ಹುಬ್ಬಳ್ಳಿ  [ಸೆ.18]: ರೈಲ್ವೆ ವಿಭಾಗವು 12.77 ಮಿಲಿಯನ್ ಟನ್ ಸರಕನ್ನು ಆಗಸ್ಟ್‌ವರೆಗೆ ಸಾಗಿಸಿದೆ. ಇದರಿಂದ ರೈಲ್ವೆ ವಿಭಾಗಕ್ಕೆ 1,115 ಕೋಟಿ ರು. ಆದಾಯ ಬಂದಿದೆ ಎಂದು ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುರಳೀಕೃಷ್ಣ ತಿಳಿಸಿದರು. ಅಲ್ಲದೇ, ಹುಬ್ಬಳ್ಳಿ ನಿಲ್ದಾಣದ ಎರಡನೇ ಪ್ರವೇಶ ದ್ವಾರದ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.

ಇಲ್ಲಿನ ರೈಲ್ವೆ ಕಾರ್ಯಾಗಾರದಲ್ಲಿ 33 ನೇ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಗಸ್ಟ್‌ವರೆಗೆ 141.9 ಲಕ್ಷ ಪ್ರಯಾಣಿಕರು ಹುಬ್ಬಳ್ಳಿ ವಿಭಾಗದಿಂದ ಸಂಚರಿಸಿದ್ದಾರೆ. ಇದರಿಂದ 149.01 ಕೋಟಿ ಆದಾಯವಾಗಿದೆ. ಏಪ್ರಿಲ್ 2019 ರಲ್ಲಿ ವಂದಾಲ ಮತ್ತು ಮುಳವಾಡ ನಡುವಿನ 26 ಕಿ.ಮೀ. ಜೋಡಿಮಾರ್ಗ ಪೂರ್ಣಗೊಳಿಸಲಾಗಿದೆ. ಇದು ಗದಗ-ಹೋಟಗಿ ಜೋಡಿ ಮಾರ್ಗ ಯೋಜನೆಯ ಭಾಗವಾಗಿದೆ. ಇದರಿಂದ ಗದಗ- ಹೋಟಗಿ ಜೋಡಿ ಮಾರ್ಗದ ಯೋಜನೆಯಲ್ಲಿ 101 ಕಿ.ಮೀ. ಜೋಡಿ ಮಾರ್ಗ ಪೂರ್ಣ ಗೊಳಿಸಿದಂತಾಗಿದೆ ಎಂದು ತಿಳಿಸಿದರು.

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಅನುಕೂಲಕ್ಕಾಗಿ ಇನ್ನಷ್ಟು ಬ್ಯಾಟರಿ ಚಾಲಿತ ವಾಹನಗಳನ್ನು ಒದಗಿಸುವ ಕುರಿತು ಸದಸ್ಯರು ಕೇಳಿದರು. ಇದಕ್ಕೆ ಮುರಳೀಕೃಷ್ಣ ಒಪ್ಪಿಗೆ ಸೂಚಿಸಿ, ಶೀಘ್ರದಲ್ಲೇ ವಾಹನಗಳನ್ನು ನೀಡಲಾಗುವುದು ಎಂದರು.

ಹೊಸಪೇಟೆ- ಕೊಟ್ಟೂರು ನಡುವೆ ಪ್ಯಾಸೆಂಜರ್ ರೈಲನ್ನು ಓಡಿಸುವುದು. ಬೆಳಗಾವಿಯಲ್ಲಿ ಸಿಸಿಟಿವಿ ಕಣ್ಗಾವಲಿನ ವ್ಯವಸ್ಥೆ ಉನ್ನತೀಕರಿಸುವುದು ಕುರಿತು ಚರ್ಚಿಸಲಾಯಿತು. ಸಭೆಯಲ್ಲಿದ್ದ ಗೋವಾ ಸರ್ಕಾರದ ಪಿಡಬ್ಲ್ಯುಡಿ ಸಚಿವ ದೀಪಕ ಪ್ರಭು, ಸಾವಂರ್ಡೆ-ಧಡೇಮ್ ರಸ್ತೆಯಲ್ಲಿ ಸಬ್‌ವೇ ನಿರ್ಮಾಣದ ಕುರಿತು ಪ್ರಸ್ತಾಪಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದಕ್ಕೆ ಮುರಳೀಕೃಷ್ಣ ಅವರು, ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಕಾಮಗಾರಿಆರಂಭವಾಗಲಿದೆ ಎಂದು ತಿಳಿಸಿದರು. ಕಾಲೆಮ್ ಮತ್ತು ಕುಲೇಮ್ ನಿಲ್ದಾಣವನ್ನು ಉನ್ನತೀಕರಿಸುವ ಕುರಿತು ಸಚಿವ ದೀಪಕ ಪ್ರಭು ಪ್ರಸ್ತಾಪಿಸಿದರು. ಕುಲೇಮ್‌ನಲ್ಲಿ ಹೊಸ ನಿಲ್ದಾಣ ಕಟ್ಟಡ ನಿರ್ಮಾಣ ಆರಂಭಗೊಂಡಿದೆ. ಕಾಲೆಮ್‌ನಲ್ಲಿ 2 ನೇ ಪ್ಲಾಟ್‌ಫಾರ್ಮ್ ಕಾರ್ಯ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ತಿಳಿಸಲಾಯಿತು. 

ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಲಹಾ ಸಮಿತಿ ಕಾರ್ಯದರ್ಶಿ ಡಾ. ಐ. ಸೆಂತಿಲ್‌ಕುಮಾರ್, ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ವಿನಯ್ ಜವಳಿ, ವಿಮಲ್ ಎನ್. ತಾಳಿಕೋಟಿ, ಮಾಧುರಿ ಕುಲಕರ್ಣಿ, ರೋಹನ್ ಆರ್. ಜವಳಿ ಉಪಸ್ಥಿತರಿದ್ದರು.