ಹುಬ್ಬಳ್ಳಿ [ಸೆ.12] : ಬೆಣ್ಣಿಹಳ್ಳ ಮತ್ತು ತುಪರಿಹಳ್ಳಗಳ ಪ್ರವಾಹದಿಂದ ಮನೆ ಬಿದ್ದವರಿಗೆ ಶೀಘ್ರದಲ್ಲೇ ಪರಿಹಾರ ನೀಡಲಾಗುವುದು. ಬೆಳೆಹಾನಿ ಸಂಬಂಧಪಟ್ಟಂತೆ ಮುಂದಿನ ವಾರದೊಳಗೆ ಸಮೀಕ್ಷೆ ನಡೆಸಿ ಪರಿಹಾರ ವಿತರಿಸಲಾಗುವುದು ಎಂದು ತಹಸೀಲ್ದಾರ್ ನವೀನ ಹುಲ್ಲೂರು ತಿಳಿಸಿದ್ದಾರೆ. ಇದಕ್ಕೆ ಒಪ್ಪಿರುವ ಶಿರೂರು ಗ್ರಾಮಸ್ಥರು, ಒಂದು ವೇಳೆ ವಾರದೊಳಗೆ ಪರಿಹಾರ ಸಿಗದಿದ್ದಲ್ಲಿ ಮತ್ತೆ ಹೋರಾಟ ಪ್ರಾರಂಭಿಸಲಾಗುವುದು ಎಂದರು.

ತಾಲೂಕಿನ ಶಿರೂರು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಹಿನ್ನೆಲೆ ತಹಸೀಲ್ದಾರ್ ನವೀನ ಹುಲ್ಲೂರು ಅವರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ನೆರೆಯಿಂದ ತೊಂದರೆಗೀಡಾದವರಿಗೆ ವಾರದೊಳಗೆ ಪರಿಹಾರ ವಿತರಿಸಲಾಗುವುದು. ಈಗಾಗಲೇ ಸಮೀಕ್ಷೆ ಪ್ರಾರಂಭಿಸಲಾಗಿದೆ. ಹೊಲಗಳಿಗೆ ಹೋಗುವ ರಸ್ತೆಗಳ ಸುಧಾರಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೆ ಗ್ರಾಮಸ್ಥರು, ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಬೇಕೆಂದರೆ, ನೀವು ನಮ್ಮ ಗ್ರಾಮಕ್ಕೆ ಬರಬೇಕೆಂದರೆ ನಾವು ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಬೇಕೇ? ನಾವು ಪ್ರತಿಭಟನೆ ನಡೆಸದಿದ್ದಲ್ಲಿ ನೀವು ಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ನಾವು ನಿಮ್ಮ ಮಾತಿಗೆ ಬೆಲೆ ಕೊಟ್ಟು ನಮ್ಮ ಹೋರಾಟವನ್ನು ಹಿಂಪಡೆದಿದ್ದೇವೆ. ಒಂದು ವೇಳೆ ವಾರದೊಳಗೆ ನಮಗೆ ಪರಿಹಾರ ಕೊಡದಿದ್ದಲ್ಲಿ ಮತ್ತೆ ಹೋರಾಟ ನಡೆಸಬೇಕಾಗುತ್ತದೆ. ಈ ತಹಸೀಲ್ದಾರ್ ಕಚೇರಿಯೆದುರೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಕಲ್ಲನಗೌಡ ದೇಸಾಯಿ, ಶಂಕರಪ್ಪ ಕುರಬುಂದ, ಬಸನಗೌಡ ಪಾಟೀಲ, ದ್ಯಾಮಣ್ಣ ಮಡಿವಾಳರ, ಈರಪ್ಪ ಜಮ್ನೂರ, ಅಶೋಕ ಸಂಕದ, ಶೇಖಣ್ಣ ಬಡಿಗೇರ, ಚಂದ್ರಗೌಡ ಗುತ್ತಿಮಗೌಡರ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.