ಮಯೂರ ಹೆಗಡೆ

ಹುಬ್ಬಳ್ಳಿ(ಆ.12): ನಗರದ ವಿಮಾನ ನಿಲ್ದಾಣದಲ್ಲಿರುವ ಹಳೆಯ ವಿಮಾನ ನಿಲ್ದಾಣ ಕಟ್ಟಡವನ್ನು ಕಾರ್ಗೋ (ಸರಕು) ಟರ್ಮಿನಲ್‌ ಆಗಿ ನವೀಕರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇನ್ನು 6 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಂದುಕೊಂಡಂತೆ ಆದರೆ, ಮುಂದಿನ ದಿನಗಳಲ್ಲಿ ಈ ಭಾಗದ ಕೃಷಿ, ಕೈಗಾರಿಕೆ ಸರಕು ಸಾಗಣೆಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

2018ರ ಸೆಪ್ಟೆಂಬರ್‌ನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರ್ಗೋ ಸೇವೆ ಆರಂಭವಾಗಿದೆ. ಇಲ್ಲಿವರೆಗೆ ನೂತನ ಟರ್ಮಿನಲ್‌ ಕಟ್ಟಡವನ್ನೆ ಇದಕ್ಕೆ ಬಳಸಲಾಗುತ್ತಿತ್ತು. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಹಳೆಯ ಟರ್ಮಿನಲ್‌ನ್ನು ಕಾರ್ಗೋ ಕಾಂಪ್ಲೆಕ್ಸ್‌ ಆಗಿ ನವೀಕರಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.

ಪ್ರಗತಿಯತ್ತ ದಾಪುಗಾಲು: ಹುಬ್ಬಳ್ಳಿ ಏರ್ಪೋರ್ಟ್‌ಗೆ ಉತ್ತಮ ವಿಮಾನ ನಿಲ್ದಾಣ ಪ್ರಶಸ್ತಿ

2017ರಲ್ಲಿ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿ ಹೊಸ ಟರ್ಮಿನಲ್‌ ಬಳಕೆಗೆ ಬಂದ ಬಳಿಕ ಖಾಲಿ ಇತ್ತು. ವಿವಿಐಪಿಗಳು ಬಂದ ಕೆಲ ಸಂದರ್ಭದಲ್ಲಿ ಮಾತ್ರ ಬಳಸಲಾಗಿತ್ತು. ಈ ಮೊದಲು ಇಲ್ಲಿ ಆಡಳಿತಾತ್ಮಕ ಕಚೇರಿ ತೆರೆಯಲು ಉದ್ದೇಶಿಸಲಾಗಿತ್ತು. ಆದರೆ, ಬಳಿಕ ಕೈಬಿಟ್ಟು ಕಾರ್ಗೋ ಟರ್ಮಿನಲ್‌ಗೆ ಬಳಸಲು ನಿಶ್ಚಯಿಸಲಾಯಿತು. 2018ರಿಂದಲೇ ಈ ಕುರಿತು ಪ್ರಯತ್ನಗಳು ನಡೆದರೂ ಇದೀಗ ಕಾಲ ಕೂಡಿ ಬಂದಿದೆ. ಕಾಮಗಾರಿ ಮುಕ್ತಾಯದ ಬಳಿಕ ಬಿಸಿಎಎಸ್‌ (ಬ್ಯೂರೊ ಆಫ್‌ ಸಿವಿಲ್‌ ಏವಿಯೇಶನ್‌ ಸೆಕ್ಯೂರಿಟಿ) ಅನುಮತಿ ದೊರೆತು ಅಂದರೆ ಸುಮಾರು 6 ತಿಂಗಳಲ್ಲಿ ಇದು ಜನಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ.

ಹೆಚ್ಚಿನ ಸರಕು ಸಾಗಣೆಗೆ ಹೊಸ ಟರ್ಮಿನಲ್‌ನಲ್ಲಿ ಕೆಲ ತಾಂತ್ರಿಕ ಅಡೆತಡೆಯಿತ್ತು. 2019ರ ಮಾರ್ಚ್‌ನಲ್ಲಿ ನಿಲ್ದಾಣದಲ್ಲಿ 59.5 ಟನ್‌ನಷ್ಟು ಕಾರ್ಗೋ ವಹಿವಾಟು ನಡೆದಿತ್ತು. ಮುಂದಿನ ದಿನಗಳಲ್ಲಿ ಎಫ್‌ಎಂಸಿಜಿ (ಫಾಸ್ಟ್‌ ಮೂವಿಂಗ್‌ ಕನ್ಸೂಮರ್‌ ಗೂಡ್ಸ್‌) ಕ್ಲಸ್ಟರ್‌ ಸೇರಿದಂತೆ ಬೃಹತ್‌ ಕಂಪನಿಗಳಾದ ಟಾಟಾ ಮೋಟರ್ಸ್‌, ಮೈಕ್ರೋಫಿನಿಶ್‌ ಟ್ರೇಡಿಂಗ್‌ ಪ್ರೈ. ಲಿ. ಸೇರಿ ಬೃಹತ್‌ ಕಂಪನಿಗಳು ಬರಲಿವೆ. ಇವುಗಳಿಂದ ಏರ್‌ ಕಾರ್ಗೋಗೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಗಳಿವೆ. ಹೀಗಾಗಿ ಕಾರ್ಗೋ ಸೇವೆಯನ್ನು ಇನ್ನಷ್ಟುಹೆಚ್ಚಿಸುವ ಅಗತ್ಯವಿತ್ತು.

ಈ ಕುರಿತು ಮಾತನಾಡಿದ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಕುಮಾರ ಟಕ್ಕರ್‌, ಮೂರ್ನಾಲ್ಕು ತಿಂಗಳಲ್ಲಿ ಕಟ್ಟಡದ ನವೀಕರಣ ಪೂರ್ಣಗೊಳ್ಳಲಿದೆ. ಬಿಸಿಎಎಸ್‌ನ ತಾಂತ್ರಿಕ, ದಾಖಲಾತಿ ಪ್ರಕ್ರಿಯೆಗಳು ನಡೆಯಲು ಒಂದೂವರೆ ತಿಂಗಳು ಬೇಕಾಗಬಹುದು. ಕಾರ್ಗೋ ಟರ್ಮಿನಲ್‌ನಲ್ಲಿ ಸಕಲ ಸೌಲಭ್ಯ ಇರಲಿದೆ. ಎರಡೂ ಕಟ್ಟಡಗಳು ಆಯಾತ ನಿರ್ಯಾತಕ್ಕೆ ಬಳಕೆ ಆಗಲಿದೆ.

ಎಎಐಸಿಎಲ್‌ಎಎಸ್‌ (ಏರ್‌ಪೋಟ್ಸ್‌ರ್‍ ಅಥಾರಿಟಿ ಆಫ್‌ ಇಂಡಿಯಾ ಕಾರ್ಗೋ ಲಾಜಿಸ್ಟಿಕ್ಸ್‌ ಆಂಡ್‌ ಅಲೈಡ್‌ ಸವೀರ್‍ಸಸ್‌) ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೇವೆ ನಿರ್ವಹಿಸಲಿದೆ. ಅದರಂತೆ ಭದ್ರತಾ ವಿಚಾರದಲ್ಲಿ ಇನ್ನಷ್ಟುಕಟ್ಟುನಿಟ್ಟಾಗಲಿದ್ದು, ಸ್ಕ್ರೀನಿಂಗ್‌, ಎಕ್ಸಪ್ಲೋಸಿವ್‌ ಡಿಟೆಕ್ಟರ್‌ ಸೇರಿ ಇನ್ನಿತರ ಮಷಿನ್‌ಗಳು ಬರಲಿವೆ ಎಂದರು.

ಯಾವ್ಯಾವುದಕ್ಕೆ ಅನುಕೂಲ?

1) ಉಕ, ಮಹಾರಾಷ್ಟ್ರ ದಕ್ಷಿಣ ಭಾಗದ ಕೃಷಿ, ತೋಟಗಾರಿಕೆ ಉತ್ಪನ್ನ ಸರಕು ಸಾಗಣೆ
2) ಕೈಗಾರಿಕಾ ಉತ್ಪಾದನೆಗಳ ಸಾಗಾಟ
3) ಎಫ್‌ಎಂಸಿಜಿ ಉತ್ಪನ್ನದ ವಹಿವಾಟು
4) ಖಾಸಗಿ ಸರಕು ಸಾಗಾಟ ಸಂಸ್ಥೆಗಳಿಗೆ
5) ಜಲಮಾರ್ಗದ ಮೇಲಿನ ಅವಲಂಬನೆ ಇಳಿಕೆ

ಇನ್ನು 6 ತಿಂಗಳಲ್ಲಿ ಕಾರ್ಗೋ ಟರ್ಮಿನಲ್‌ ಬಳಕೆಗೆ ಸಿಗಲಿದೆ. ಇದರಿಂದ ಬಹುದಿನಗಳ ಬೇಡಿಕೆ ಈಡೇರಿದಂತಾಗಲಿದ್ದು, ಈ ಭಾಗದ ಸರಕು ಸಾಗಣೆಗೆ ಅನುಕೂಲವಾಗಲಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಕುಮಾರ ಟಕ್ಕರ್‌ ಅವರು ತಿಳಿಸಿದ್ದಾರೆ.