ಶಿವಕುಮಾರ್ ಕುಷ್ಟಗಿ

ಗದಗ[ನ.30]:  ಬಂಪರ್ ಬೆಲೆ ಬಂದದ್ದೇ ಬಂದದ್ದು, ಕಳ್ಳಕಾಕರ ಕಣ್ಣೀಗ ಈರುಳ್ಳಿಯತ್ತ ಉರುಳಿದೆ. ರಾತ್ರೋ ರಾತ್ರಿ ಹೊಲದಿಂದ ಕ್ವಿಂಟಲ್‌ಗಟ್ಟಲೇ ಈರುಳ್ಳಿಯನ್ನು ಕದ್ದೊಯ್ಯುತ್ತಿದ್ದಾರೆ. ಈಗಾಗಲೇ ಮಳೆಯಿಂದ ಬಹುತೇಕ ಫಸಲನ್ನು ಕಳೆದುಕೊಂಡು ಕಂಗಾಲಾಗಿದ್ದ ರೈತರೀಗ ಕಳ್ಳರ ಕಾಟದಿಂದ ಮತ್ತಷ್ಟು ಹೈರಾಣಾಗಿದ್ದು, ಅಳಿದುಳಿದ ಅಲ್ಪ ಬೆಳೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. 

ಕಳೆದ 15 - 20 ದಿನಗಳಿಂದ ಈರುಳ್ಳಿ ದರ ಮಾರುಕಟ್ಟೆಯಲ್ಲಿ ಒಂದೇ ಸಮನೆ ಏರುತ್ತಿದೆ. ಒಂದರ್ಥದಲ್ಲಿ ಬಂಗಾರದ ಬೆಲೆಯೇ ಬಂದಿದೆ. ದಶಕದಲ್ಲೇ ಇಷ್ಟೊಂದು ಬೆಲೆಯನ್ನು ಕಂಡಿರದ ಸ್ಥಳೀಯ ಈರುಳ್ಳಿಗೆ ಈಗ ಶುಕ್ರದೆಸೆ ಶುರುವಾಗಿದೆ. ಮಳೆಯಿಂದಾಗಿ ಫಸಲು ನಾಶವಾಗಿದ್ದು, ಹೊರಗಿನಿಂದ ಈರುಳ್ಳಿ ಬಾರದಿರುವ ಹಿನ್ನೆಲೆಯಲ್ಲಿ ದಿನೇ ದಿನೆ ದರ ಏರುತ್ತಲೇ ಇದೆ. ಇದರಿಂದ ಕಳ್ಳರ ಕೆಂಗಣ್ಣು ಈರುಳ್ಳಿಯತ್ತ ತಿರುಗಿದೆ. ಗದಗ ಸೇರಿದಂತೆ ಈರುಳ್ಳಿ ಬೆಳೆಯುವ ಜಿಲ್ಲೆಗಳಲ್ಲಿ ಕಳ್ಳರ ಕಾಟ ತೀವ್ರಗೊಂಡಿದೆ.

ಗದಗ ಜಿಲ್ಲೆಯ ಗದಗ, ರೋಣ ಹಾಗೂ ಗಜೇಂದ್ರಗಡ ತಾಲೂಕುಗಳಲ್ಲೇ 7 - 8 ಈರುಳ್ಳಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ರೈತರು ಈರುಳ್ಳಿಯನ್ನು ಕಿತ್ತು, ಹೊಲದಲ್ಲಿ ಒಣಗಲು ಹಾಕಿದ್ದರು. ರಾತ್ರಿ ಹೊತ್ತಲ್ಲಿ ಟಂಟಂ ವಾಹನ ತಂದು ಕಳ್ಳರು ಅದನ್ನು ತುಂಬಿಕೊಂಡು ಹೋಗಿದ್ದಾರೆ.  

ಗದಗ ತಾಲೂಕಿನಲ್ಲೂ ಹಸಿ ಈರುಳ್ಳಿ ಯನ್ನು ಕದ್ದು ಸಾಗಿಸಿದ್ದು, ರೈತರಿಗೆ ಹೊಸದೊಂದು ತಲೆನೋವು ಶುರು ವಾಗಿದೆ. ಹಗಲು-ರಾತ್ರಿ ಹೊಲದಲ್ಲಿ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಳೆಯುವಿಕೆ ಜತೆಗೆ ಕಳ್ಳರ ಕಾಟ: ಮೊದಲು ಬರ, ನಂತರ ಪ್ರವಾಹದಿಂದ ಈ ಬಾರಿ ಈರುಳ್ಳಿ ಉತ್ಪಾದನೆ ಪ್ರಮಾಣ ಕುಸಿದಿದೆ. ಜತೆಗೆ ಅಕ್ಟೋಬರ್ ಕೊನೆ ವಾರದಲ್ಲಿ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆ ಕೊಳೆಯಲು ಶುರುವಾಗಿದೆ. ಅಳಿದುಳಿದ ಈರುಳ್ಳಿಯನ್ನು ಹಸನು ಮಾಡಿ, ಒಣಗಿಸಿ ಮಾರುಕಟ್ಟೆಗೆ ಒಯ್ಯಲು ರೈತರು ಸಿದ್ಧತೆ ಮಾಡಿಕೊಳ್ಳು ತ್ತಿದ್ದಾರೆ. ಸಾಮಾನ್ಯವಾಗಿ ಹೊಲದಲ್ಲಿಯೇ ಈರುಳ್ಳಿ ಒಣಗಿಸಿ, ರಾಶಿಮಾಡುತ್ತಾರೆ. ಕಳ್ಳರು ಕಣ್ಣು ಇದೀಗ ಆ ರಾಶಿಯ ಮೇಲೆ ಬಿದ್ದಿದೆ.

225 ಕ್ವಿಂಟಲ್ ಕಳವು: ರೋಣ ಹಾಗೂ ಗಜೇಂದ್ರಗಡ ತಾಲೂಕಿನ 7 ಹಳ್ಳಿ, ಗದಗ ತಾಲೂಕಿನ 3-4 ಗ್ರಾಮ ಗಳಲ್ಲಿ ಕಳೆದ 6 - 7 ದಿನಗಳಿಂದ ಈರುಳ್ಳಿ ಕಳ್ಳತನ ನಡೆಯುತ್ತಿದೆ. ಇದುವರೆಗೆ ಅಂದಾಜು 225 ಕ್ವಿಂಟಲ್‌ನಷ್ಟು (ಸುಮಾರು 22.5 ಟನ್) ಈರುಳ್ಳಿ ಕಳ್ಳತನವಾಗಿರಬಹುದೆಂಬ ಅಂದಾಜಿಸಲಾಗಿದ್ದು, ಸುಮಾರು 450-500 ಚೀಲ ಈರುಳ್ಳಿ ಹೊತ್ತೊಯ್ದಿದ್ದಾರೆ. 

ಈರುಳ್ಳಿ 100 ರೂ. ಅಲ್ಲ 500 ರೂ. ಆಗಲಿ ನಮಗೆ ಡೊಂಟ್ ಕೇರ್!...

ಗಜೇಂದ್ರಗಡ ತಾಲೂಕಿನ ನರೇಗಲ್ ಗ್ರಾಮದ ಗುರುಬಸಯ್ಯ ಪ್ರಭುಸ್ವಾಮಿ ಮಠ ಅವರ ಸುಮಾರು 70 ಚೀಲ ಈರುಳ್ಳಿ ಕಳ್ಳತನವಾಗಿದ್ದರೆ, ಅದೇ ಗ್ರಾಮದ ನಿಂಗಪ್ಪ ಹಡಪದ ಅವರ 30 ಚೀಲ ಈರುಳ್ಳಿ ಕಳ್ಳತನವಾಗಿದೆ ಎಂಬ ಮಾಹಿತಿ ಲಭಿಸಿದೆ. ರೋಣ ತಾಲೂಕಿನ ಸವಡಿ ಗ್ರಾಮದ ಕಾಶಪ್ಪ ಚಲವಾದಿ 50 ಚೀಲ ಈರುಳ್ಳಿ ಕಳ್ಳತನವಾಗಿದೆ. ರೋಣ ತಾಲೂಕಿನ ಮಲ್ಲಾಪುರ ಗ್ರಾಮದ ವೀರಪ್ಪ ಚಳಗೇರಿ, ಸವಡಿ ಗ್ರಾಮದ ರೇಣುಕಾ ಹಿರೇಮಠ ಅವರ ಈರುಳ್ಳಿಯೂ ಕಳುವಾಗಿದೆ. ರೋಣ, ಗಜೇಂದ್ರಗಡ ಹಾಗೂ ಗದಗ ತಾಲೂಕಿನ ಇನ್ನೂ ಕೆಲ ರೈತರ ಈರುಳ್ಳಿ ಕಳುವಾಗಿದೆ. 

ಆದರೆ ಯಾರೂ ದೂರು ನೀಡಿಲ್ಲ. ಹೊಲಗಳು ಗ್ರಾಮದಿಂದ ನಾಲ್ಕೈದು ಕಿ.ಮೀ. ದೂರದಲ್ಲಿದ್ದು, ರಾತ್ರಿಯೆಲ್ಲಾ ಕಾವಲು ಕಾಯುವುದು ಕೆಲವರಿಗೆ ಕಷ್ಟವಾಗಿದೆ. ಇದು ಕಳ್ಳರಿಗೆ ವರದಾನವಾಗಿ ಪರಿಣಮಿಸಿದೆ.

ಮೆಣಸಿನಕಾಯಿ ಸಹ ಕಳ್ಳತನ: ಈರುಳ್ಳಿ ಜತೆಗೆ ಮೆಣಸಿನಕಾಯಿ ಕಳ್ಳ ತನಕ್ಕೂ ಕಳ್ಳರು ಮುಂದಾಗಿದ್ದು, ಕೆಲವೊಂದು ಹೊಲಗಳಲ್ಲಿ ಈರುಳ್ಳಿಯೊಟ್ಟಿಗೆ ಮೆಣಸಿನಕಾಯಿ ಕದಿಯುತ್ತಿ ದ್ದಾರೆ. ಈ ಬಾರಿ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಅತಿಯಾದ ಮಳೆಯಿಂದಾಗಿ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳು ಹಾಳಾಗಿದ್ದು, ಉಳಿದಿರುವ ಅಲ್ಪ ಬೆಳೆಗಳೂ ಕಳ್ಳರ ಪಾಲಾಗುತ್ತಿದೆ.