ಚಿಕ್ಕಮಗಳೂರು(ಆ.28): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅತಿವೃಷ್ಟಿಪ್ರದೇಶ ಮೂಡಿಗೆರೆ ತಾಲೂಕಿಗೆ ಭೇಟಿ ನೀಡುವ ವಿಚಾರ ಸೋಮವಾರ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಗೌತಮ್‌ ಬಗಾದಿ, ಪೊಲೀಸ್‌ ಅಧೀಕ್ಷಕ ಹರೀಶ್‌ ಪಾಂಡೆ, ಮೂಡಿಗೆರೆ ತಾಲೂಕಿಗೆ ಭೇಟಿ ನೀಡಿ ಬಿಜಿಎಸ್‌ ಶಾಲೆ ಬಳಿ ಹೆಲಿಪ್ಯಾಡ್‌ ನಿರ್ಮಿಸಿ ಶಾಲಾ ಆವರಣದಲ್ಲಿ ಇದ್ದ ಗುಂಡಿ ಗೊಟರುಗಳನ್ನೆಲ್ಲಾ ಮುಚ್ಚಿಸಿದ್ದರು.

ಭದ್ರತೆಗಾಗಿ ಸಾಕಷ್ಟುಸಂಖ್ಯೆಯಲ್ಲಿ ಪೊಲೀಸರನ್ನು ಬಿಜಿಎಸ್‌ ಶಾಲಾ ಆವರಣದಿಂದ ಪಟ್ಟಣದವರೆಗೆ ನಿಯೋಜಿಸಲಾಗಿತ್ತು. ಮಂಗಳವಾರ ಬೆಳಗ್ಗೆ 10 ಗಂಟೆವರೆಗೂ ಪೊಲೀಸ್‌ ಸರ್ಪಗಾವಲೇ ಇತ್ತು. ಬಳಿಕ ಮುಖ್ಯಮಂತ್ರಿಗಳು ಚಿಕ್ಕಮಗಳೂರಿಗೆ ಹೆಲಿಕ್ಯಾಪ್ಟರ್‌ ಮೂಲಕ ಬಂದು ಅಲ್ಲಿಂದ ಮೂಡಿಗೆರೆಗೆ ರಸ್ತೆ ಮಾರ್ಗದಲ್ಲಿ ಸಂಚರಿಸಿದರು.

ತರಾತುರಿಯಲ್ಲಿ ತೆರಳಿದ್ರು ಸಿಎಂ:

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರಾರಂಭದಲ್ಲಿ ಬಾರಿ ಅತಿವೃಷ್ಟಿಯಿಂದ ಕೊಚ್ಚಿ ಹೋದ ಮಲೆಮನೆ ಮತ್ತು ದುರ್ಗದಹಳ್ಳಿ ಗ್ರಾಮಕ್ಕೆ ಬಳಿಕ ಬಿದರಹಳ್ಳಿಯ ಕಾಳಜಿ ಕೇಂದ್ರಕ್ಕೆ ಭೇಟಿ ನೀಡುವ ರೂಪುರೇಷೆ ತಯಾರಾಗಿತ್ತು. ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಪಟ್ಟಣದ ಪ್ರವಾಸಿ ಮಂದಿರಕ್ಕೆ ಬಂದು ಅಲ್ಲಿಂದ ನೇರವಾಗಿ ಮಲೆಮನೆ ಗ್ರಾಮಕ್ಕೆ ತೆರಳಿ, ಅಲ್ಲಿಂದ ಬೇರೆ ಯಾವುದೇ ಗ್ರಾಮಕ್ಕೂ ಭೇಟಿ ನೀಡದೇ ಬಿದರಹಳ್ಳಿಯ ಕಾಳಜಿ ಕೇಂದ್ರಕ್ಕೂ ತೆರಳದೇ ತರಾತುರಿಯಲ್ಲಿ ಚಿಕ್ಕಮಗಳೂರಿಗೆ ತೆರಳಿದರು.

ಬೆಳಗ್ಗಿನಿಂದಲೂ ಕಾದು ಕುಳಿತಿದ್ದ ರೈತರು:

ತಾಲೂಕಿನ ಬಾಳೂರು, ಕಳಸ, ಬಣಕಲ್‌, ಗೋಣಿಬೀಡು ಭಾಗಗಳಲ್ಲಿ ಮಹಾಮಳೆಯಿಂದ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಪ್ರದೇಶದ ಜನ ಮುಖ್ಯಮಂತ್ರಿಗಳ ಭೇಟಿಗಾಗಿ ಕಾದುಕುಳಿತಿದ್ದರು. ಅಲ್ಲದೇ, ಬಿದರಹಳ್ಳಿ ಕಾಳಜಿ ಕೇಂದ್ರದಲ್ಲಿ ಮಲೆಮನೆ, ದುರ್ಗದಹಳ್ಳಿ, ಮಧುಗುಂಡಿಯ ನಿರಾಶ್ರಿತರ ಜೊತೆಯಲ್ಲಿ ರೈತ ಸಂಘದ ಪ್ರಮುಖರು ತಮ್ಮ ಅಹವಾಲು ಹೇಳಿಕೊಳ್ಳಲು ಬೆಳಗ್ಗೆಯಿಂದ ಕಾದು ಕುಳಿತರೂ ಪ್ರಯೋಜನವಾಗಲಿಲ್ಲ.

ಚಿಕ್ಕಮಗಳೂರು : ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಗಾದಿಗೆ ಐವರು ಆಕಾಂಕ್ಷಿ