ಬೆಂಗ್ಳೂರಲ್ಲಿ ವರ್ಷಾಚರಣೆ: ಹೋಟೆಲ್‌ಗೆ ಭಾರಿ ಡಿಮ್ಯಾಂಡ್
ಕೊಠಡಿಗಳ ದರ ಶೇ.30 ದರ ಹೆಚ್ಚಳ ಆದರೂ ಕಡಿಮೆ ಆಗದ ರೂಂಗಳ ಬೇಡಿಕೆ, ಪ್ಯಾಕೇಜ್‌ನಲ್ಲಿ ರಿಯಾಯಿತಿ
ಬೆಂಗಳೂರು(ಡಿ.27): ಹೊಸ ವರ್ಷಾಚರಣೆಗಾಗಿ ಪಾರ್ಟಿ ಆಯೋಜನೆಗೆ ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಸ್ಟಾರ್ ಹೋಟೆಲ್, ರೆಸ್ಟೋರೆಂಟ್‌ನ ಕೊಠಡಿಗಳಿಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಮುಂಗಡ ಬುಕ್ಕಿಂಗ್ ಜೋರಾಗಿದ್ದು, ಎಂದಿಗಿಂತ ಶೇ.30 ದರ ಏರಿಕೆಯಾಗಿದೆ. ಕಳೆದೆರಡು ವರ್ಷ ಕೋವಿಡ್‌ನಿಂದ ಬಣಗುಟ್ಟಿದ್ದ ಹೋಟೆಲ್, ರೆಸ್ಟೋರೆಂಟ್‌ಗಳೆಲ್ಲ ಈ ಬಾರಿ ‘ಆಲ್ ರಿಸವ್‌್ರ್ಡ’ ಬೋರ್ಡ್ ತಗಲಿಸುವ ಹಂತಕ್ಕೆ ಬಂದಿವೆ. ಡಿ.30ರಿಂದ ಜ.2ರವರೆಗಿನ ಮುಂಗಡ ಬುಕ್ಕಿಂಗ್ ಬಹುತೇಕ ಭರ್ತಿಯಾಗಿದೆ ಎಂದು ಹೋಟೆಲ್ ಸಂಘಟನೆ ತಿಳಿಸಿದೆ.
ಹೊಸ ವರ್ಷಾಚರಣೆಗಾಗಿ ದೆಹಲಿ, ಮುಂಬೈ ಸೇರಿ ಕಲ್ಕತ್ತಾ, ಚೆನ್ನೈ ಸೇರಿ ನೆರೆ ರಾಜ್ಯಗಳಿಂದ ಪ್ರವಾಸಿಗರು ಬರಲಿದ್ದಾರೆ. ಜತೆಗೆ ದೀರ್ಘ ರಜೆಯ ಹಿನ್ನೆಲೆಯಲ್ಲಿ ವರ್ಷಗಳ ಬಳಿಕ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ತವರಿಗೆ ಮರಳಿದ್ದಾರೆ. ಇವೆಲ್ಲ ಕಾರಣಕ್ಕಾಗಿ ಸ್ಟಾರ್ ಹೋಟೆಲ್‌ಗಳಿಂದ ಸಾಮಾನ್ಯ ಹೋಟೆಲ್‌ಗಳವರೆಗೆ ಕೊಠಡಿಗಳನ್ನು ಹೆಚ್ಚಾಗಿ ಆನ್‌ಲೈನ್‌ನಲ್ಲಿ ಮುಂಗಡ ಕಾಯ್ದಿರಿಸಲಾಗಿದೆ.
Bengaluru: ಹೊಸ ವರ್ಷಕ್ಕೆ ಉಗ್ರರ ಕರಿನೆರಳು: ರಾಜಧಾನಿಯಲ್ಲಿ ಪೊಲೀಸರ ಕಟ್ಟೆಚ್ಚರ
ದರ ಏರಿಕೆ
ರಾಜಧಾನಿಯಲ್ಲಿ ಸುಮಾರು 70ಕ್ಕೂ ಹೆಚ್ಚು ವಿವಿಧ ಸ್ಟಾರ್ ಹೋಟೆಲ್‌ಗಳಿವೆ. 2 ಸಾವಿರಕ್ಕೂ ಹೆಚ್ಚಿನ ಹೋಟೆಲ್, ರೆಸ್ಟೋರೆಂಟ್, ಪಬ್‌ಗಳಲ್ಲಿ ಇನ್‌ಡೋರ್, ಔಟ್‌ಡೋರ್‌ನಲ್ಲಿ ದೊಡ್ಡ ಪ್ರಮಾಣದ ಪಾರ್ಟಿಗಳಿಗೆ ಅವಕಾಶವಿದೆ. ಕೋವಿಡ್ ಅವಧಿಯ ಹಿಂದಿನ ಎರಡು ವರ್ಷ ಬುಕ್ಕಿಂಗ್‌ಗೆ ಬೇಡಿಕೆ ಇರಲಿಲ್ಲ. ಆಗ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಒಂದು ದಿನ ತಂಗಲು ಕೊಠಡಿಗಳಿಗೆ .2 ಸಾವಿರದಿಂದ .5 ಸಾವಿರದವರೆಗೆ ಗರಿಷ್ಠ ಬಾಡಿಗೆ ದರವಿತ್ತು. ಆದರೆ, ಈ ವರ್ಷ ಆರಂಭಿಕ ದರವೇ .5 ಸಾವಿರ ಆಗಿದೆ. ಐಷಾರಾಮಿ ಕೊಠಡಿಗಳ ಅನುಸಾರ .8 ಸಾವಿರ, .12 ಸಾವಿರದವರೆಗೆ ಮ್ಯಾನೇಜ್‌ಮೆಂಟ್ ದರ ನಿಗದಿ ಪಡಿಸಿದೆ. ಸಾಮಾನ್ಯ ಹೋಟೆಲ್‌ಗಳಲ್ಲಿ .1600ರಿಂದ .5 ಸಾವಿರವರೆಗೆ ದರವಿದೆ. ಜತೆಗೆ ನ್ಯೂ ಇಯರ್ ಪಾರ್ಟಿಗಳಿಗೆ ಪ್ರವೇಶ ದರವೂ ಹೆಚ್ಚಿಸಲಾಗಿದೆ ಎಂದು ಸ್ಟಾರ್ ಹೋಟೆಲ್ ವ್ಯವಸ್ಥಾಪಕರು ತಿಳಿಸಿದ್ದಾರೆ.
ರಿಯಾಯಿತಿ ನೀಡಿ ಗ್ರಾಹಕರಿಗೆ ಗಾಳ
ಕಪಲ್ ಹಾಗೂ ಗ್ರೂಪ್ ಬುಕ್ಕಿಂಗ್ ಮಾಡಿದಲ್ಲಿ ಡಿನ್ನರ್ ರಿಯಾಯಿತಿಯ ವೋಚರ್, ಸ್ಪಾ ಸೇರಿ ವಿಶೇಷ ಪ್ಯಾಕೇಜ್ ನೀಡಲಾಗುತ್ತಿದೆ. ಈ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಜತೆಗೆ ಸಹಜವಾಗಿ ಇರುವಂತೆ ಬೆಳಗ್ಗೆಯ ಟಿಫನ್ ಉಚಿತವಾಗಿ ನೀಡಲಾಗುತ್ತಿದೆ. ಉಳಿದಂತೆ ಲಂಚ್, ಡಿನ್ನರ್, ಡ್ರಿಂಕ್ಸ್‌ಗಳಿಗೆ ಪ್ರತ್ಯೇಕ ದರವಿದೆ. ಹಾಗೆ ನೋಡಿದರೆ ದರ ಹೆಚ್ಚೆಂದು ಬೇಡಿಕೆಯೇನೂ ಕಡಿಮೆಯಾಗಿಲ್ಲ. ನಗರದ ಒಳಗೆ ಹಾಗೂ ಹೊರವಲಯದ ಸ್ಟಾರ್ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ರೂಮ್ ಬುಕ್ಕಿಂಗ್ ಹಾಗೂ ಪಾರ್ಟಿ ಲಾಂಜನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಯ್ದಿರಿಸಲಾಗಿದೆ.
‘ಇಲ್ಲಿವರೆಗೆ ಗ್ರಾಹಕರಿಂದ ಬುಕ್ಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಇದೆ. ಆದರೆ, ಕೋವಿಡ್ ಕಾರಣದಿಂದ ಕಟ್ಟುನಿಟ್ಟಿನ ಮಾರ್ಗಸೂಚಿ ಬಂದರೆ ಸಮಸ್ಯೆ ಆಗಬಹುದು. ಹೀಗಾಗಿ ಸರ್ಕಾರ ವಹಿವಾಟಿನ ದೃಷ್ಟಿಕೋನದಿಂದಲೂ ಚಿಂತನೆ ನಡೆಸಿ ಕ್ರಮ ವಹಿಸಲಿ ಎಂದು ಹೋಟೆಲ್ ಸಂಘದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಹೇಳುತ್ತಾರೆ.
New Year party: ಹೊಸ ವರ್ಷಾಚರಣೆ ಮೇಲೆ ಉಗ್ರರ ಕಣ್ಣು: ಹದ್ದಿನ ಕಣ್ಣಿಟ್ಟ ಖಾಕಿ ಪಡೆ
ರಾಯಲ್ಟಿ, ಕಮೀಷನ್ ಹೆಚ್ಚಳ
ಮದ್ಯ, ಖಾದ್ಯಗಳ ದರ ಏರಿಕೆಯಾಗಿದೆ, ಸಂಗೀತದ ಹಕ್ಕು ಹೊಂದಿರುವ ಸಂಸ್ಥೆಗಳು ಪಾರ್ಟಿಗೆ ಹಿನ್ನೆಲೆಯಾಗಿ ಬಾಲಿವುಡ್, ಹಾಲಿವುಡ್ ಹಾಡುಗಳನ್ನು ಹಾಕುವುದಕ್ಕೆ ರಾಯಲ್ಟಿಹೆಚ್ಚಿಸಿವೆ. ಇದೇ ಕಾರಣಕ್ಕೆ ಕೆಲ ಹೋಟೆಲ್‌ಗಳಲ್ಲಿ ಪಾರ್ಟಿಯನ್ನು ರದ್ದುಪಡಿಸಲಾಗಿದೆ. ಜತೆಗೆ ಪಾರ್ಟಿ ಲಾಂಜ್, ಮ್ಯೂಸಿಕ್ ಬ್ಯಾಂಡ್, ಅಲಂಕಾರದ ವೆಚ್ಚವೂ ಹೆಚ್ಚಾಗಿದೆ. ಕೊಠಡಿ ಆನ್‌ಲೈನ್ ಮುಂಗಡ ಬುಕ್ಕಿಂಗ್ ಏಜೆನ್ಸಿಗಳು ಕಮೀಷನ್ ದರವನ್ನೂ ಏರಿಕೆ ಮಾಡಿವೆ. ಹೀಗಾಗಿ ಹೊಸ ವರ್ಷಾಚರಣೆ ದುಬಾರಿಯಾಗಲು ಕಾರಣವಾಗಿದೆ ಎಂದು ಸ್ಟಾರ್ ಹೋಟೆಲ್‌ಗಳು ತಿಳಿಸಿವೆ.
ಕೋವಿಡ್ ಇದ್ದ ಕಾರಣ ಕಳೆದೆರಡು ವರ್ಷ ಹೋಟೆಲ್‌ಗಳು ಭರ್ತಿ ಆಗಿರಲಿಲ್ಲ. ಆದರೆ, ಈ ವರ್ಷ ಹೋಟೆಲ್‌ಗಳ ರೂಮುಗಳು ಈಗಾಗಲೆ ಬಹುತೇಕ ಭರ್ತಿಯಾಗಿವೆ. ಬೇಡಿಕೆ ಕಾರಣದಿಂದ ಸಹಜವಾಗಿ ದರದಲ್ಲೂ ವ್ಯತ್ಯಾಸವಾಗಿದೆ ಅಂತ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಕಾರ್ಯದರ್ಶಿ ವೀರೇಂದ್ರ ಕಾಮತ್ ತಿಳಿಸಿದ್ದಾರೆ.