Asianet Suvarna News Asianet Suvarna News

ಮಾರುಕಟ್ಟೆಯಲ್ಲಿ ‘ಕೊಪ್ಪಳ ಮಾವು’ ಸಪ್ಪಳ

ಎರಡೂವರೆ ಕೆಜಿಯ ಬಾಕ್ಸ್‌ಗೆ 250 ದರ ನಿಗದಿ| ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯುವ ಎಲ್ಲ ಮಾವು ಒಂದೇ ಬ್ರ್ಯಾಂಡ್‌ನಡಿ ಮಾರಾಟ| ತೋಟಗಾರಿಕಾ ಇಲಾಖೆಯಿಂದಲೇ ಕೊಪ್ಪಳ ಮಾವು ಬ್ರಾಂಡ್‌ ಬಾಕ್ಸ್‌ ಸಿದ್ಧ| ತೋಟಗಾರಿಕೆ ಇಲಾಖೆ ಉಸ್ತುವಾರಿಯಲ್ಲಿ ಕೊಪ್ಪಳ ಮಾವು ಎಂದು ನಾಮಕರಣ|

Huge Demand Koppal Mango in Market
Author
Bengaluru, First Published May 15, 2020, 7:26 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.15): ಕೊಪ್ಪಳ ಮಾವಿಗೆ ಇದೀಗ ಭಾರೀ ಬೇಡಿಕೆ ಬರುತ್ತಿದೆ. ದೇಶದ ಹಲವೆಡೆ ಮಾರುಕಟ್ಟೆ ಲಭಿಸುತ್ತಿದ್ದು, ತೋಟಗಾರಿಕೆ ಇಲಾಖೆಯ ಕ್ರಮದಿಂದ ರೈತರು ಉತ್ತಮ ಬೆಲೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ವಿವಿಧ ತಳಿಯ ಮಾವು ಬೆಳೆಯಲಾಗುತ್ತಿದೆ. ಆದರೆ ಮಾರುಕಟ್ಟೆ ದೃಷ್ಟಿಯಿಂದ ಹಾಗೂ ಇದಕ್ಕೊಂದು ಬ್ರ್ಯಾಂಡ್‌ ಕರುಣಿಸಬೇಕೆಂಬ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಇದಕ್ಕೆ ಕೊಪ್ಪಳ ಮಾವು ಎಂದೇ ನಾಮಕರಣ ಮಾಡಿದೆ. ಅತ್ಯಂತ ಉತ್ಕೃಷ್ಟರುಚಿ ಹೊಂದಿರುವ ಈ ಹಣ್ಣು ಕೊಪ್ಪಳ ಮಾವು ಎಂದೇ ಜಿಲ್ಲೆ ಹಾಗೂ ಹೊರಗಡೆ ಫೇಮಸ್‌ ಆಗಿದ್ದು, ಈ ‘ಕೊಪ್ಪಳ ಬ್ರ್ಯಾಂಡ್‌’ನ್ನು ಶುಕ್ರವಾರ ಮೇ 15 ರಂದು ಕೃಷಿ ಸಚಿವ ಬಿ.ಸಿ. ಪಾಟೀಲ ಬಿಡುಗಡೆ ಮಾಡಲಿದ್ದಾರೆ.

ಏನಿದು ಬ್ರ್ಯಾಂಡ್‌?:

ಕೇಸರ್‌ ಮತ್ತು ಆಪೂಸ್‌ ಮಾವನ್ನು ಕೊಪ್ಪಳ ಜಿಲ್ಲೆಯಲ್ಲಿ ಹುಲುಸಾಗಿ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಬೆಳೆದ ಕೇಸರ್‌ ಮಾವಿಗೆ ಭಾರೀ ಬೇಡಿಕೆ ಇದೆ. ಇಳುವರಿ ಸಹ ಉತ್ತಮವಾಗಿಯೇ ಇರುತ್ತದೆ. ಕಳೆದ ವರ್ಷ ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಿಂದ ವ್ಯಾಪಾರಿಗಳು ಮುಗಿಬಿದ್ದು ಖರೀದಿಸಿದ್ದರು. ಇದು ಗುಜರಾತ್‌ ಕೇಸರ್‌ ಮಾವಿಗಿಂತ ಅತ್ಯುತ್ತಮವಾಗಿದೆ. ಇದಕ್ಕೊಂದು ಬ್ರ್ಯಾಂಡ್‌ ನೀಡಿ ಮಾರಾಟ ಮಾಡಿದರೆ ಮಾರುಕಟ್ಟೆ ಮೌಲ್ಯ ಹೆಚ್ಚಲಿದೆ, ಬೆಲೆಯೂ ಬರಲಿದೆ, ರೈತರಿಗೂ ಅನುಕೂಲವಾಗಲಿದೆ ಎಂದು ಹಲವಾರು ಕಂಪನಿಗಳು ಸಲಹೆ ನೀಡಿದ್ದ ಹಿನ್ನೆಲೆಯಲ್ಲಿ ಈ ಬಾರಿ ಬ್ರ್ಯಾಂಡ್‌ ಹೆಸರು ಇಡಲಾಗಿದೆ. ಕಳೆದ ವರ್ಷ ವಿದೇಶಕ್ಕೂ ಈ ಹಣ್ಣನ್ನು ರಪ್ತು ಮಾಡಲಾಗಿತ್ತು.

ಲಾಕ್‌ಡೌನ್‌ ಎಫೆಕ್ಟ್‌: ಹೊಲದಲ್ಲಿ ರಂಟೆ ಹೊಡೆದ ಶಾಸ​ಕ ಬಸವರಾಜ ದಡೇಸ್ಗೂರು..!

ತೋಟಗಾರಿಕೆ ಇಲಾಖೆ ಉಸ್ತುವಾರಿಯಲ್ಲಿ ಕೊಪ್ಪಳ ಮಾವು ಎಂದು ನಾಮಕರಣ ಮಾಡಲಾಗಿದೆ. ಈ ಕುರಿತಂತೆ ಫೇಸ್ಬುಕ್‌, ವಾಟ್ಸಆ್ಯಪ್‌ ಸೇರಿ ಸಾಮಾಜಿಕ ಜಾಲತಾಣದಲ್ಲೂ ಪ್ರಚಾರ ಮಾಡಿದ್ದು, ಬೇಡಿಕೆ ಸಹ ಬರುತ್ತಿದೆ.
ತೋಟಗಾರಿಕಾ ಇಲಾಖೆಯಿಂದಲೇ ಕೊಪ್ಪಳ ಮಾವು ಬ್ರಾಂಡ್‌ ಬಾಕ್ಸ್‌ ಸಿದ್ಧ ಮಾಡಲಾಗಿದೆ. ಸುಮಾರು 2.5 ಕೆಜಿ ತೂಕದ ಬಾಕ್ಸ್‌ಗೆ 250 ರುಪಾಯಿ ನಿಗದಿ ಮಾಡಲಾಗಿದೆ. ಅಂದರೆ ಪ್ರತಿ ಕೆಜಿಗೆ 100 ಸಿಕ್ಕಂತಾಯಿತು. ಸಾಮಾನ್ಯವಾಗಿ ರೈತರು 40-50 ಕೆಜಿಗೆ ಮಾರಾಟ ಮಾಡುತ್ತಿದ್ದರು. ಆದರೆ, ತೋಟಗಾರಿಕಾ ಇಲಾಖೆಯೇ ಈಗ ಬ್ರಾಂಡ್‌ ಮೂಲಕ ಮಾರಾಟ ಮಾಡುತ್ತಿರುವುದರಿಂದ ರೈತರಿಗೆ ನೇರವಾಗಿ ಅದರ ಲಾಭಾಂಶ ಸಿಗುವಂತಾಗಿದೆ.

ಎರಡು ಬಗೆ:

ಎರಡು ರೀತಿಯಲ್ಲಿ ಕೊಪ್ಪಳ ಮಾವು ಲಭಿಸುತ್ತದೆ. ಮಾವಿನ ಹಣ್ಣು ಹಾಗೂ ಉಪ್ಪಿನ ಕಾಯಿಗೆ ಮಾವು ಪ್ರತ್ಯೇಕವಾಗಿ ಸಿಗುತ್ತಿದೆ. ಪ್ರತ್ಯೇಕ ಬಾಕ್ಸ್‌ ಇದ್ದು, ಯಾವುದನ್ನು ಬೇಕಾದರೂ ಖರೀದಿಸಬಹುದು.
ಕೊಪ್ಪಳ ಮಾವು ಎನ್ನುವ ಬ್ರ್ಯಾಂಡ್‌ ಕ್ರಿಯೇಟ್‌ ಮಾಡಲಾಗಿದ್ದು, ಭಾರಿ ಬೇಡಿಕೆ ಬರುತ್ತಿದೆ. ಬ್ರ್ಯಾಂಡ್‌ ಬಾಕ್ಸ್‌ನಲ್ಲಿಯೇ ಪೂರೈಕೆ ಮಾಡಲಾಗುತ್ತದೆ. ರೈತರಿಗೆ ನೇರವಾಗಿ ಇದರ ಲಾಭ ದೊರೆಯಲಿದೆ ಎಂದು ಕೊಪ್ಪಳದ ತೋಟಗಾರಿಕಾ ಇಲಾಖೆಯ ಜೆಡಿ ಕೃಷ್ಣ ಉಕ್ಕುಂದ ಹೇಳಿದ್ದಾರೆ. 

Follow Us:
Download App:
  • android
  • ios