Asianet Suvarna News Asianet Suvarna News

Koppal: Huli Haider Case: ಹಲವರ ಮೇಲೆ ಸುಳ್ಳು ಕೇಸ್‌: ಆರೋಪ

ಹುಲಿಹೈದರ್‌ ಸಂಘರ್ಷದ ಪ್ರಕರಣದಲ್ಲಿ ದಲಿತ ಮುಖಂಡ ಸಣ್ಣ ಹನುಮಂತಪ್ಪ ಸೇರಿದಂತೆ ಹಲವರ ಮೇಲೆ ಸುಳ್ಳು ಕೇಸ್‌ ದಾಖಲಾಗಿದ್ದು, ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಸಿಪಿಐಎಂಎಲ್‌ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

Huli Haider case  False case against many peoples  Allegation koppala kanakagiri rav
Author
Hubli, First Published Aug 18, 2022, 10:13 AM IST

ಕನಕಗಿರಿ ಆ.18: ಹುಲಿಹೈದರ್‌ ಸಂಘರ್ಷದ ಪ್ರಕರಣದಲ್ಲಿ ದಲಿತ ಮುಖಂಡ ಸಣ್ಣ ಹನುಮಂತಪ್ಪ ಸೇರಿದಂತೆ ಹಲವರ ಮೇಲೆ ಸುಳ್ಳು ಕೇಸ್‌ ದಾಖಲಾಗಿದ್ದು, ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಸಿಪಿಐಎಂಎಲ್‌ ರಾಜ್ಯ ಸಮಿತಿಯು ತಹಸೀಲ್ದಾರ್‌ ಧನಂಜಯ ಮಾಲಗಿತ್ತಿ(Dhanajay Malagatti) ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಿತು. ನಂತರ ಜಿಲ್ಲಾ ಘಟಕದ ಅಧ್ಯಕ್ಷ ಕೆಂಚಪ್ಪ ಹಿರೇಖೇಡ ಮಾತನಾಡಿ, ಹುಲಿಹೈದರ್‌(Huli Haider ) ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಓರ್ವ ಯುವಕನ ಸ್ಥಿತಿ ಗಂಭೀರವಾಗಿದೆ. ಪ್ರಕರಣದಲ್ಲಿ ದಲಿತ((Dalit) ಮುಖಂಡ ಸಣ್ಣ ಹನುಮಂತಪ್ಪ(Hanumantappa) ಸೇರಿದಂತೆ ಹಲವು ಅಮಾಯಕರನ್ನು ಬಂಧಿಸಲಾಗಿದೆ. ಈ ಬಗ್ಗೆ ಪೊಲೀಸರು ಸರಿಯಾಗಿ ತನಿಖೆ ನಡೆಸಿ, ನೈಜ ಆರೋಪಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು. ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಹುಲಿಹೈದರ ಇನ್ನೂ ಬೂದಿ ಮುಚ್ಚಿದ ಕೆಂಡ: ಗ್ರಾಮದಲ್ಲಿ ಸ್ಮಶಾನ ಮೌನ

ಅಲ್ಲದೇ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಗ್ರಾಮದ ಯುವಕರಿಗೆ ಪ್ರಚೋದನೆ ನೀಡಿ ಹಿಂಸಾಚಾರಕ್ಕೆ ಕಾರಣರಾದ ಹನುಮೇಶ ನಾಯಕ, ರಮೇಶ ನಾಯಕ ಅವರನ್ನು ಬಂಧಿಸಬೇಕು. ಸ್ಮಶಾನ ಮೌನ ಆವರಿಸಿರುವ ಹುಲಿಹೈದರ್‌ ಗ್ರಾಮದಲ್ಲಿ ತಕ್ಷಣವೇ ಶಾಂತಿಸಭೆ ಆಯೋಜಿಸಬೇಕು. ಕೊಲೆಯಾದ ಎರಡು ಕುಟುಂಬಗಳಿಗೆ ತಲಾ .50 ಲಕ್ಷ ಪರಿಹಾರ ಮತ್ತು ಓರ್ವರಿಗೆ ಸರ್ಕಾರಿ ನೌಕರಿ ನೀಡಬೇಕು. ಕರ್ತವ್ಯಲೋಪವೆಸಗಿದ ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಿ, ವಿಚಾರಣೆಗೊಳಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಈ ವೇಳೆ ಸಿಪಿಎಂಎಲ್‌ನ ನಾಗಪ್ಪ ಕಾಟಾಪೂರ, ಹನುಮಂತ ರಾಮದುರ್ಗಾ, ಹುಸೇನಪ್ಪ, ಮಲಿಯಪ್ಪ ರಾಮದುರ್ಗಾ, ಪಾಮಣ್ಣ ಅರಳಿಗನೂರು, ಮರಿಸ್ವಾಮಿ ಕಾಟಾಪೂರ, ಗಿರೇ ಸೋಮಪ್ಪ, ಮಹದೇವಮ್ಮ, ರೂಪಾ ಸಣ್ಣ ಹನುಮಂತ, ಅಮರಮ್ಮ, ಪಾರ್ವತೆಮ್ಮ, ಮುತ್ತಮ್ಮ ಇದ್ದರು.

ಊರು ಬಿಟ್ಟವರು ವಾಪಸ್ಸಾಗಿಲ್ಲ:

 

ಎರಡು ಗುಂಪುಗಳ ನಡುವಿನ ಘರ್ಷಣೆ ಹಿನ್ನೆಲೆ ಭೀತಿಗೆ ಸಿಲುಕಿದ ಗ್ರಾಮಸ್ಥರು ಊರು ತೊರೆದಿದ್ದು, ವಾಪಸ್‌ ಬರುತ್ತಿಲ್ಲ. ಘಟನೆ ನಡೆದು ಏಳು ದಿನಗಳಾದರೂ ಹುಲಿಹೈದರ್‌ ಗ್ರಾಮದಲ್ಲಿ ಸ್ಮಶಾನ ಮೌನ ಮುಂದುವರಿದಿದೆ. ಘರ್ಷಣೆ ಕುರಿತು ವಿಷಾದಿಸಿರುವ ಶಾಸಕ, ಸಂಸದರು ಆ. 16ರಂದು ಗ್ರಾಮಕ್ಕೆ ಭೇಟಿ ನೀಡಿ ಮಹಿಳೆಯರಿಗೆ ಹಾಗೂ ವಯೋವೃದ್ಧರ ಜತೆ ಮಾತನಾಡಿ, ಊರು ತೊರೆದ ಪುರುಷರನ್ನು ಮನೆಗೆ ಕರೆತನ್ನಿ. ನಿಮ್ಮೊಂದಿಗೆ ನಾವಿದ್ದೇವೆಂದು ಮನವಿ ಮಾಡಿಕೊಂಡರೂ ಊರು ತೊರೆದವರು ಗ್ರಾಮದ ಕಡೆ ಹಿಂದಿರುಗುತ್ತಿಲ್ಲ. ಪೊಲೀಸರು ತನಿಖೆ ನೆಪದಲ್ಲಿ ನಮ್ಮನ್ನು ಕೂಡಾ ಬಂಧಿಸುತ್ತಾರೆನ್ನುವ ಆತಂಕ ಗ್ರಾಮಸ್ಥರಲ್ಲಿ ಇನ್ನೂ ಹೋಗಿಲ್ಲ.

ಎರಡು ಗುಂಪುಗಳ ನಡುವೆ ಘರ್ಷಣೆ: ಇಬ್ಬರು ಬಲಿ

ಘಟನೆಯಲ್ಲಿ ಇಬ್ಬರು ಕೊಲೆಗೀಡಾಗಿದ್ದು, ಓರ್ವ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಈ ನಡುವೆ ಗ್ರಾಮದ ಮುಸ್ಲಿಂ, ಲಿಂಗಾಯತ, ಮಾದಿಗ ಹಾಗೂ ವಾಲ್ಮೀಕಿ ಸಮುದಾಯದವರು ಬಂಧನದ ಭೀತಿಗೆ ಸಿಲುಕಿ ಗ್ರಾಮ ತೊರೆದಿದ್ದಾರೆ. ಇತ್ತ ಪೊಲೀಸರು ಗ್ರಾಮವನ್ನು ಸಹಜ ಸ್ಥಿತಿಗೆ ತರಲು ಹರಸಾಹಸ ಪಡುತ್ತಿದ್ದಾರೆ. ಆರೋಪಿಗಳ ಮೊಬೈಲ್‌ ಸಂಖ್ಯೆಗೆ ಲೋಕೆಷನ್‌ ಹಾಕಿ ಬಂಧಿಸುವ ಕೆಲಸ ನಡೆಯುತ್ತಿದೆ. ಊರು ತೊರೆದವರು ಗ್ರಾಮಕ್ಕೆ ಬಾರದೆ ಕುಟುಂಬದಿಂದ ದೂರ ಉಳಿಯುವುದಕ್ಕೆ ಮಹಿಳೆಯರು ದಿನ ನಿತ್ಯ ಸಂಕಟ ಪಡುವಂತಾಗಿದೆ. ಗ್ರಾಮಕ್ಕೆ ಸಾಂತ್ವನ ಹೇಳಲು ಬರುವ ಚುನಾಯಿತ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮುಂದೆ ಮಹಿಳೆಯರು ಕಣ್ಣೀರು ಹಾಕುತ್ತಿದ್ದು, ನಮ್ಮ ಮನೆಯವರು ಎಲ್ಲಿದ್ದಾರೆನೋ ಗೊತ್ತಿಲ್ಲ, ಅವರನ್ನು ಬೇಗನೇ ಮನೆಗೆ ಕರೆಯಿಸುವಂತೆ ದುಃಖಿತರಾಗುತ್ತಿದ್ದಾರೆ.

ತಣ್ಣಗಾಗದ ಗ್ರಾಮ: ಘಟನೆ ನಡೆದು ಏಳು ದಿನಗಳಾದರೂ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಗ್ರಾಪಂ ಬಲಭಾಗದಲ್ಲಿರುವ ಕಿರಾಣಿ ಅಂಗಡಿ ಮಾತ್ರ ತೆರದಿದೆ. ಜಿಲ್ಲಾಧಿಕಾರಿಗಳ ಆದೇಶದನ್ವಯ ಆ. 16ರಿಂದ ಶಾಲೆ, ಅಂಗನವಾಡಿ ಕೇಂದ್ರಗಳು ಆರಂಭವಾಗಿದ್ದು, ಮಕ್ಕಳ ಸಂಖ್ಯೆಯೂ ಕಡಿಮೆ ಇದೆ. ಪಡಿತರ ಫಲಾನುಭವಿಗಳಿಗೆ ಅಕ್ಕಿ ವಿತರಿಸಲಾಗಿದೆ. ಎಸ್‌ಬಿಐ ಬ್ಯಾಂಕ್‌, ಅಂಚೆ ಕಚೇರಿ, ವಸತಿ ನಿಲಯ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆಯಾದರೂ ಗ್ರಾಮದಲ್ಲಿ ಉದ್ವಿಗ್ನತೆ ತಣ್ಣಗಾಗುವಂತೆ ಕಾಣುತ್ತಿಲ್ಲ.

Follow Us:
Download App:
  • android
  • ios