ಹುನಗುಂದ: ದೊಡ್ಡನಗೌಡ ವಿರುದ್ಧದ ಕಾಶಪ್ಪನವರ ಆರೋಪ ಸತ್ಯಕ್ಕೆ ದೂರ
ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಶಾಸಕರು ಯಾವುದೇ ಹಸ್ತಕ್ಷೇಪ ಮಾಡಿಲ್ಲ: ಪಾಟೀಲ| ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವ ಜಾಯಮಾನವೂ ಅವರದಲ್ಲ| ಶಾಸಕರ ವಿರುದ್ಧ ಆರೋಪ ಮಾಡಲು ವಿಷಯಗಳೇ ಇಲ್ಲದ ಕಾರಣ ಮಾಜಿ ಶಾಸಕರು ಇಂತಹ ಆಧಾರ ರಹಿತ ಆರೋಪ| ಯಾರ ಸ್ವಭಾವ ಎಂತಹದು ಎಂಬುದು ತಾಲೂಕಿನ ಜನತೆಗೆ ಸಂಪೂರ್ಣ ಗೊತ್ತಿದೆ|
ಹುನಗುಂದ(ಡಿ.27): ಹುನಗುಂದ ಹಾಗೂ ಇಳಕಲ್ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ನಿರ್ದೇಶಕ ಮಂಡಳಿ ಚುನಾವಣೆ ವಿಷಯವಾಗಿ ಶಾಸಕ ದೊಡ್ಡನಗೌಡ ಪಾಟೀಲರ ವಿರುದ್ಧ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾಡಿದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಹುನಗುಂದ ತಾಲೂಕು ಬಿಜೆಪಿ ಅಧ್ಯಕ್ಷ ಮಹಾಂತಗೌಡ ಪಾಟೀಲ (ತೊಂಡಿಹಾಳ) ಹೇಳಿದ್ದಾರೆ.
ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇವುಗಳು ಸಹಕಾರಿ ಕ್ಷೇತ್ರದ ಚುನಾವಣೆಯಾಗಿರುವುದರಿಂದ ಶಾಸಕ ದೊಡ್ಡನಗೌಡ ಪಾಟೀಲರು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವ ಜಾಯಮಾನವೂ ಅವರದಲ್ಲ. ಶಾಸಕರ ವಿರುದ್ಧ ಆರೋಪ ಮಾಡಲು ವಿಷಯಗಳೇ ಇಲ್ಲದ ಕಾರಣ ಮಾಜಿ ಶಾಸಕರು ಇಂತಹ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಯಾರ ಸ್ವಭಾವ ಎಂತಹದು ಎಂಬುದು ತಾಲೂಕಿನ ಜನತೆಗೆ ಸಂಪೂರ್ಣ ಗೊತ್ತಿದೆ ಎಂದರು.
ಹುನಗುಂದ: PKPS ಮತದಾರರ ಪಟ್ಟಿಯಲ್ಲಿ ಶಾಸಕ ದೊಡ್ಡನಗೌಡರಿಂದ ಭಾರಿ ಅಕ್ರಮ
ಬಿಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕರಾಗಿರುವ ವಿಜಯಾನಂದ ಕಾಶಪ್ಪನವರೇ ಈ ಚುನಾವಣೆಯಲ್ಲಿ ಅಕ್ರಮ ವೆಸಗುತ್ತಿದ್ದಾರೆ. ಬಿಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರನ್ನು ಬಳಸಿಕೊಂಡು ಎಲ್ಲ ಪಿಕೆಪಿಎಸ್ ಕಾರ್ಯದರ್ಶಿಗಳ ಮೇಲೆ ಒತ್ತಡ ತಂದು ತಮಗೆ ಅನುಕೂಲವಾಗುವ ರೀತಿಯಲ್ಲಿ ಮತದಾರರ ಪಟ್ಟಿಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
ತಿರುಗೇಟು:
2015ರಲ್ಲಿ ಜರುಗಿದ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ವಿಜಯಾನಂದ ಕಾಶಪ್ಪನವರ ಹೇಗೆ ಆಯ್ಕೆಯಾದರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ತಾಲೂಕಿನಲ್ಲಿ ಮತದಾನದ ಹಕ್ಕು ಹೊಂದಿದ್ದ 32 ಪಿಕೆಪಿಎಸ್‌ಗಳಲ್ಲಿ 17 ಅವರ ವಿರುದ್ಧ ಇದ್ದವು. ಆಗ ತಮಗಿದ್ದ ಶಾಸಕ ಸ್ಥಾನದ ಪ್ರಭಾವ ಬಳಿಸಿ ವಿರೋಧಿ ಅಭ್ಯರ್ಥಿ ಶಿವನಗೌಡ ಅಗಸಿಮುಂದಿನ ಸೇರಿ ಅವರ ಬೆಂಬಲಕ್ಕೆ ನಿಂತಿದ್ದ 12 ಜನರ ವಿರುದ್ಧ ಪೊಲೀಸ್‌ರ ಮೂಲಕ ಜಾಮಿನು ರಹಿತ ಸುಳ್ಳು ಪ್ರಕರಣ ದಾಖಲಿಸಿ 12 ದಿನಗಳ ಕಾಲ ಊರು ಬಿಡುವಂತೆ ಮಾಡಿ ಅಕ್ರಮದ ಮೂಲಕ ಚುನವಣೆ ಗೆದ್ದಿದ್ದನ್ನು ಮರೆಯ ಬಾರದು ಎಂದು ಮಹಾಂತಗೌಡ ಕಾಶಪ್ಪನವರಿಗೆ ತಿರುಗೇಟು ನೀಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಳಕಲ್ ತಾಲೂಕಿನ ಕೋಡಿಹಾಳ ಪಿಕೆಪಿಎಸ್ ಕಾರ್ಯದರ್ಶಿ ಈಚೆಗೆ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಕೆಲವು ದಿನಗಳ ಹಿಂದೆ ಬೇರೆಯವರು ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ ಅವರು ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಇಲಾಖೆ ಅಧಿಕಾರಿಗಳಿಂದ ಅನುಮೋದನೆ ಪಡೆಯಬೇಕಾಗಿದ್ದರಿಂದ ನಾಮಪತ್ರ ಸಲ್ಲಿಸುವ ಅವಧಿ ಆರಂಭದ ದಿನ ಸ್ವಲ್ಪು ವ್ಯತ್ಯಾಸವಾಗಿದೆ. ಮರುದಿನದಿಂದ ನಾಪತ್ರ ಸ್ವೀಕರಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಕರಡಿ ಪಿಕೆಪಿಎಸ್‌ನಲ್ಲೂ ನಿಯಮಾನುಸಾರ ಮತದಾರರ ಯಾದಿ ಸಿದ್ಧಗೊಂಡಿದೆ ಎಂದು ಹೇಳಿದರು.
ಸ್ಪಷ್ಟ ನಿದರ್ಶನ:
ಈ ಎರಡು ಪಿಕೆಪಿಎಸ್‌ಗಳ ಬಗ್ಗೆ ಆರೋಪ ಮಾಡುವ ಮಾಜಿ ಶಾಸಕರು, ಕಾರ್ಯದರ್ಶಿಯ ಕಪಿಮುಷ್ಠಿಯಲ್ಲಿರುವ ಜಂಬಲದಿನ್ನಿ ಪಿಕೆಪಿಎಸ್ ಬಗ್ಗೆ ಏಕೆ? ಚಕಾರ ಎತ್ತುತ್ತಿಲ್ಲ. ಮಾಜಿ ಶಾಸಕರ ಬೆಂಬಲಿಗನಾಗಿರುವ ಅಲ್ಲಿನ ಕಾರ್ಯದರ್ಶಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾನೆ. ಪಿಕೆಪಿಎಸ್ ವ್ಯಾಪ್ತಿಯಲ್ಲಿ ಬರದ ತನ್ನ ನೂರಾರು ಸಂಬಂಧಿಕರನ್ನು ಸದಸ್ಯರನ್ನಾಗಿ ಮಾಡಿಕೊಂಡು ಅವರಿಗೆ ಅಕ್ರಮವಾಗಿ ಸಾಲ ನೀಡಿದ್ದು ಅಲ್ಲದೇ ಮನಸ್ಸೋ ಇಚ್ಚೆ ಮತದರಾರರ ಪಟ್ಟಿತಯಾರಿಸಿದ್ದಾನೆ. ಇದಕ್ಕೆ ಮತದಾನದಿಂದ ವಂಚಿತರಾದ ಅಲ್ಲಿನ ನೂರಾರು ಶೇರುದಾರರು ಸಹಕಾರ ಇಲಾಖೆ ಅಧಿಕಾರಿಗಳಿಗೆ ಲಿಖಿತ ದೂರು ನೀಡಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದರು.
ಮತ್ತೊಂದು ಸ್ಥಾನಕ್ಕೆ ವಿರೋಧ:
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಮುಖಂಡ ಪರುತಗೌಡ ಪಾಟೀಲ ಮಾತನಾಡಿ, ಇಳಕಲ್ ನೂತನ ತಾಲೂಕು ರಚನೆ ನಂತರ ಬಿಡಿಸಿಸಿ ಬ್ಯಾಂಕಿಗೆ ನೂತನ ತಾಲೂಕಿಗೂ ಒಂದು ನಿರ್ದೇಶಕ ಸ್ಥಾನ ನೀಡಬೇಕೆಂದು ತಾಲೂಕು ವ್ಯಾಪ್ತಿಯ 18 ಪಿಕೆಪಿಎಸ್ ಅಧ್ಯಕ್ಷರು ಮತ್ತು ನಿರ್ದೇಶಕರು ಬ್ಯಾಂಕಿನ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದೆವು. ಅದರಂತೆ ಇಳಕಲ್ ತಾಲೂಕಿಗೂ ಒಂದು ಸ್ಥಾನ ನೀಡಲು 2017-18ರ ಸರ್ವ ಸದಸ್ಯರ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಇದಕ್ಕೆ ವಿಜಯಾನಂದ ಕಾಶಪ್ಪನವರ ವಿರೋಧಿಸಿದ್ದರು. ಆದರೂ ಹೋರಾಟದ ಮೂಲಕ ಸ್ಥಾನ ಪಡೆಯಲು ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.