ವೈದ್ಯಕೀಯ ಕ್ಷೇತ್ರದ ಹೊಸ ಆವಿಷ್ಕಾರ| ವಿಶೇಷ ಲೋಹದಿಂದ ತಯಾರಿಸಲಾಗುವ ಹಾಗೂ ಸಹಜ ಮೂಳೆಗಿಂತಲೂ ಅತ್ಯಂತ ಶಕ್ತಿಶಾಲಿಯಾಗಿರುವ ‘ಟೈಟಾನಿಯಮ್‌ ಕೃತಕ ಬುರುಡೆ| 

ಹುಬ್ಬಳ್ಳಿ(ಏ.26): ಸರ್ಕಾರಿ ಉದ್ಯೋಗಿಯೊಬ್ಬರಿಗೆ ಇಲ್ಲಿನ ಶ್ರೀ ಬಾಲಾಜಿ ಆಸ್ಪತ್ರೆಯ ವೈದ್ಯರು ಟೈಟಾನಿಯಮ್‌ ಕೃತಕ ತಲೆ ಬುರುಡೆಯನ್ನು ಜೋಡಿಸುವ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಖ್ಯಾತ ನರರೋಗ ತಜ್ಞರಾಗಿರುವ ಶ್ರೀ ಬಾಲಾಜಿ ಆಸ್ಪತ್ರೆ ಚೇರಮನ್‌ ಡಾ. ಕ್ರಾಂತಿಕಿರಣ ಅವರು, ಮೆದುಳಿನ ಸ್ಟ್ರೋಕ್‌ ಆಗಿ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಗೆ ವ್ಯಕ್ತಿಯೊಬ್ಬರು ದಾಖಲಾಗಿದ್ದರು. ಅವರಿಗೆ ಸತತ 3 ಗಂಟೆ ಕಾಲ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ ಎಂದು ಹೇಳಿದ್ದಾರೆ.

ಮೃತದೇಹ ಮೇಲೆ ಶಸ್ತ್ರಚಿಕಿತ್ಸೆ: ಭಾರತದಲ್ಲೇ ಮೊದಲು, ಬಾಗಲಕೋಟೆ ವೈದ್ಯರ ಸಾಧನೆ..!

ಸ್ಟ್ರೋಕ್‌ನಿಂದ ಮೆದುಳಿನ ಬಲಭಾಗದಲ್ಲಿ ತೀವ್ರ ಬಾವು ಬಂದು ರೋಗಿ ಅತ್ಯಂತ ಚಿಂತಾಜನಕ ಸ್ಥಿತಿಗೆ ತಲುಪಿದ್ದರು. ತಲೆಯ ಬಲಭಾಗದ ಬುರುಡೆಯನ್ನು ಕತ್ತರಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಬಳಿಕ ಕತ್ತರಿಸಿದ ತಲೆ ಬುರುಡೆಯನ್ನು ಪುನಃ ಜೋಡಿಸಿದ್ದಲ್ಲಿ ಮೆದುಳಿಗೆ ಹೆಚ್ಚಿನ ಭಾರವಾಗುವ ಸಾಧ್ಯತೆ ಇದ್ದುದರಿಂದ ಕತ್ತರಿಸಿದ ತಲೆಬುರುಡೆಯ ಸ್ಥಳವನ್ನು ತೊಡೆಯ ಭಾಗದಲ್ಲಿನ ಚರ್ಮ ತೆಗೆದು ಮುಚ್ಚಲಾಗಿತ್ತು. ಆದರೆ ಇದು ಶಾಶ್ವತ ಪರಿಹಾರ ಆಗುತ್ತಿರಲಿಲ್ಲ. 

ವೈದ್ಯಕೀಯ ಕ್ಷೇತ್ರದ ಹೊಸ ಆವಿಷ್ಕಾರ ಎಂದೇ ಪರಿಗಣಿಸಲ್ಪಡುವ ವಿಶೇಷ ಲೋಹದಿಂದ ತಯಾರಿಸಲಾಗುವ ಹಾಗೂ ಸಹಜ ಮೂಳೆಗಿಂತಲೂ ಅತ್ಯಂತ ಶಕ್ತಿಶಾಲಿಯಾಗಿರುವ ‘ಟೈಟಾನಿಯಮ್‌ ಕೃತಕ ಬುರುಡೆ’ ಅಳವಡಿಸುವುದು ಉತ್ತಮ ಎಂಬ ಸಂಗತಿಯನ್ನು ರೋಗಿ ಸಂಬಂಧಿಕರಿಗೆ ಮನವರಿಕೆ ಮಾಡಿಕೊಡಲಾಯಿತು. ಅದಕ್ಕೆ ಅವರು ಸಮ್ಮತಿಸಿದ್ದರಿಂದ ಸಿಟಿ ಸ್ಕ್ಯಾನ್‌ ತ್ರಿಡಿ ಮೂಲಕ ಬುರುಡೆಯ ಮಾದರಿಯನ್ನು ಬೆಂಗಳೂರು ಮೂಲದ ಕಂಪನಿಯೊಂದಕ್ಕೆ ಕಳುಹಿಸಿಕೊಟ್ಟು ಅಲ್ಲಿಂದ ಟೈಟಾನಿಯಮ್‌ ಕೃತಕ ತಲೆಬುರುಡೆ ತರಿಸಿಕೊಂಡು ಪುನಃ ರೋಗಿಗೆ ಒಂದೂವರೆ ಗಂಟೆ ಕಾಲ ಶಸ್ತ್ರಚಿಕಿತ್ಸೆಗೊಳಪಡಿಸಿ ಟೈಟಾನಿಯಮ್‌ ಬುರುಡೆಯನ್ನು ಅಳವಡಿಸಲಾಗಿದೆ. ಇದೀಗ ರೋಗಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಡಾ. ಕ್ರಾಂತಿಕಿರಣ ವಿವರಿಸಿದ್ದಾರೆ.