* ರೈತರಿಗೆ ಕೃಷಿ ಯಂತ್ರಗಳ ಬಾಡಿಗೆ ಏರಿಕೆ ಶಾಕ್‌* ಪೆಟ್ರೋಲ್‌, ಡೀಸೆಲ್‌ ಬೆಲೆಯೇರಿಕೆ ಎಫೆಕ್ಟ್* ರಸಗೊಬ್ಬರದ ನಂತರ ಕೃಷಿ ಉಪಕರಣಗಳ ಬಾಡಿಗೆ ಭಾರೀ ಏರಿಕೆ 

ನಾರಾಯಣ ಹೆಗಡೆ

ಹಾವೇರಿ(ಜು.11): ಗೊಬ್ಬರದ ಬೆಲೆಯೇರಿಕೆ ಬೆನ್ನಲ್ಲೇ ಇದೀಗ ಯಂತ್ರೋಪಕರಣಗಳ ಬಾಡಿಗೆ ದರ ಹೆಚ್ಚಳಗೊಂಡಿರುವುದು ರೈತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದಕ್ಕೆಲ್ಲ ಕಾರಣವಾಗಿದ್ದು ಪೆಟ್ರೋಲ್‌, ಡೀಸೆಲ್‌ ದರ ಏರಿಕೆ!

ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಬೆಳೆ ಮಾರಾಟ ಮಾಡಲಾಗದೆ ಸಂಕಷ್ಟ ಎದುರಿಸಿದ್ದ ರೈತರು ಇದೀಗ ಸಾಲ ಮಾಡಿ ಬಿತ್ತನೆ ಕಾರ್ಯ ನಡೆಸುತ್ತಿದ್ದಾರೆ. ಇಂಥ ಸಂದರ್ಭದಲ್ಲೇ ಯಂತ್ರೋಪಕರಣಗಳ ಬಾಡಿಗೆ ದರ ಏರಿಕೆಯಾಗಿ ರೈತರು ಕಂಗಾಲಾಗಿದ್ದಾರೆ. ಕೂಲಿ ಕಾರ್ಮಿಕರ ಕೊರತೆಯಿಂದ ಬಹುತೇಕ ಕೃಷಿ ಚಟುವಟಿಕೆ ಯಂತ್ರೋಪಕರಣಗಳನ್ನೇ ಅವಲಂಬಿಸಿದೆ. ಪರಿಸ್ಥಿತಿ ಹೀಗಿರುವಾಗ ಪೆಟ್ರೋಲ್‌ ದರ 100ರ ಗಡಿ ದಾಟಿದ್ದರೆ, ಡೀಸೆಲ್‌ ದರ ಕೂಡ ನೂರರ ಸನಿಹಕ್ಕೆ ಬಂದಿದೆ. ಇದರಿಂದ ಯಂತ್ರೋಪಕರಣಗಳ ಬಾಡಿಗೆ ದರವೂ ಹೆಚ್ಚಳವಾಗಿದೆ.

ಟ್ರ್ಯಾಕ್ಟರ್‌, ಕಟಾವು ಯಂತ್ರ, ಜೆಸಿಬಿ, ಟಂಟಂ, ಆಟೋಗಳ ಬಾಡಿಗೆ ದರವನ್ನು ಮಾಲಿಕರು ಸದ್ದಿಲ್ಲದೆ ಹೆಚ್ಚಿಸಿದ್ದಾರೆ. ಇದರಿಂದ ಮಧ್ಯಮ, ಸಣ್ಣ ಹಾಗೂ ಅತಿ ಸಣ್ಣ ರೈತರು ಯಂತ್ರೋಪಕರಣಗಳನ್ನು ದುಬಾರಿ ಬೆಲೆ ತೆತ್ತು ಬಾಡಿಗೆ ಪಡೆದು ಕೃಷಿ ಚಟುವಟಿಕೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಟ್ರ್ಯಾಕ್ಟರ್‌ನಿಂದ ರೂಟರ್‌ ಹೊಡೆಯಲು ಎಕರೆಗೆ ಈ ಹಿಂದೆ 800 ಇತ್ತು. ಅದೀಗ 1200 ಆಗಿದೆ. ಜಮೀನಿನ ಮಣ್ಣು ಸಮತಟ್ಟು ಮಾಡಲು ಹಿಂದೆ 1000 ಇದ್ದರೆ ಅದೀಗ 1400, ಟ್ರ್ಯಾಕ್ಟರ್‌ನಿಂದ ರಂಟೆ ಹೊಡೆಯಲು 1800 (ಹಿಂದೆ 1400 ಇತ್ತು) ದರ ನಿಗದಿ ಮಾಡಲಾಗಿದೆ. ಕೂರಿಗೆ ಬಿತ್ತನೆ ಕಾರ್ಯಕ್ಕೆ ಈ ಮೊದಲು ಒಂದು ಸಾವಿರ ರು. ಕೊಡಬೇಕಿತ್ತು. ಈಗ ಅದು 1400ಕ್ಕೇರಿದೆ. ಜೆಸಿಬಿಯಿಂದ ಕಾಲುವೆ ಹೂಳೆತ್ತಲು 800 ಇದ್ದ ಬಾಡಿಗೆ ದರ 1200ಗೆ ತಲುಪಿದೆ. ಹೀಗೆ ಇಂಧನ ಬೆಲೆಯೇರಿಕೆ ಕೃಷಿ ಕ್ಷೇತ್ರದ ಮೇಲೆ ಭಾರೀ ಪರಿಣಾಮ ಬೀರಿದೆ.

ಕೃಷಿಕರಿಗೊಂದು ಗುಡ್‌ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!

ಹಾಗಂತ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಮಾತ್ರ ಏರಿಕೆಯಾಗಿಲ್ಲ. ಕೆಲ ಬೆಳೆಗಳಿಗೆ ಈ ಮೊದಲಿದ್ದ ಬೆಲೆಯೇ ಈಗಲೂ ಮುಂದುವರಿದಿದ್ದರೆ, ಇನ್ನು ಕೆಲ ಬೆಳೆ ಬೆಲೆ ಇಳಿಕೆ ಆಗುತ್ತಿದೆ. ಬೆಲೆ ಏರಿಳಿತ ಮಾರುಕಟ್ಟೆಯಲ್ಲಿ ಸಾಮಾನ್ಯ. ಆದರೆ, ಕೃಷಿ ಕಾರ್ಯಕ್ಕೆ ತಗಲುವ ಖರ್ಚು ಮಾತ್ರ ನಿರಂತರವಾಗಿ ಏರುತ್ತಲೇ ಇರುವುದರಿಂದ ರೈತರಿಗೆ ನಿರೀಕ್ಷಿತ ಲಾಭ ಸಿಗದಂತಾಗಿದೆ.

ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

ಟ್ರ್ಯಾಕ್ಟರ್‌ನಿಂದ ರೂಟರ್‌ ಹೊಡೆಯಲು 800 ರಿಂದ 1200
ಟ್ರ್ಯಾಕ್ಟರ್‌ನಿಂದ ಮಣ್ಣು ಸಮತಟ್ಟು 1000 ರಿಂದ 1400
ಟ್ರ್ಯಾಕ್ಟರ್‌ನಿಂದ ರಂಟೆ ಹೊಡೆಯಲು 1400 ರಿಂದ 1800
ಕೂರಿಗೆ ಬಿತ್ತನೆ 1000 ರಿಂದ 1400
ಕಾಲುವೆ ಹೂಳೆತ್ತಲು ಜೆಸಿಬಿ 800 ರಿಂದ 1200

ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ಮಾಡಿದ್ದರಿಂದ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆವ್ಯವಸ್ಥೆ ಇಲ್ಲದೆ ಆರ್ಥಿಕ ನಷ್ಟಅನುಭವಿಸಿದ್ದರು. ಈಗ ಪೆಟ್ರೋಲ್‌, ಡೀಸೆಲ್‌, ಬೀಜ ಗೊಬ್ಬರಗಳ ದರವೂ ಹೆಚ್ಚಿದ್ದರಿಂದ ಕೃಷಿ ಖರ್ಚು ದುಪ್ಪಟ್ಟಾಗಿದೆ. ಯಂತ್ರೋಪಕರಣಗಳ ಬಾಡಿಗೆ ದರವೂ ಹೆಚ್ಚಿರುವುದರಿಂದ ಕೃಷಿ ವೆಚ್ಚ ಹೆಚ್ಚಿದೆ. ಕೂಡಲೇ ಸರ್ಕಾರ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ರೆೃತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದ್ದಾರೆ.