ಏತ ನೀರಾವರಿ ಯೋಜನೆಯ ವಾಲ್ವ್ - ಪೈಪ್ ಕಿತ್ತು ನೀರು ಪೋಲು
ಏತ ನೀರಾವರಿ ಯೋಜನೆ ಪೈಪ್ ಲೈನ್‌ನ ವಾಲ್ವ್ ಮತ್ತು ಪೈಪ್ ಸಂಪರ್ಕ ತಪ್ಪಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿದೆ. ನಗರದ ಹೊರ ವಲಯದ ಬೈಪಾಸ್ ರಸ್ತೆ ಬಳಿ ವಾಲ್ವ್ ಮತ್ತು ಪೈಪ್ ಸಂಪರ್ಕ ತಪ್ಪಿ ನೀರು ಪೋಲಾಗಿದೆ.
ದಾವಣಗೆರೆ (ಜು.14): ತುಂಗಭದ್ರಾ ನದಿಯಿಂದ ಜಿಲ್ಲೆಯ 23 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಪೈಪ್ ಲೈನ್‌ನ ವಾಲ್ವ್ ಮತ್ತು ಪೈಪ್ ಸಂಪರ್ಕ ತಪ್ಪಿ ಅಪಾರ ಪ್ರಮಾಣದ ನೀರು ಪೋಲಾಗಿದೆ. ದಿನವಿಡೀ ನೀರು ವ್ಯರ್ಥವಾಗಿ ಹರಿದ ಘಟನೆ ನಗರದ ಹೊರ ವಲಯದ ಬೈಪಾಸ್ ರಸ್ತೆ ಬಳಿ ಶನಿವಾರ ವರದಿಯಾಗಿದೆ.
ರಾಜನಹಳ್ಳಿ ಜಾಕ್‌ವೆಲ್ ಬಳಿಯಿಂದ 23 ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಬೆಳಗ್ಗೆ 11 ಗಂಟೆಯಿಂದಲೇ ಸಣ್ಣದಾಗಿ ಸೋರಿಕೆ ಶುರುವಾಗಿ, ನಂತರದಲ್ಲಿ ರಭಸವಾಗಿ ಉಕ್ಕಿ ಹರಿಯಲಾರಂಭಿಸಿತು.
ಮಾಹಿತಿ ನೀಡಿದರೂ ಸಿಬ್ಬಂದಿಯ ನಿರ್ಲಕ್ಷ್ಯ:
ಏತ ನೀರಾವರಿ ಯೋಜನೆ ಪೈಪ್‌ಲೈನ್‌ನಿಂದ ವಾಲ್ವ್ ಜಾಗದಲ್ಲಿ ನೀರು ಚಿಮ್ಮಿ ಬರುತ್ತಿದ್ದರಿಂದ ಸಾಕಷ್ಟು ದ್ವಿಚಕ್ರ ವಾಹನಗಳನ್ನು ಮಾಲೀಕರು ಅದರ ಮುಂದೆ ಇಟ್ಟು, ವಾಹನಕ್ಕೆ ವಾಟರ್ ಸರ್ವೀಸ್ ಮಾಡಿಸಿದರು. ಸಂಬಂಧಿಸಿದ ಅಧಿಕಾರಿಗಳಿಗೆ ನೀರು ಸೋರಿಕೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡಲು ಪ್ರಯತ್ನಿಸಿದರೆ ಅಧಿಕಾರಿಗಳು ಕರೆಗೆ ಸ್ಪಂದಿಸಿಲ್ಲ. ಮತ್ತೆ ಕೆಲವರು 2ನೇ ಶನಿವಾರ. ಸಿಬ್ಬಂದಿ ಇಲ್ಲವೆಂಬ ಸಬೂಬು ನೀಡಿದ್ದಾರೆ.
ಮಲಪ್ರಭ ಬಲದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲು
ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ ಎಸ್.ದೇವರಮನಿ, ಜಿಲ್ಲಾ ವಿಜ್ಞಾನ ಪರಿಷತ್ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ ಸಹ ನೀರು ಸೋರಿಕೆಯಾಗುತ್ತಿರುವ ಬಗ್ಗೆ ಪಾಲಿಕೆ ಆಯುಕ್ತ ಮಂಜುನಾಥ ಆರ್.ಬಳ್ಳಾರಿ ಗಮನಕ್ಕೆ ತಂದಿದ್ದಾರೆ. ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಅಪಾರ ನೀರು ರಭಸದಿಂದ ಚಿಮ್ಮಿ ಹಳ್ಳದಂತೆ ಹರಿದು ಹೋಗಿ, ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿದೆ. ತಕ್ಷಣವೇ ಆಯುಕ್ತ ಮಂಜುನಾಥ, ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ, ಜಾಕ್‌ವೆಲ್‌ನಲ್ಲಿ ನೀರು ಲಿಫ್ಟ್ ಮಾಡುವುದನ್ನು ಬಂದ್ ಮಾಡಿಸಿದ್ದಾರೆ.