ಶೆಟ್ಟರ್ ಬೆಳಗಾವಿಗೆ ಹೋದರೆ ತಪ್ಪಲಿದೆ ಹುಬ್ಬಳ್ಳಿ ಲಿಂಕ್..!
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ವದಂತಿ ಹಿನ್ನೆಲೆಯಲ್ಲಿ ಚರ್ಚೆಗೆ ಗ್ರಾಸ| ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧಿಸುವುದು ಖಚಿತವಾದರೆ 30 ವರ್ಷಗಳ ಹುಬ್ಬಳ್ಳಿ ನಂಟು ಕಡಿತ| ಯಡಿಯೂರಪ್ಪ ಅವರನ್ನು ಇಳಿಸಿದ್ದೆ ನಿಜವಾದರೆ ಮುಂದಿನ ಮುಖ್ಯಮಂತ್ರಿಯಾಗುವವರ ಪಟ್ಟಿಯಲ್ಲಿ ಶೆಟ್ಟರ್ ಹೆಸರೇ ಮೊದಲು|
ಹುಬ್ಬಳ್ಳಿ(ಡಿ.06): ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತು ಚಾಲ್ತಿಗೆ ಬರುತ್ತಿದ್ದಂತೆ ವಿಭಿನ್ನ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
ಸದ್ಯಕ್ಕಿದು ಬರೀ ಚರ್ಚೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧಿಸುವುದು ಖಚಿತವಾದರೆ 30 ವರ್ಷಗಳ ಹುಬ್ಬಳ್ಳಿ ನಂಟು ಕಡಿತಗೊಳ್ಳಲಿದೆ ಎನ್ನುವ ಆತಂಕದ ಮಾತುಗಳು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲಾದ್ಯಂತ ಚರ್ಚೆಯಾಗುತ್ತಿವೆ.
ಸೋಲಿಲ್ಲದ ಸರದಾರ:
1994ರಿಂದಲೂ ಸೋಲಿಲ್ಲದ ಸರದಾರ ಎಂದೆನಿಸಿರುವ ಶೆಟ್ಟರ್, ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದಲೇ ಹುಬ್ಬಳ್ಳಿಗರ ಮನ ಗೆದ್ದವರು. ಹೀಗಾಗಿಯೇ ಎಂತೆಂಥ ಘಟಾನುಘಟಿಗಳು ಎದುರಾಳಿಗಳು ಬಂದರೂ ಸೋಲನ್ನು ಕಂಡವರಲ್ಲ. ಮೊದಲು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಮೂರು ಬಾರಿ ಹಾಗೂ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ 3 ಬಾರಿ ಹೀಗೆ ಒಟ್ಟು ಆರು ಸಲ ಸತತವಾಗಿ ಗೆದ್ದು ಬೀಗಿದವರು ಶೆಟ್ಟರ್. ಇವರ ಎದುರಾಳಿಗಳಾಗಿ ಸ್ಪರ್ಧಿಸಿದವರೆಲ್ಲರೂ ಇವರ ಎದುರಿಗೆ ಸೋಲನ್ನೊಪ್ಪಿ ಇವರ ಪಕ್ಷಕ್ಕೆ ಸೇರ್ಪಡೆಯಾಗಿದ್ದುಂಟು. ಬಸವರಾಜ ಬೊಮ್ಮಾಯಿ, ಶಂಕರಣ್ಣ ಮುನವಳ್ಳಿ, ಡಾ.ಮಹೇಶ ನಾಲ್ವಾಡ, ಹೀಗೆ ಸಾಲು ಸಾಲು ನಾಯಕರ ದಂಡೇ ಬಿಜೆಪಿಗೆ ಹೋಗಿದ್ದುಂಟು. ಸದ್ಯಕ್ಕೆ ಸೆಂಟ್ರಲ್ ಕ್ಷೇತ್ರದಲ್ಲಿ ಶೆಟ್ಟರ್ ಅವರನ್ನು ಎದುರಿಸಬಲ್ಲ ಒಬ್ಬೇ ಒಬ್ಬ ಕಾಂಗ್ರೆಸ್ ಲೀಡರ್ ಇಲ್ಲ ಎಂಬಂತಿದೆ. ಮುಖ್ಯಮಂತ್ರಿಯಾಗಿ, ಪಕ್ಷದ ರಾಜ್ಯಾಧ್ಯಕ್ಷರಾಗಿ, ವಿಧಾನಸಭೆ ವಿರೋಧಪಕ್ಷದ ನಾಯಕರಾಗಿ, ಸ್ಪೀಕರ್, ಸಚಿವರಾಗಿ ಉತ್ತಮ ಕೆಲಸಗಾರ ಎಂದು ಹೆಸರು ಪಡೆದವರು.
ಬೆಳಗಾವಿ ಎಂಪಿ ಉಪಚುನಾವಣೆಗೆ ಶೆಟ್ಟರ್ ಅಭ್ಯರ್ಥಿ?
ಶೆಟ್ಟರ್ ಈಗ ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲ ಉತ್ತರ ಕರ್ನಾಟಕದ ಪ್ರಮುಖ ಲಿಂಗಾಯತ ಮುಖಂಡರೆಂದು ಗುರುತಿಸಿಕೊಂಡಿದ್ದಾರೆ. ಜನರು ಯಾವುದೇ ಸಮಸ್ಯೆಯಿದ್ದರೂ ಶೆಟ್ಟರ್ ಅವರ ಬಳಿ ತೆರಳುವುದುಂಟು. ಅಷ್ಟುಜನರಿಗೆ ಹತ್ತಿರವಾದವರು ಶೆಟ್ಟರ್. ಇದೀಗ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸುತ್ತಾರೆ ಎಂಬ ಮಾತು ಕೇಳಿ ಬಂದಿದೆ. ಒಂದು ವೇಳೆ ಯಡಿಯೂರಪ್ಪ ಅವರನ್ನು ಇಳಿಸಿದ್ದೆ ನಿಜವಾದರೆ ಮುಂದಿನ ಮುಖ್ಯಮಂತ್ರಿಯಾಗುವವರ ಪಟ್ಟಿಯಲ್ಲಿ ಶೆಟ್ಟರ್ ಹೆಸರೇ ಮೊದಲಿಗಿದೆ. ಇಂಥ ಸಮಯದಲ್ಲಿ ಇದೀಗ ಏಕಾಏಕಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದರೆ. ಮುಖ್ಯಮಂತ್ರಿ ಗಾದಿಯ ಆಕಾಂಕ್ಷಿಗಳ ಪಟ್ಟಿಯಲ್ಲಿನ ಇವರ ಹೆಸರು ಸಹಜವಾಗಿಯೇ ಡಿಲಿಟ್ ಆಗುತ್ತದೆ. ಇದರೊಂದಿಗೆ ಹುಬ್ಬಳ್ಳಿಯೊಂದಿಗೆ ಅದರಲ್ಲೂ ಸೆಂಟ್ರಲ್ ಕ್ಷೇತ್ರದಿಂದ ಲಿಂಕ್ ಕಳೆದುಕೊಳ್ಳುವುದು ಅನಿವಾರ್ಯವಾಗುತ್ತದೆ.
ಉತ್ತರಾಧಿಕಾರಿ ಯಾರು?
ಶೆಟ್ಟರ್ ಅತ್ತ ಬೆಳಗಾವಿಗೆ ತೆರಳಿದರೆ ಅವರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಅವರ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆಯೂ ಚರ್ಚೆಗೆ ಬಂದಿದೆ. ಪುತ್ರ ಸಂಕಲ್ಪ, ಪತ್ನಿ ಶಿಲ್ಪಾ ಶೆಟ್ಟರ್, ಸಹೋದರ ಪ್ರದೀಪ ಶೆಟ್ಟರ್ ಹೆಸರುಗಳು ‘ಉತ್ತರಾಧಿಕಾರಿ’ ಪಟ್ಟಿಯಲ್ಲಿ ಕೇಳಿ ಬರುತ್ತಿವೆ. ಆದರೆ ಸತತವಾಗಿ ಆರು ಸಲ ಗೆದ್ದು, ಕಳೆದ 30 ವರ್ಷಗಳಿಂದ ಹುಬ್ಬಳ್ಳಿಯ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿರುವ ಶೆಟ್ಟರ್ ಅವರನ್ನು ಅಷ್ಟುಸಲೀಸಾಗಿ ಕಳುಹಿಸಿಕೊಡಲು ಹುಬ್ಬಳ್ಳಿಗರು ಒಪ್ಪುತ್ತಾರೆಯೇ? ಎಂಬ ಪ್ರಶ್ನೆ ಕೂಡ ಎದ್ದಿದೆ. ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.