ಹುಬ್ಬಳ್ಳಿಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ 101 ಲ್ಯಾಪ್‌ಟಾಪ್‌ಗಳು ಕಳ್ಳತನ
ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ಇಡಲಾಗಿದ್ದ 101 ಲ್ಯಾಪ್‌ಟಾಪ್‌ಗಳನ್ನು ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಲಾಗಿದೆ. ಮೇ 22 ರಿಂದ ಆಗಸ್ಟ್ 30 ರ ನಡುವೆ ಈ ಕಳ್ಳತನ ನಡೆದಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ (ಸೆ.11): ರಾಜ್ಯ ಸರ್ಕಾರದ ಕಟ್ಟಡ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಣೆ ಮಾಡಲು ಸಂಗ್ರಹಿಸಿ ಇಡಲಾಗಿದ್ದ 101 ಹೊಸ ಲ್ಯಾಪ್‌ಟಾಪ್ ಅನ್ನು ಹುಬ್ಬಳ್ಳಿ ಗ್ಯಾಂಗ್ ಕಳ್ಳತನ ಮಾಡಿದೆ. ಇಷ್ಟೊಂದು ಲ್ಯಾಪ್‌ಟಾಪ್ ಕಳ್ಳತನ ಆಗಿದ್ದರೂ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲೊನಿಯಲ್ಲಿರುವ ಕಾರ್ಮಿಕ ಭವನದ ಕೊಠಡಿಯಲ್ಲಿ ಇಡಲಾಗಿದ್ದ 101 ಲ್ಯಾಪ್‌ಟಾಪ್‌ಗಳು ಕಳ್ಳತನ ಆಗಿವೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲು ಇಟ್ಟಿದ್ದ 101 ಲ್ಯಾಪ್‌ಟಾಪ್‌ಗಳು ಇದ್ದಕ್ಕಿದ್ದಂತೆ ಕಚೇರಿಯಿಂದ ಕಾಣೆಯಾಗಿವೆ. ಆದರೂ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲೆಂದು ಒಟ್ಟು 250 ಲ್ಯಾಪ್ ಟಾಪ್‌ಗಳು ಮಂಜೂರಾಗಿದ್ದವು. ಅವುಗಳನ್ನು ಕಾರ್ಮಿಕ ಭವನ ಕಚೇರಿಯ ಸಂಗ್ರಹಿಸಿಡಲಾಗಿತ್ತು.
ಬೆಂಗಳೂರು ಒಂಟಿ ಮಹಿಳೆಯರ ಮೈ ಮುಟ್ಟುತ್ತಿದ್ದ ವಿಕೃತ ಕಾಮುಕ ಬಂಧನ
ಕಾರ್ಮಿಕ ಭವನದ ಕೊಠಡಿಯಲ್ಲಿ ಹೊಸ ಲ್ಯಾಪ್‌ಟಾಪ್ ಇಟ್ಟಿರುವುದನ್ನು ಮಾಹಿತಿ ಪಡೆದುಕೊಂಡಿದ್ದ ಹುಬ್ಬಳ್ಳಿಯ ಕಳ್ಳರ ಗ್ಯಾಂಗ್ ಕಳ್ಳರು ಮೇ 22ರಿಂದ ಆ.30ರ ಅವಧಿಯಲ್ಲಿ ಕೊಠಡಿಯ ಕಿಟಕಿ ತೆರೆದು ಎಚ್‌ಪಿ ಕಂಪನಿಯ 101 ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದಾರೆ. ಈ ಚಾಲಾಕಿ ಕಳ್ಳರು ಎಲ್ಲ ಲ್ಯಾಪ್‌ಟಾಪ್‌ಗಳನ್ನು ಕದ್ದ ನಂತರ ಇದಕ್ಕೆ ಯಾವುದೇ ಸಾಕ್ಷಿ ಸಿಗಬಾರದೆಂದು ಕಾರ್ಮಿಕ ಭವನಕ್ಕೆ ಅಳವಡಿಕೆ ಮಾಡಲಾಗಿದ್ದ ಸಿಸಿ ಕ್ಯಾಮರಾ ವೈರ್ ಕತ್ತರಿಸಿ, ಹಾರ್ಡ್ ಡಿಸ್ಕ್ ಹಾಗೂ ಡಿವಿಆರ್ ಅನ್ನೂ ಕದ್ದು ಪರಾರಿ ಆಗಿದ್ದಾರೆ. ಈ ಘಟನೆ ಕುರಿತಂತೆ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.