Asianet Suvarna News Asianet Suvarna News

ಕಾಯಂ ಬಾಗಿಲು ಮುಚ್ಚಿತು ಪ್ರಸಿದ್ಧ ಕನ್ನಡ ಚಿತ್ರಮಂದಿರ!

ಕನ್ನಡ ಚಿತ್ರಗಳನ್ನಷ್ಟೇ ಪ್ರದರ್ಶನ ಮಾಡುತ್ತಿದ್ದ ಪ್ರಸಿದ್ಧ ಚಿತ್ರ ಮಂದಿರ ಒಂದು ಬಾಗಿಲು ಮುಚ್ಚಿದೆ. 

hubli Sanjotha talkies permanently shutdown snr
Author
Bengaluru, First Published Oct 20, 2020, 7:20 AM IST

ವರದಿ : ಶಿವಾನಂದ ಗೊಂಬಿ
 
ಹುಬ್ಬಳ್ಳಿ (ಅ.20):
 ಕಳೆದ 45 ವರ್ಷಗಳಿಂದ ಬರೀ ಕನ್ನಡ ಭಾಷೆಯ ಚಿತ್ರಗಳನ್ನು ಪ್ರದರ್ಶಿಸಿ ಕನ್ನಡ ಪ್ರೇಮ ಮೆರೆಯುತ್ತಿದ್ದ ಹುಬ್ಬಳ್ಳಿಯ ಸಂಜೋತಾ ಚಿತ್ರಮಂದಿರ ಈಗ ಕಾಯಂ ಆಗಿ ಬಾಗಿಲು ಮುಚ್ಚಿದೆ. ಒಂದೆಡೆ ಮಲ್ಟಿಫ್ಲೆಕ್ಸ್‌, ಮೊಬೈಲ್‌ ಹಾವಳಿಯಾಗಿದ್ದರೆ, ಮತ್ತೊಂದೆಡೆ ಕೊರೋನಾ ಎಫೆಕ್ಟ್ನಿಂದಾಗಿ ಈ ಚಿತ್ರಮಂದಿರ ಬಂದ್‌ ಆದಂತಾಗಿದೆ. ಇದರಿಂದಾಗಿ ಕನ್ನಡ ಚಿತ್ರಮಂದಿರವೊಂದನ್ನು ಕನ್ನಡಿಗರು ಕಳೆದುಕೊಂಡಂತಾಗಿದೆ.

ವಾಣಿಜ್ಯನಗರಿ, ಛೋಟಾ ಮುಂಬೈ ಎಂದು ಖ್ಯಾತವಾಗಿರುವ ಹುಬ್ಬಳ್ಳಿಯ ಇಂದಿರಾ ಗ್ಲಾಸ್‌ ಹೌಸ್‌ ಪಕ್ಕದಲ್ಲಿ ಈ ಸಂಜೋತಾ ಚಿತ್ರಮಂದಿರವಿದೆ. 1976ರಲ್ಲಿ ಪ್ರಾರಂಭವಾಗಿದ್ದ ಸಂಜೋತಾ ಚಿತ್ರಮಂದಿರ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬಂತಿತ್ತು. ಈ ಚಿತ್ರಮಂದಿರ ಪ್ರಾರಂಭವಾಗಿದ್ದಾಗಿನಿಂದಲೂ ಒಂದೇ ಒಂದು ಪರಭಾಷೆ ಚಿತ್ರವನ್ನು ಇಲ್ಲಿ ಪ್ರದರ್ಶಿಸಿಲ್ಲ. ನಿತ್ಯವೂ ಕನ್ನಡ ಡಿಂಡಿಮ ಮೊಳಗುತ್ತಿತ್ತು ಇಲ್ಲಿ. ಎಷ್ಟೇ ಒತ್ತಡ, ಬಲವಂತ ಬಂದರೂ ಇದರ ಮಾಲೀಕರು ಮಾತ್ರ ಕನ್ನಡ ಬಿಟ್ಟು ಬೇರೆ ಭಾಷೆಯ ಚಿತ್ರ ಪ್ರದರ್ಶಿಸುವ ಮನಸು ಮಾಡಿದ್ದಿಲ್ಲ.

ಚಿತ್ರ​ಮಂದಿ​ರಗಳು ಶಾಶ್ವತ ಬಂದ್‌: ಕಾರಣ..? .

ಇನ್ನೂ ಈ ಚಿತ್ರಮಂದಿರಕ್ಕೆ ಅಂಟಿಕೊಂಡಿರುವ ಸುಜಾತಾ ಚಿತ್ರಮಂದಿರದಲ್ಲಿ ಒತ್ತಡಕ್ಕೆ ಮಣಿದು ಒಂದು ಇಂಗ್ಲಿಷ್‌, ಮೂರು ಹಿಂದಿ ಚಿತ್ರಗಳನ್ನು ಪ್ರದರ್ಶಿಸಿದ್ದುಂಟು. ಉಳಿದಂತೆ ಅಲ್ಲೂ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಲಾಗಿದೆ. ಆದರೆ ಸಂಜೋತಾದಲ್ಲಿ ಮಾತ್ರ ಕನ್ನಡಭಾಷೆ ಬಿಟ್ಟು ಬೇರೆ ಚಿತ್ರಗಳನ್ನು ಪ್ರದರ್ಶಿಸಿಯೇ ಇಲ್ಲ.

ಶ್ರೀನಾಥ, ಮಂಜುಳಾ ಜೋಡಿಯ ಅಭಿನಯದ ‘ಪ್ರಣಯರಾಜ’ ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರ. ಆನಂತರ ರಾಜಕುಮಾರ, ಶ್ರೀನಾಥ, ಶಂಕರನಾಗ್‌, ಶಿವರಾಜಕುಮಾರ, ರವಿಚಂದ್ರನ್‌, ವಿಷ್ಣವರ್ಧನ, ಅಂಬರೀಶ ಹೀಗೆ ಹತ್ತಾರು ನಟರ ನೂರಾರು ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ. ಎಷ್ಟೋ ಚಿತ್ರಗಳು ಶತಮಾನೋತ್ಸವ ಕಂಡಿದ್ದು ಇದೇ ಚಿತ್ರಮಂದಿರದಲ್ಲಿ.

ಸಂಜೋತಾ ಚಿತ್ರಮಂದಿರವನ್ನು ಪ್ರಾರಂಭಿಸಿದ್ದು ಡಿ.ಎನ್‌. ಸೂಜಿ ಎಂಬುವವರು. ಅವರ ಸಹೋದರ ಮಹಾವೀರ ಸೂಜಿ ಇದನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರು. ಈಗ ಈ ಇಬ್ಬರು ಇಲ್ಲ. ಮಹಾವೀರ ಸೂಜಿ ಅವರ ಪುತ್ರ ಅಮರ ಸೂಜಿ ನಿರ್ವಹಿಸುತ್ತಿದ್ದಾರೆ.

ಕಳೆದ ವೈಭವ:

ಹೀಗೆ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುತ್ತಾ ಕನ್ನಡಪ್ರೇಮ ಮೆರೆಯುತ್ತಿದ್ದ, ಕನ್ನಡಾಂಬೆಗೆ ತನ್ನದೇ ರೀತಿಯಲ್ಲಿ ವಂದಿಸುತ್ತಿದ್ದ ಸಂಜೋತಾ ಟಾಕೀಸ್‌ ಇದೀಗ ಕಾಯಂ ಆಗಿ ಬಂದ್‌ ಆಗಿದೆ. ಇದಕ್ಕೆ ಕಾರಣ ಮಲ್ಟಿಫ್ಲೆಕ್ಸ್‌, ಮೊಬೈಲ್‌, ಟಿವಿ ಹಾವಳಿ. ಇದರಿಂದಾಗಿ ಕಳೆದ ಒಂದೂವರೆ ವರ್ಷದಿಂದಲೇ ನಷ್ಟಅನುಭವಿಸಲು ಶುರುವಾಯಿತು. ಹೀಗಾಗಿ ಕೆಲವೊಂದಿಷ್ಟುದಿನ ರಾತ್ರಿ ಶೋಗಳನ್ನು ಬಂದ್‌ ಮಾಡಲಾಯಿತು. ಆನಂತರದ ದಿನಗಳಲ್ಲಿ ಮತ್ತೊಂದು ಪ್ರದರ್ಶನ ಸ್ಥಗಿತಗೊಂಡಿತು. ಆಮೇಲೆ ಎರಡು ಪ್ರದರ್ಶನಕ್ಕಷ್ಟೇ ಸೀಮಿತವಾಗಿತ್ತು. ಕೊರೋನಾ ಲಾಕ್‌ಡೌನ್‌ ಘೋಷಣೆ ಮುನ್ನ ಒಂದು ತಿಂಗಳ ಮುಂಚೆ ಚಿತ್ರಮಂದಿರವನ್ನೇ ಕ್ಲೋಸ್‌ ಮಾಡಲಾಗಿತ್ತು. ಇದೀಗ ಕೊರೋನಾ ಅನ್‌ಲಾಕ್‌ ಘೋಷಣೆಯಾಗಿದೆ. ಚಿತ್ರಮಂದಿರ ಪ್ರಾರಂಭಿಸಲು ಅವಕಾಶವಿದೆ. ಆದರೆ ಚಿತ್ರಮಂದಿರ ನಡೆಯಲ್ಲ, ಏಕೆ ಸುಮ್ಮನೆ ಗುದ್ದಾಟವೆಂದು ಚಿತ್ರಮಂದಿರವನ್ನು ಕಾಯಂ ಆಗಿ ಬಂದ್‌ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.

ಇನ್ನೂ ಇದರ ಇದಕ್ಕೆ ಅಂಟಿಕೊಂಡಿರುವ ಸುಜಾತಾ ಟಾಕೀಸ್‌ ಪ್ರಾರಂಭಿಸಬೇಕೋ ಬೇಡವೋ ಎಂಬುದನ್ನು ಮಾಲೀಕರು ಯೋಚಿಸುತ್ತಿದ್ದಾರೆ. ಆದರೆ ಸಂಜೋತಾ ಮಾತ್ರ ಆಗಲೇ ಸಂಪೂರ್ಣ ಬಂದ್‌ ಆದಂತಾಗಿದೆ. ಇದರಿಂದ ಕನ್ನಡ ಚಿತ್ರಮಂದಿರವೊಂದನ್ನು ಕನ್ನಡದ ಪ್ರೇಕ್ಷಕರು ಕಳೆದುಕೊಂಡಂತಾಗಿರುವುದಂತೂ ಸತ್ಯ. ಇದು ಕನ್ನಡಾಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ.

ಹೌದು! ಸಂಜೋತಾ ಚಿತ್ರಮಂದಿರವನ್ನು ಬಂದ್‌ ಮಾಡಲಾಗಿದೆ. ಲಾಕ್‌ಡೌನ್‌ ಘೋಷಣೆಯ ಕೆಲ ದಿನಗಳ ಮೊದಲೇ ಬಂದ್‌ ಮಾಡಲಾಗಿತ್ತು. ಇದೀಗ ಅನ್‌ಲಾಕ್‌ ಘೋಷಣೆಯಾಗಿದ್ದರೂ ಪ್ರಾರಂಭಿಸುವುದಿಲ್ಲ. ಟಿವಿಗಳಲ್ಲೇ ಸಾಕಷ್ಟುಸಿನಿಮಾಗಳು ಬರುತ್ತವೆ. ಟಿವಿ, ಮೊಬೈಲ್‌ಗಳಿಂದಾಗಿ ಚಿತ್ರಮಂದಿರ ಹಾನಿ ಅನುಭವಿಸುವಂತಾಗಿದೆ. ಹೀಗಾಗಿ ಬಂದ್‌ ಮಾಡಿದ್ದೇವೆ.

ಅಮರ ಸೂಜಿ, ಸಂಜೋತಾ ಚಿತ್ರಮಂದಿರದ ಮಾಲೀಕರು

ಸಂಜೋತಾ ಚಿತ್ರಮಂದಿರ ಹುಬ್ಬಳ್ಳಿಗರ ಅಚ್ಚುಮೆಚ್ಚಿನದ್ದಾಗಿತ್ತು. ನಾವು ಸಣ್ಣ ವಯಸ್ಸಿನಿಂದಲೇ ಈ ಚಿತ್ರಮಂದಿರದಲ್ಲಿ ಹಲವು ಚಿತ್ರಗಳನ್ನು ನೋಡಿದ್ದೇವೆ. ಸಂಜೋತಾ ಚಿತ್ರಮಂದಿರದ ಬಗ್ಗೆ ಜನರಿಗೆ ಏನೋ ಒಂದು ಒಲವು ಇತ್ತು. ಆದರೆ ಇದೀಗ ಈ ಚಿತ್ರಮಂದಿರ ತೆÜರೆಯುವುದೇ ಇಲ್ಲ ಎಂಬ ಮಾತು ಕೇಳಿದರೆ ಬೇಸರವೆನಿಸುತ್ತದೆ.

ಲಕ್ಷ್ಮಿಕಾಂತ ಘೋಡಕೆ, ಯುವಕ

Follow Us:
Download App:
  • android
  • ios