ಸೆಟ್ ಬ್ಯಾಕ್ ಮತ್ತು ಪಾರ್ಕಿಂಗ್ ಜಾಗವನ್ನು ಅತಿಕ್ರಮಿಸಿ ನಿರ್ಮಾಣವಾಗಿದ್ದ ಕಟ್ಟಡದ ತೆರವು ಕಾರ್ಯಾಚರಣೆ| ಈ ಮೂಲಕ ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಮಹಾನಗರ ಪಾಲಿಕೆ| ಬಾಲಕನ ತಂದೆ ಮಂಜುನಾಥ ಪಾಲಿಕೆ ಕಚೇರಿಗೆ ಸಾಕಷ್ಟು ಬಾರಿ ಅಲೆದಿದ್ದರೂ ಪ್ರಯೋಜನ ಆಗಿರಲಿಲ್ಲ| 

ಹುಬ್ಬಳ್ಳಿ(ಸೆ.09): ಬಾಲಕನ ಭವಿಷ್ಯ ಕಮರಿಸಿದ್ದ ನಗರದ ಕೇಶ್ವಾಪುರ ಚೇತನಾ ಕಾಲನಿಯಲ್ಲಿ ಸೆಟ್ ಬ್ಯಾಕ್ ಮತ್ತು ಪಾರ್ಕಿಂಗ್ ಜಾಗವನ್ನು ಅತಿಕ್ರಮಿಸಿ ನಿರ್ಮಾಣವಾಗಿದ್ದ ಕಟ್ಟಡದ ತೆರವು ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ಇಂದು(ಬುಧವಾರ) ಆರಂಭಿಸಿದೆ. ಈ ಮೂಲಕ ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಎಲ್ಲಕ್ಕಿಂತ ಮೊದಲು ಕನ್ನಡಪ್ರಭ ಕಳೆದ ಆ. 11 ರಂದು 'ಬಾಲಕನ ಭವಿಷ್ಯ ಕಮರಿಸಿದ ಕಟ್ಟಡ ತೆರವು ಯಾವಾಗ' ಎಂಬ ಹೆಡ್ ಲೈನ್ ಅಡಿಯಲ್ಲಿ ಅತಿಕ್ರಮಣ ಕಟ್ಟಡದಿಂದ ಉಂಟಾದ ಅನಾಹುತದ ಬಗ್ಗೆ ಸಚಿತ್ರ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಕಾನೂನು ಪ್ರಕ್ರಿಯೆ ಚುರುಕಾಗಿ ನಡೆಸಿದ ಮಹಾನಗರ ಪಾಲಿಕೆ ಆಯುಕ್ತರು ಕಟ್ಟಡ ತೆರವಿಗೆ ಆದೇಶ ನೀಡಿದ್ದಾರೆ‌. ಪರಿಣಾಮವಾಗಿ ಬುಧವಾರ ಬೆಳಗ್ಗೆ 6.40 ರಿಂದಲೇ ಕಟ್ಟಡ ತೆರವು ಕಾರ್ಯಾಚರಣೆ ಆರಂಭವಾಯಿತು. ಸಂಜೆ ವೇಳೆಗೆ ಬಹುತೇಕ ತೆರವಾಗಲಿದೆ.

ಹುಬ್ಬಳ್ಳಿ: ಚಾಲಕನ ಸಮಯಪ್ರಜ್ಞೆ, ತಪ್ಪಿದ ಭಾರೀ ದುರಂತ

ಕಾನೂನು ಬಾಹಿರ ಕಟ್ಟಡ ಸಮೀಪ ಹಾದು ಹೋಗಿದ್ದ ವಿದ್ಯುತ್ ಲೈನ್ ತಗುಲಿ ಶಾಕ್ ಬಾಲಕ ಸಿದ್ಧಾರ್ಥ ಮಂಜುನಾಥ ಬಳ್ಳಾರಿ (14) ಭವಿಷ್ಯಕ್ಕೆ ಕುತ್ತು ತಂದಿದೆ. 2018 ರ ನ. 25 ರಂದು ನಡೆದಿದ್ದ ಈ ಘಟನೆಯಿಂದ ಪ್ರತಿಭಾವಂತ ಬಾಲಕ ಇಂದಿಗೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಮೇಜರ್ ಮೈನರ್ ಸೇರಿ 20 ಆಪರೇಶನ್ ಎದುರಿಸಿರುವ ಬಾಲಕ ಸಿದ್ಧಾರ್ಥ ಇ‌ನ್ನೂ 5 ಆಪರೇಷನ್‌ಗೆ ಒಳಗಾಗಬೇಕಿದೆ.

ಘಟನೆ ನಡೆದು ಒಂದೂವರೆ ವರ್ಷ ಕಳೆದರೂ ನ್ಯಾಯ ದೊರೆತಿರಲಿಲ್ಲ. ಬಾಲಕನ ತಂದೆ ಮಂಜುನಾಥ ಅವರು ಪಾಲಿಕೆ ಕಚೇರಿಗೆ ಸಾಕಷ್ಟು ಬಾರಿ ಅಲೆದಿದ್ದರೂ ಪ್ರಯೋಜನ ಆಗಿರಲಿಲ್ಲ. ಇದೀಗ ಕಮೀಷನರ್ ಸುರೇಶ್ ಇಟ್ನಾಳ ಅವರ ಕ್ರಮದಿಂದಾಗಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸುವವರಿಗೆ ಎಚ್ಚರಿಕೆ ರವಾನೆಯಾಗಿದೆ.