವನ್ನು ದೈವದ ವತಿಯಿಂದಲೇ ಪ್ರಾರಂಭಿಸಲು 1935 ರಲ್ಲಿ ನಿರ್ಧರಿಸಿದರು. ಅಂದಿನಿಂದ ಇಂದಿನವರೆಗೆ ಯಾವುದೇ ಅಡೆತಡೆ ಇಲ್ಲದೆ ಪ್ರವಚನ ನಡೆದುಕೊಂಡು ಬರುತ್ತಿದೆ. ಪ್ರಥಮ ಪುರಾಣ ಪ್ರವಚನವನ್ನು ಅಂದಿನ ಗಾವಂಟಿ ಶಾಲೆಯ ಶಿಕ್ಷಕರಾದ ಅಂದಯ್ಯ ಮಠದ ನಡೆಸಿಕೊಟ್ಟರು. ಅವರೊಂದಿಗೆ ಹುನಗುಂಡಿಯ ಬಸಯ್ಯ ವಸ್ತ್ರದ ಪುರಾಣ ವಾಚಕರಾಗಿ ಸೇವೆ ಸಲ್ಲಿಸಿದರು. ನಂತರ ಕರಕಿಕಟ್ಟಿಯ ಮಹಾಸ್ವಾಮೀಜಿ, ಹರಳಿಕಟ್ಟಿಯ ಅಜ್ಜನವರು ನಡೆಸಿಕೊಟ್ಟರು. ಅಂದಿನಿಂದ ದೇವಿ ಪುರಾಣ ಪ್ರಾವಿಣ್ಯ ಪಡೆದವರಿಂದ ಕಾರ್ಯಕ್ರಮಗಳು ಜರುಗುತ್ತಾ ಬಂದಿವೆ. ಕಳೆದ 15 ವರ್ಷಗಳಿಂದ ಕಲ್ಲಯ್ಯ ಮಠದ ಅವರು ಪುರಾಣ ವಾಚನ ಮಾಡುತ್ತಿದ್ದಾರೆ. ಅವರೊಂದಿಗೆ ಷಡಕ್ಷರಯ್ಯ ಸಾಲಿಮಠ ಶಾಸ್ತ್ರಿಗಳು ಪುರಾಣ ವಿವರಣೆ ನೀಡುತ್ತಾ ಬಂದಿದ್ದಾರೆ. 

ಮೊದಲ ದಿನ ಮೆರವಣಿಗೆ: 

ಆರಂಭದ ದಿನ ಶ್ರೀದೇವಿ ಪುರಾಣ ಪುಸ್ತಕ, ದೇವಿ ಭಾವಚಿತ್ರ ಮತ್ತು ಮೂರ್ತಿಗಳನ್ನು ಬಸಪ್ಪ ಬಡಿಗೇರ ಮನೆಯಿಂದ ಮೆರವಣಿಗೆ ಮಾಡುವ ಮೂಲಕ ದೇವಾಲಯಕ್ಕೆ ತರುತ್ತಾರೆ. ಬಡಿಗೇರ ಹಾಗು ರೇಶ್ಮಿಮನೆತನದವರು ದೇವಿ ಪುರಾಣ ಸಂದರ್ಭದಲ್ಲಿ 9  ದಿನಗಳ ಕಾಲ ನೈವೇದ್ಯ ಸಮರ್ಪಿಸುತ್ತಾರೆ. ಶೇಖರಪ್ಪ ಹೂಗಾರ ಮನೆತನದವರು ಈ ಪುರಾಣದ ಅರ್ಚಕರಾಗಿ ಸೇವೆ ಸಲ್ಲಿಸುತ್ತಾರೆ. 

ದಸರಾ ಹಬ್ಬದ ನಂತರ ಪುರಾಣ ಮಂಗಲ ಕಾರ್ಯಕ್ರಮ ಅತ್ಯಂತ ಉತ್ಸಾಹದಿಂದ ನೆರವೇರಿಸುತ್ತಾರೆ. ಗ್ರಾಮದಲ್ಲಿ ಅಂದು ಅನ್ನಪ್ರಸಾದ ಸೇವೆ ನಡೆಯುತ್ತದೆ. ಅದೂ ಸೇರಿದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಗ್ರಾಮಸ್ಥರೇ ಸ್ವಯಂಸ್ಫೂರ್ತಿಯಿಂದ ಕಾಣಿಕೆ ನೀಡುವ ಮೂಲಕ ಭಾಗವಹಿಸಿ ಭಕ್ತಿ ಸೇವೆ ಸಮರ್ಪಿಸುವುದು ಇಲ್ಲಿಯ ವಿಶೇಷ. ಈ ಕಾರ್ಯಕ್ರಮಕ್ಕಾಗಿ 1980ರಲ್ಲಿ ಗ್ರಾಮದ ಗುರು ಹಿರಿಯರು ಸೇರಿ ಆದಿಶಕ್ತಿ ಸೇವಾ ಸಂಘ ಸ್ಥಾಪಿಸಿದರು. 1985 ರಲ್ಲಿ ಟ್ರಸ್ಟ್ ಸಹ ನೋಂದಾಯಿಸಲಾಯಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಸರ್ಕಾರದಿಂದ ಅನುದಾನ ಪಡೆದು ಗ್ರಾಮದೇವತೆ ಹಾಗೂ ಈಶ್ವರ ದೇವಾಲಯ ಜೀರ್ಣೋದ್ಧಾರವನ್ನು ಕೈಗೊಂಡಿದ್ದಾರೆ. ಅಲ್ಲದೆ ಕಮಿಟಿ ವತಿಯಿಂದ ಶಾಲೆ, ಕೆಲವು ಸಾರ್ವಜನಿಕ ಕಟ್ಟಡಗಳನ್ನು ನಿರ್ಮಿಸಿದ್ದು ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ. ಈ ಎಲ್ಲ ಕಾರ್ಯಗಳಿಗೆ ಕೈಜೋಡಿಸುವ ಗ್ರಾಮದ ಯುವಶಕ್ತಿ ಆದರ್ಶಪ್ರಾಯವಾಗಿದೆ. ಸೆ. 28ರಂದು ಈ ಗ್ರಾಮದೇವತೆ ಹಾಗೂ ಈಶ್ವರ ದೇವಾಲಯಗಳಲ್ಲಿ 9  ದಿನಗಳ ಕಾಲ ದೇವಿ ಪುರಾಣ ಪ್ರಾರಂಭವಾಗಲಿದ್ದು, ಗ್ರಾಮದ ಗುರು ಹಿರಿಯರು, ಯುವಕರು ಪಾಲ್ಗೊಂಡು ವಿಜೃಂಭಣೆಯಿಂದ ಆಚರಿಸುತ್ತಾರೆ. ಪ್ರತಿ ವರ್ಷ ಗ್ರಾಮಸ್ಥರು ಪ್ರತಿ ದಿನದ ಪುರಾಣ ಪ್ರವಚನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುತ್ತಾರೆ. 

ಈ ಬಗ್ಗೆ ಮಾತನಾಡಿದ ಹುನಗುಂಡಿ ಗ್ರಾಪಂ ಅಧ್ಯಕ್ಷ ಅಮರಪ್ಪಗೌಡ ಗೌಡರ ಅವರು, ನಮ್ಮ ಗ್ರಾಮದಲ್ಲಿ ಮಹಾನವಮಿಯ ಅಂಗವಾಗಿ ಹಿಂದಿನಿಂದಲೂ ಹಿರಿಯರು ಈ ದೇವಿ ಪುರಾಣ ಪ್ರವಚನದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದು, ಅವರಂತೆ ನಾವು ಪ್ರತಿವರ್ಷ ಪ್ರತಿ ಮನೆಯ ಸದಸ್ಯರು ಬಂದು ಸೇವೆ ಸಲ್ಲಿಸಿ ಪುರಾಣ ಆಲಿಸುತ್ತಾರೆ ಎಂದು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)