ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ, ಗಾಂಜಾ ನೀಡಲು ನಿರಾಕರಿಸಿದ್ದಕ್ಕೆ ಸ್ನೇಹಿತರೇ ಯುವಕನ ಮೇಲೆ ಕಿಮ್ಸ್ ಆಸ್ಪತ್ರೆಯ ಆವರಣದಲ್ಲೇ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ. ಈ ಹಿಂದೆ ಗಾಂಜಾ ದಂಧೆ ಬಿಟ್ಟು ಸರಿ ದಾರಿಗೆ ಬಂದಿದ್ದ ಯುವಕನ ಮೇಲೆ ನಡೆದ ಈ ದಾಳಿಯು, ನಗರದಲ್ಲಿನ ಗಾಂಜಾ ಹಾವಳಿ ಬಯಲು ಮಾಡಿದೆ.

ಹುಬ್ಬಳ್ಳಿ/ಧಾರವಾಡ (ಫೆ.01): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಾಂಜಾ ಹಾವಳಿ ಮಿತಿಮೀರಿದೆ ಎಂಬುದಕ್ಕೆ ಮತ್ತೊಂದು ಆಘಾತಕಾರಿ ಸಾಕ್ಷಿ ಸಿಕ್ಕಿದೆ. ಗಾಂಜಾ ನೀಡಲು ನಿರಾಕರಿಸಿದ ಕಾರಣಕ್ಕಾಗಿ ಯುವಕನೋರ್ವನ ಮೇಲೆ ಆತನ ಸ್ನೇಹಿತರೇ ಗುಂಪಾಗಿ ದಾಳಿ ನಡೆಸಿ, ಕಿಮ್ಸ್ (KIMS) ಆಸ್ಪತ್ರೆಯ ಆವರಣದಲ್ಲೇ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ವಿವರ:

ಸೈಯದ್ ಅಲಿ ಎಂಬುವವರೇ ಹಲ್ಲೆಗೊಳಗಾದ ಯುವಕ. ಇಬ್ರಾಹಿಂಪುರದಲ್ಲಿ ನಡೆದ ಮೊದಲ ಹಲ್ಲೆಯ ಬಳಿಕ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಬಂದಿದ್ದ ಸಂದರ್ಭದಲ್ಲಿ, 10ರಿಂದ 15 ಜನರಿದ್ದ ಪುಂಡರ ಗುಂಪು ಆಸ್ಪತ್ರೆಯ ನೋಂದಣಿ ವಿಭಾಗದ (Registration Counter) ಎದುರೇ ಅಮಾನವೀಯವಾಗಿ ದಾಳಿ ನಡೆಸಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗಾಯಾಳು ಸೈಯದ್ ಅಲಿ ಅವರ ತಂದೆ, ಘಟನೆಯ ಸಂಪೂರ್ಣ ವಿವರವನ್ನು ಬಿಚ್ಚಿಟ್ಟಿದ್ದಾರೆ. 'ನನ್ನ ಮಗ ಕೆಲಸ ಮುಗಿಸಿ ಮನೆಗೆ ಬಂದಿದ್ದ. ಈ ವೇಳೆ ಆತನ ಪರಿಚಯಸ್ಥರು ಮತ್ತು ಹಳೆಯ ಸ್ನೇಹಿತರು ಫೋನ್ ಮಾಡಿ ಕರೆಸಿಕೊಂಡಿದ್ದಾರೆ. ಇಬ್ರಾಹಿಂಪುರ ಬಳಿ ಹೋದಾಗ ಗಾಂಜಾ ವಿಚಾರವಾಗಿ ಗಲಾಟೆ ನಡೆದಿದೆ. ಅಲ್ಲಿ ನನ್ನ ಮಗನ ಕೈಗೆ ಗಾಯವಾಗಿತ್ತು. ತಕ್ಷಣ ಅವನ ತಾಯಿ ಆತನನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು' ಎಂದು ತಿಳಿಸಿದರು.

ಮುಂದುವರಿದು ಮಾತನಾಡಿದ ಅವರು, 'ಆಸ್ಪತ್ರೆಯಲ್ಲಿ ನಾನು ಮಗನನ್ನು 'ಏನಾಯ್ತು?' ಎಂದು ವಿಚಾರಿಸುತ್ತಿದ್ದೆ. ಅಷ್ಟರಲ್ಲೇ ಏಕಾಏಕಿ 10-15 ಜನರ ಗುಂಪು ಆಸ್ಪತ್ರೆಯ ಒಳಗೆ ನುಗ್ಗಿ ಬಂತು. ನೋಂದಣಿ ವಿಭಾಗದ ಬಳಿಯೇ ನನ್ನ ಮಗನನ್ನು ಕೆಳಗೆ ಹಾಕಿ ಕಾಲಿನಿಂದ ತುಳಿದು, ಚಾಕುವಿನಿಂದ ಮರು ಹಲ್ಲೆ ನಡೆಸಿದರು. ಆಸ್ಪತ್ರೆಯಲ್ಲಿದ್ದ ಸೆಕ್ಯೂರಿಟಿ ಸಿಬ್ಬಂದಿ ಕೂಡ ಭಯದಿಂದಲೋ ಅಥವಾ ನಿರ್ಲಕ್ಷ್ಯದಿಂದಲೋ ಜಗಳ ಬಿಡಿಸಲು ಮುಂದೆ ಬರಲಿಲ್ಲ. ಬಳಿಕ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಓಡಿ ಹೋದರು' ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ದಂಧೆ ಬಿಟ್ಟರೂ ಬಿಡದ ಗೀಳು:

ಹಲ್ಲೆಗೆ ಪ್ರಮುಖ ಕಾರಣ ಗಾಂಜಾ ಎಂದು ತಿಳಿದುಬಂದಿದೆ. 'ನನ್ನ ಮಗ ಈ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬುದು ನಿಜ. ಆದರೆ, ಪೊಲೀಸರು ಹಿಡಿದು ಹೊಡೆದು ಬುದ್ಧಿ ಹೇಳಿದ ನಂತರ ಆತ ಸಂಪೂರ್ಣವಾಗಿ ಬದಲಾಗಿದ್ದ. ಗಾಂಜಾ ಸಹವಾಸವನ್ನೇ ಬಿಟ್ಟು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ. ಆದರೆ, ಆತನ ಹಳೆಯ ಸ್ನೇಹಿತರು 'ನಮಗೆ ಗಾಂಜಾ ಬೇಕು, ನೀನು ತಂದುಕೊಡು' ಎಂದು ಪೀಡಿಸುತ್ತಿದ್ದರು. ನನ್ನ ಮಗ ಅದಕ್ಕೆ ಒಪ್ಪದಿದ್ದಾಗ ಈ ರೀತಿ ಪ್ರಾಣಾಂತಿಕ ಹಲ್ಲೆ ನಡೆಸಿದ್ದಾರೆ' ಎಂದು ತಂದೆ ಸ್ಪಷ್ಟಪಡಿಸಿದ್ದಾರೆ.

ಆಸ್ಪತ್ರೆಯಲ್ಲೇ ಅಸುರಕ್ಷತೆ:

ಉತ್ತರ ಕರ್ನಾಟಕದ ಜೀವನಾಡಿ ಎಂದೇ ಕರೆಯಲ್ಪಡುವ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ, ಅದೂ ರೋಗಿಗಳ ನೋಂದಣಿ ವಿಭಾಗದ ಎದುರೇ ಇಂತಹ ಭೀಕರ ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ರಕ್ಷಣೆಗೆ ಇರಬೇಕಾದ ಸೆಕ್ಯೂರಿಟಿ ಸಿಬ್ಬಂದಿ ಕಣ್ಣಮುಂದೆಯೇ ಗೂಂಡಾಗಿರಿ ನಡೆದರೂ ತಡೆಯಲು ಆಗದಿರುವುದು ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸಿದೆ. ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಗಾಂಜಾ ವ್ಯಸನಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.