ಚಿಕ್ಕಮಗಳೂರು(ಆ.28): ಕೇಂದ್ರದ ತಂಡ ವರದಿ ನೀಡಿದ ನಂತರ ದೊಡ್ಡ ಪ್ರಮಾಣದ ಪರಿಹಾರದ ಮೊತ್ತ ಕೇಂದ್ರದಿಂದ ಬರುತ್ತದೆ. ರಾಜ್ಯ ಸರ್ಕಾರ ಮುಂದುವರಿದ ಕೆಲಸಗಳನ್ನು ನಿಲ್ಲಿಸಿ, ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಥಮ ಆದ್ಯತೆ ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅನೇಕ ರಾಜ್ಯಗಳಲ್ಲಿ ಅತಿವೃಷ್ಟಿ, ಪ್ರವಾಹದ ಹಾನಿಯಾಗಿದ್ದು, ರಾಜ್ಯದಲ್ಲಿ ಆಗಿರುವ ನಷ್ಟದ ಬಗ್ಗೆ ನಾನು ಮನವಿ ಮಾಡಿದ ಮೇಲೆ ಕೇಂದ್ರ ಗೃಹಮಂತ್ರಿಗಳು ಒಂದು ತಂಡವನ್ನೇ ಇಲ್ಲಿಗೆ ಕಳುಹಿಸಿಕೊಟ್ಟಿದ್ದಾರೆ. ಮೂರು ದಿನ ಆ ತಂಡ ಎಲ್ಲ ಕಡೆ ಬರಲಾಗದಿದ್ದರೂ ಹೆಚ್ಚು ಅನಾಹುತ ಆದ ಕಡೆ ಹೋಗಿ ವೀಕ್ಷಣೆ ಮಾಡಿದೆ ಎಂದು ಹೇಳಿದರು.

ಮನೆ ನಿರ್ಮಾಣಕ್ಕೆ 5 ಲಕ್ಷ:

ನಾವೀಗ ಕೇಂದ್ರ ಸರ್ಕಾರ ಏನು ಮಾಡುತ್ತದೆ ಅಂತ ಕಾಯುವುದಿಲ್ಲ. ಯಾವ ಮನೆಗಳು ಪೂರ್ಣ ನಾಶವಾಗಿದೆ, ಆ ಮನೆ ನಿರ್ಮಾಣಕ್ಕೆ 5 ಲಕ್ಷ ನೀಡುತ್ತಿದ್ದೇವೆ. ದುರಸ್ತಿ ಮಾಡುವ ಹಾಗಿದ್ದರೆ ಆ ಮನೆಗೆ ದುರಸ್ತಿಗೆ 1 ಲಕ್ಷ, ಅಂತಹ ಮನೆಗಳಲ್ಲಿ ವಾಸವಿರಲಾಗದಿದ್ದಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಳ್ಳಲು 50 ಸಾವಿರ ಹಾಗೂ ಮನೆ ಮತ್ತು ಆಸ್ತಿ ಕಳೆದುಕೊಂಡು ಉಟ್ಟಬಟ್ಟೆಯಲ್ಲೇ ಬಂದಿರುವವರಿಗೆ 10 ಸಾವಿರ ನೀಡುವ ತೀರ್ಮಾನ ಕೈಗೊಂಡಿದ್ದೇನೆ. ಅದನ್ನು ಜಿಲ್ಲಾಧಿಕಾರಿಗಳು ಕಾರ್ಯಗತಗೊಳಿಸುತ್ತಿದ್ದಾರೆ ಎಂದರು.

ಕುಟುಂಬಗಳ ಸ್ಥಳಾಂತರ:

ಭೂ ಕುಸಿತ ಉಂಟಾಗಿರುವ ಜಾಗದಲ್ಲಿ ಮನೆ ನಿರ್ಮಿಸಲು ಆಗುವುದೇ ಇಲ್ಲ ಎಂಬುದು ಕಂಡುಬಂದರೆ ಆ ಕುಟುಂಬಗಳನ್ನು ಅಲ್ಲಿಂದ ಸ್ಥಳಾಂತರಿಸಿ ಬೇರೆ ಜಾಗದಲ್ಲಿ ರೈತರಿಂದ ಭೂಮಿ ಖರೀದಿಸಿ ಅಲ್ಲಿ ಮನೆಗಳನ್ನು ಕಟ್ಟಬೇಕಾಗಿದೆ. ಮನೆ ಜೊತೆಗೆ ತೋಟ, ಗದ್ದೆ ಕಳೆದುಕೊಂಡಿರುವವರಿಗೆ ಬದಲೀ ಭೂಮಿಯನ್ನು ನೀಡಲಾಗುವುದೇ ಎಂಬ ಪ್ರಶ್ನೆ ಮುಂದಿಟ್ಟಾಗ, ಸಮೀಕ್ಷೆಯ ನಂತರ ಹಾನಿಯ ಒಂದು ಅಂದಾಜು ಸಿಗುತ್ತದೆ. ಅದನ್ನು ಪರಿಗಣಿಸಿದ ನಂತರ ನಮ್ಮ ಆದ್ಯತೆ ಮೊದಲು ವಾಸದ ಮನೆ ನಿರ್ಮಿಸಿಕೊಡುವುದು ಎಂದು ಹೇಳಿದರು.

ಕಾಫಿತೋಟ, ಗದ್ದೆ, ಮನೆ ಹಾಳಾಗಿವೆ, ಸೇತುವೆಗಳು ಕೊಚ್ಚಿಹೋಗಿವೆ. ರಸ್ತೆಗಳು ನಾಶವಾಗಿವೆ. ಅದಕ್ಕೆ ಎಲ್ಲ ಇಲಾಖೆಗಳಿಂದ ಸರಿಪಡಿಸಲು ಮಾಡಬೇಕಾದ ಕೆಲಸಗಳನ್ನು ಕಾರ್ಯಗತಗೊಳಿಸಲು ಅಗತ್ಯ ವರದಿ ತರಿಸಿಕೊಳ್ಳುತ್ತಿದ್ದೇನೆ. ಮಳೆ ಈಗ ನಿಲ್ಲುತ್ತಾ ಬಂದಿದೆ. ಎಲ್ಲ ಮಾಹಿತಿ ಪಡೆದು ಮೊದಲು ಮನೆ ನಿರ್ಮಾಣಕ್ಕೆ ಅತಿ ಹೆಚ್ಚಿನ ಆದ್ಯತೆ ನೀಡಿ ಉಳಿದ ಹಾನಿಯನ್ನು ಸರಿಮಾಡುತ್ತೇವೆ ಎಂದರು.

ದಾರಿ ಕಾದು ಕುಳಿತ ನಿರಾಶ್ರಿತರ ಭೇಟಿಯಾಗದೇ ಹೋದ ಸಿಎಂ..!

ಕೇಂದ್ರದಿಂದ ಎಷ್ಟುಪರಿಹಾರದ ಮೊತ್ತವನ್ನು ರಾಜ್ಯ ಕೇಳಿದೆ ಎಂದಾಗ, ರಾಜ್ಯದ ನೆರೆ ಹಾಗೂ ಅತಿವೃಷ್ಟಿನಷ್ಟ 30,000 ಕೋಟಿ ಎಂದು ಅಂದಾಜು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಎಷ್ಟುಪರಿಹಾರ ಕೊಡುತ್ತದೋ ಗೊತ್ತಿಲ್ಲ. ಕಳೆದ ವಾರದ ದೆಹಲಿಗೆ ಹೋಗಿ ಗೃಹಮಂತ್ರಿಗಳ ಬಳಿ ಪರಿಸ್ಥಿತಿ ವಿವರಿಸಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿದ್ದೇನೆ. ಅವರು ಸಹ ರಾಜ್ಯದಲ್ಲಿ ಕೆಲವು ಕಡೆ ಬಂದು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ನಷ್ಟದ ಅಂದಾಜು ಸಹ ಗೊತ್ತಾಗಿದೆ. ರಾಜ್ಯದಲ್ಲಿ ಎಷ್ಟುಅನಾಹುತ ಆಗಿದೆ ಎನ್ನುವುದು ಅವರಿಗೆ ಮನವರಿಕೆಯಾಗಿದೆ. ಇನ್ನು ಒಂದು ಸಲ ಸಮೀಕ್ಷೆ ಮಾಡಿಸಬೇಕಾದಲ್ಲಿ ಮತ್ತೊಂದು ತಂಡವನ್ನು ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಒಟ್ಟಿನಲ್ಲಿ ಪರಿಹಾರ ಕೊಡುವುದು ನಮ್ಮ ಮೊದಲ ಆದ್ಯತೆ. ಆ ಬಗ್ಗೆ ಎಲ್ಲ ರೀತಿಯಲ್ಲೂ ಯೋಚಿಸುತ್ತಿದ್ದೇವೆ ಎಂದರು.