ಬೆಂಗಳೂರು [ಡಿ.19]:  ಸಾಲದಿಂದ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ದ ರೈತರೊಬ್ಬರು ಸಾಲಮನ್ನಾ ಯೋಜನೆಯಿಂದ ಋುಣ ಮುಕ್ತವಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಉತ್ತರ ಕರ್ನಾಟಕ ಶೈಲಿಯ ಊಟವನ್ನು ಕಳುಹಿಸಿಕೊಟ್ಟು ಕೃತಜ್ಞತೆ ಸಲ್ಲಿಸಿದ್ದಾರೆ.

ಹುಬ್ಬಳ್ಳಿ ತಾಲೂಕು ಕಿರೇಸೂರ ಗ್ರಾಮದ ಗೋವಿಂದಪ್ಪ ಶ್ರೀಹರಿ ಎಂಬಾತ ಕುಮಾರಸ್ವಾಮಿ ಅವರ ಜೆ.ಪಿ.ನಗರ ನಿವಾಸಕ್ಕೆ ಬುಧವಾರ ಕೊರಿಯರ್‌ ಮೂಲಕ ವಿಶೇಷ ಕೊಡುಗೆ ಕಳುಹಿಸಿಕೊಟ್ಟಿದ್ದಾರೆ.

ತಮ್ಮ ಹೊಲದಲ್ಲಿ ಬೆಳೆದ ಬೆಳೆಯಲ್ಲಿ ಜೋಳದ ಖಡಕ್‌ ರೊಟ್ಟಿ, ಶೇಂಗಾ ಚಟ್ನಿ ಪುಡಿ, ಒಣ ಪಲ್ಯವನ್ನು ತಯಾರು ಮಾಡಿ ದೊಡ್ಡ ಬಾಕ್ಸ್‌ನಲ್ಲಿ ಕಳುಹಿಸಿಕೊಟ್ಟಿದ್ದಾರೆ. ಊಟದ ಜತೆಗೆ ವಿಶೇಷ ಕೃತಜ್ಞತೆಗಳನ್ನು ಪತ್ರದ ಮೂಲಕ ತಿಳಿಸಿದ್ದಾರೆ. ಉಡುಗೊರೆಯ ಬಾಕ್ಸ್‌ ಗಮನಿಸಿದ ಭದ್ರತಾ ಸಿಬ್ಬಂದಿ ಅದರಲ್ಲಿನ ವಸ್ತುಗಳ ಬಗ್ಗೆ ಕುಮಾರಸ್ವಾಮಿ ಗಮನಕ್ಕೆ ತಂದರು. ರೈತ ಗೋವಿಂದಪ್ಪ ಶ್ರೀಹರಿಯವರ ವಿಶೇಷ ಉಡುಗೊರೆಯ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ರೈತರೇ ನನ್ನ ರಾಜಕೀಯ ಜೀವನಕ್ಕೆ ಸ್ಫೂರ್ತಿ ಎಂದು ಭಾವುಕರಾದರು.

ಬಿಜೆಪಿ, ಅನರ್ಹರ ವಿರುದ್ಧ ಆರೋಪಗಳ ಪಟ್ಟಿ ರಿಲೀಸ್ ಮಾಡಿದ HDK: ಪಟ್ಟಿಯಲ್ಲೇನಿದೆ.?...

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಗೋವಿಂದಪ್ಪ ಅವರು ಸಾಲಬಾಧೆಯಿಂದ ನೇಣಿಗೆ ಕೊರಳೊಡ್ಡುವ ಪರಿಸ್ಥಿತಿ ತಂದುಕೊಂಡಿದ್ದರು. ಈ ವೇಳೆ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಸಾಲ ಹೆಚ್ಚಳದಿಂದ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದ್ದರು. ಪತ್ರದಲ್ಲಿ ಫೋನ್‌ ನಂಬರ್‌ ಬರೆದಿದ್ದರು. ಇದನ್ನು ಗಮನಿಸಿದ ಕುಮಾರಸ್ವಾಮಿ ತಕ್ಷಣ ಗೋವಿಂದಪ್ಪಗೆ ಕರೆ ಮಾಡಿ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯ ಇಲ್ಲ. ಸಾಲಮನ್ನಾವಾಗಲಿದೆ ಎಂದು ಪೋನ್‌ ಮೂಲಕವೇ ಸಾಂತ್ವನ ಹೇಳಿದರು. ಬಳಿಕ ಸಾಲಮನ್ನಾ ಆಗಿದೆ. ರಾಜಕೀಯ ಸ್ಥಿತ್ಯಂತರ ನಡುವೆ ಅಧಿಕಾರ ಕಳೆದುಕೊಳ್ಳಬೇಕಾಯಿತು. ಆದರೆ, ಸಾಂತ್ವನ ಮತ್ತು ಸಾಲಮನ್ನಾ ಮಾಡಿದ್ದನ್ನು ಗೋವಿಂದಪ್ಪ ಸ್ಮರಿಸಿದ್ದಾರೆ.