ಬೆಂಗಳೂರು [ನ.26]:  ಹುಳಿಮಾವು ಕೆರೆ ಏರಿ ಒಡೆದು ಕೊಚ್ಚಿ ಹೋಗಿದ್ದ ಬದುಕುಗಳ ಕಟ್ಟಿಕೊಳ್ಳಲು ಸಂತ್ರಸ್ತರ ಹೆಣಗಾಟ ಮುಂದುವರೆದಿದೆ. ಮನೆಗಳಲ್ಲಿ ತುಂಬಿದ್ದ ನೀರು ಹೊರ ಹಾಕಲು ಸಂತ್ರಸ್ತರು ಹಾಗೂ ಬಿಬಿಎಂಪಿ, ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದರೂ ಭಾರಿ ಪ್ರಮಾಣದಲ್ಲಿ ತುಂಬಿಕೊಂಡಿರುವ ಕೊಳಚೆ ಮಣ್ಣು ಹಾಗೂ ದುರ್ವಾಸನೆಯಿಂದ ಇನ್ನೂ 2-3 ದಿನ 200ಕ್ಕೂ ಹೆಚ್ಚು ಕುಟುಂಬ ಮನೆಗಳಿಗೆ ಮರಳುವ ವಾತಾವರಣ ಕಂಡು ಬರುತ್ತಿಲ್ಲ.

ಏಕಾಏಕಿ ನುಗ್ಗಿದ ನೀರಿನಿಂದಾಗಿ 700ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಬಿಬಿಎಂಪಿ ಅಧಿಕೃತ ಮಾಹಿತಿ ಪ್ರಕಾರವೇ 630 ಮನೆಗಳಿಗೆ ನೀರು ನುಗ್ಗಿದೆ. ಇವುಗಳಲ್ಲಿ 319 ಮನೆಗೆ ಹೆಚ್ಚು ನೀರು ನುಗ್ಗಿ ಮನೆಯಲ್ಲಿನ ದನಸಿ ಪದಾರ್ಥ, ಎಲೆಕ್ಟ್ರಾನಿಕ್‌ ಉಪಕರಣ, ಪೀಠೋಕರಣ ಸಂಪೂರ್ಣ ಹಾಳಾಗಿವೆ.

ಇಷ್ಟೂಮನೆಗಳ ಸಂತ್ರಸ್ತ ಸದಸ್ಯರು ಬಿಬಿಎಂಪಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಕಡಿಮೆ ಪ್ರಮಾಣದಲ್ಲಿ ನೀರು ನುಗ್ಗಿರುವ ಮನೆಗಳ ನಾಗರಿಕರು ತಾವೇ ಮನೆಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಕೆರೆಗೆ ಹತ್ತಿರವಿದ್ದ ಮನೆಗಳಿಗೆ ಭಾರಿ ಪ್ರಮಾಣದಲ್ಲಿ ಕೊಳಚೆ ನೀರು ನುಗ್ಗಿದ್ದು ಹಾವು, ಚೇಳುಗಳ ಭೀತಿಯಿಂದ ಮನೆಗೆ ಕಾಲಿಡಲೂ ಹೆದರುವಂತಾಗಿದೆ. ಹೀಗಾಗಿ ಬಿಬಿಎಂಪಿ ಹಾಗೂ ಅಗ್ನಿಶಾಮಕ ಸಿಬ್ಬಂದಿಯೇ ಮನೆಗಳ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲಾ ಮನೆಗಳನ್ನೂ ಸ್ವಚ್ಛಗೊಳಿಸಲು ಇನ್ನೂ ಎರಡು ದಿನ ಬೇಕಾಗಬಹುದು. ಜನಜೀವನ ಸಹಜ ಸ್ಥಿತಿಗೆ ಮರಳಲು ಇನ್ನೂ ಮೂರು ದಿನವಾದರೂ ಬೇಕು ಎಂಬುದು ಬಿಬಿಎಂಪಿ ಹಿರಿಯ ಅಧಿಕಾರಿಗಳ ಮಾತು.

ಇನ್ನು ಸುಮಾರು 10 ಮನೆಗಳು ಪ್ರವಾಹದಿಂದ ಸಂಪೂರ್ಣ ಶಿಥಿಲಾವ್ಯವಸ್ಥೆ ತಲುಪಿವೆ. ಸಂತ್ರಸ್ತರು ಮನೆಗಳಿಗೆ ವಾಪಸಾದರೆ ಮನೆಗಳು ಯಾವುದೇ ಕ್ಷಣದಲ್ಲೂ ಪತನಗೊಳ್ಳಬಹುದು. ಹೀಗಾಗಿ 10 ಕುಟುಂಬಗಳಿಗೆ ಮನೆಗಳಿಗೆ ವಾಪಸು ಹೋಗದಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉಳಿದಂತೆ ಸಂತ್ರಸ್ತರು ಮಂಗಳವಾರವೂ ಮನೆಗೆ ಸ್ವಚ್ಛಗೊಳಿಸಿಕೊಳ್ಳಲು ಪರದಾಡಿದರು. ಸುಮಾರು ಮೂರು ಅಡಿಗಳಷ್ಟುನೀರು ನಿಂತಿದ್ದರಿಂದ ಒಳಗಿದ್ದ ಬೀರು, ಗ್ಯಾಸ್‌, ಬಟ್ಟೆ, ಹಾಸಿಗೆ, ದಾಖಲೆಗಳು ಸೇರಿದಂತೆ ಬೆಲೆ ಬಾಳುವ ವಸ್ತುಗಳೆಲ್ಲಾ ನೀರು ತುಂಬಿಕೊಂಡಿತ್ತು. ಪರಿಣಾಮ ಹಾದಿ ಬೀದಿಯಲ್ಲಿ ವಸ್ತುಗಳನ್ನು ಒಣಗಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು.

‘5 ತಿಂಗಳ ಮಗು ಹೊತ್ತು ಓಡಿದೆ’

ಕೆರೆ ನೀರಿನ ಪ್ರವಾಹದಿಂದ ಗೌರಮ್ಮ ಎಂಬ ಮಹಿಳೆ ತನ್ನ 5 ತಿಂಗಳ ನವಜಾತ ಶಿಶು ಹೊತ್ತು ಓಡಿ ಪ್ರಾಣ ಕಾಪಾಡಿಕೊಂಡರು. ಬಾಣಂತಿಯಾಗಿರುವ ತಾವು ತಣ್ಣೀರು ಮುಟ್ಟಿದರು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಸಮಯದಲ್ಲಿ ಚಳಿಗಾಲದಲ್ಲಿ ಬೀದಿಗೆ ಬಿದ್ದಿದ್ದೇವೆ. ನಮ್ಮ ಕಷ್ಟಶತ್ರುಗಳಿಗೂ ಬೇಡ ಎನ್ನುತ್ತಾರೆ ಖಾಸಗಿ ವಾಹನ ಚಾಲಕ ಭೀಮಣ್ಣ ಅವರ ಪತ್ನಿ ಗೌರಮ್ಮ.

ಏಕಾಏಕಿ ನೀರು ನುಗ್ಗಲು ಶುರುವಾಯಿತು. ನೀರು ನುಗ್ಗುತ್ತಿರುವುದನ್ನು ಗಮನಿಸಿ ಮನೆ ಮುಂದೆ ಮಣ್ಣಿನ ದಿಬ್ಬ ನಿರ್ಮಿಸಿ ತಡೆಯಲು ಯತ್ನಿಸಿದೆವು. ರಭಸ ಹೆಚ್ಚಾಗಿದ್ದರಿಂದ 5 ತಿಂಗಳ ಮಗಳನ್ನು ಹೊತ್ತು ಉಟ್ಟಬಟ್ಟೆಯಲ್ಲೇ ಓಡಿ ಹೋದೆ.

ಇದರಿಂದ ತಾಯಿ ಕಾರ್ಡ್‌, ಮಗಳ ಹೆಸರಿನಲ್ಲಿ ಮಾಡಿಸಿದ್ದ 2 ಲಕ್ಷ ರು. ಬಾಂಡ್‌, ಮತದಾನ ಚೀಟಿ, ಪತಿ ವಾಹನ ಚಾಲನಾ ಪರವಾನಿಗೆ ಎಲ್ಲವೂ ಹಾಳಾಗಿವೆ. ಎರಡು ದಿನವಾದರೂ ಮನೆ ಸ್ವಚ್ಛವಾಗದಷ್ಟುಮಣ್ಣು, ತ್ಯಾಜ್ಯ ಸೇರಿಕೊಂಡಿದೆ. ಮನೆ ಕಡೆ ವಾಪಸಾಗಲು ಮನೆ ದುರ್ವಾಸನೆ ಬೀರುತ್ತಿದೆ ಎಂದು ನೋವು ತೋಡಿಕೊಂಡರು.

‘ಉಟ್ಟಬಟ್ಟೆಯಲ್ಲೇ ಓಡಿದೆವು’

ಪ್ರವಾಹದಿಂತ ತಪ್ಪಿಸಿಕೊಂಡ ಕ್ಷಣಗಳ ಬಗ್ಗೆ ವಿವರಿಸಿದ ನಾರಾಯಣಸ್ವಾಮಿ ಅವರು, ಕರೆಯ ನೀರು ಮನೆಗಳತ್ತ ಬರುವುದನ್ನು ಕಂಡು ತೊಟ್ಟಬಟ್ಟೆಯಲ್ಲಿಯೇ ಮಕ್ಕಳನ್ನು ಕರೆದುಕೊಡು ಮುಖ್ಯರಸ್ತೆವರೆಗೂ ಓಡಿದೆವು. ತಿರುಗಿ ನೋಡಿದರೆ ಮೂರು ಅಡಿಗಳಷ್ಟುನೀರು ಮನೆ ಆವರಿಸಿಕೊಂಡಿತ್ತು. ಕಣ್ಣೆದುರಿಗೇ ಮನೆಯಲ್ಲಿದ್ದ ವಸ್ತುಗಳು, ದಿನಸಿ ಪದಾರ್ಥ ಹಾಳಾದರೂ ಪ್ರಾಣ ಉಳಿಸಿಕೊಂಡೆವು ಎಂಬ ಕಾರಣಕ್ಕೆ ನಿಟ್ಟಿಸಿರು ಬಿಟ್ಟೆವು ಹೇಳಿದರು.

ಇದೀಗ ಎರಡು ದಿನದಿಂದ ಇಲ್ಲಿನ ನಿವಾಸಿಗಳಿಗೆ ಸರಿಯಾದ ಊಟವಿಲ್ಲದೇ ಪರದಾಡುವಂತಾಗಿದೆ. ಯಾವೊಬ್ಬ ಕಾರ್ಮಿಕನಿಗೂ ಕೆಲಸವಿಲ್ಲ. ನೀರು ಹೊರಹಾಕುವುದು, ಹೊಟ್ಟೆತುಂಬಿಸಿಕೊಳ್ಳುವುದೇ ಕಷ್ಟಎಂಬಂತಾಗಿದೆ. ಸದ್ಯ ಸರ್ಕಾರ ತೆರೆದ ಗಂಜಿ ಕೇಂದ್ರದಲ್ಲಿ ಊಟದ ವ್ಯವಸ್ಥೆ ಇದೆ. ಅಲ್ಲಿ ಊಟ ಮಾಡಿ ಬಂದು ಮನೆ ಸ್ವಚ್ಛತೆ ಮಾಡಿಕೊಳ್ಳುತ್ತಿದ್ದೇವೆ. ಎಲ್ಲ ಮನೆಗಳು ಮೊದಲಿನಂತಾಗಲೂ ಇನ್ನು ಎರಡು ದಿನಗಳಾದರೂ ಬೇಕು ಎಂದು ಅಳಲು ತೋಡಿಕೊಂಡರು.

ಮನೆ ಕಳೆದುಕೊಂಡ ನಮಗೆ ಗಂಜಿ ಕೇಂದ್ರದಲ್ಲಿ ಊಟ, ವಸತಿ ಹಾಗೂ ಬಟ್ಟೆವ್ಯವಸ್ಥೆ ಕಲ್ಪಿಸಲಾಗಿದೆ. ನಮ್ಮ ಮನೆ ಅಪಾಯ ಸ್ಥಿತಿಯಲ್ಲಿರುವುದರಿಂದ ಪರಿಶೀಲಿಸಿದ ಅಧಿಕಾರಿಗಳು ಮನೆಗಳಿಗೆ ತೆರಳದಂತೆ ಸೂಚಿಸಿದ್ದಾರೆ. 2 ದಿನ ಕೇಂದ್ರದಲ್ಲಿಯೇ ಆಶ್ರಯ ಪಡೆಯುವಂತೆ ಹೇಳಿದ್ದಾರೆ. ಮನೆ ಇಲ್ಲದೆ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ಗೊತ್ತಾಗುತ್ತಿಲ್ಲ.

-ಸವಿತಾ, ಪ್ರವಾಹ ಸಂತ್ರಸ್ತೆ.

ಕೆರೆ ಪಕ್ಕದ ಮುಖ್ಯ ರಸ್ತೆಯಲ್ಲಿಯೇ ಅಪಾರ್ಟ್‌ಮೆಂಟ್‌ ಇರುವುದರಿಂದ ಕೆಳ ಮಹಡಿಯ ವಾಹನ ನಿಲ್ದಾಣದಲ್ಲಿ ಹತ್ತು ಅಡಿ ನೀರು ತುಂಬಿತ್ತು. ಇದರಿಂದ ಲಿಫ್ಟ್‌, ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ಮೊದಲ ದಿನ ಅಗ್ನಿಶಾಮಕದಳದ ಸಿಬ್ಬಂದಿ ಪಂಪ್‌ ಸೆಟ್‌ ಮೂಲಕ ನೀರು ಹೊರಹಾಕಿದ್ದಾರೆ. ಕೆರೆ ನೀರಿನ ವಾಸನೆಯಿಂದ ಇಲ್ಲಿನ ನಿವಾಸಿಗಳು ಕಿರಿಕಿರಿ ಉಂಟಾಗುತ್ತಿದೆ.

-ಸದಾಶಿವ, ಅಪಾರ್ಟ್‌ಮೆಂಟ್‌ ಮಾಲಿಕ.