ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ಲಾಸ್ಟಿಕ್ ಮುಕ್ತ
ವಿಮಾನ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಶ್ರೆಡ್ಡಿಂಗ್ ಮಷಿನ್| ಶೇ.100 ಎಸ್‌ಯುಪಿ ಮುಕ್ತ ವಿಮಾನ ನಿಲ್ದಾಣ| ಕೇಂದ್ರ ಸರ್ಕಾರದ ಸೂಚನೆಯಂತೆ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಪೂರಕವಾಗಿ ವಿಮಾನ ನಿಲ್ದಾಣದಲ್ಲಿ ಕ್ರಮ|
ಹುಬ್ಬಳ್ಳಿ(ಸೆ.27): ಇಲ್ಲಿನ ವಿಮಾನ ನಿಲ್ದಾಣದಲ್ಲಿ ಎಸ್‌ಯುಪಿ (ಸಿಂಗಲ್ ಯೂಸ್ ಪ್ಲಾಸ್ಟಿಕ್ ) ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ನಿಲ್ದಾಣವನ್ನು ಎಸ್‌ಯುಪಿ ಮುಕ್ತ ಎಂದು ಘೋಷಿಸಲಾಗಿದೆ.
ಈಗಾಗಲೆ ಹುಬ್ಬಳ್ಳಿ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಹಲವು ಕ್ರಮ ಕೈಗೊಳ್ಳಲಾಗಿದೆ. ಶ್ರೆಡ್ಡಿಂಗ್ ಮಷಿನ್ ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಉತ್ತಮ ಸ್ಪಂದನೆಯೂ ದೊರೆತಿದೆ. ಅದರಂತೆ ಇದೀಗ ವಿಮಾನ ನಿಲ್ದಾಣದಲ್ಲಿಯೂ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಕ್ರಮ ಜರುಗಿಸಲಾಗಿದೆ. ಆಗಮಿಸುವ ಪ್ರಯಾಣಿಕರಿಗೆ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈ ಮೂಲಕ ನಿಲ್ದಾಣದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ILS ಅಳವಡಿಕೆ
ಈಚೆಗೆ ವಿಮಾನ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಶ್ರೆಡ್ಡಿಂಗ್ ಮಷಿನ್ ಅಳವಡಿಕೆ ಮಾಡಲಾಗಿದೆ. ಪ್ರಯಾಣಿಕರು ಬಾಟಲಿ ಅಥವಾ ಎಸ್‌ಯುಪಿ ಮಾದರಿಯ ಸಣ್ಣಪುಟ್ಟವಸ್ತುಗಳನ್ನು ತಂದು ಅಲ್ಲಲ್ಲಿ ಬಿಸಾಡುವ ಬದಲು ಈ ಮಷಿನ್‌ನಲ್ಲಿ ಹಾಕುವಂತೆ ತಿಳಿಸಲಾಗುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ಬರುತ್ತಿದೆ. ಇದಲ್ಲದೆ ಶೇ. 100ರಷ್ಟುಎಸ್‌ಯುಪಿ ಮುಕ್ತ ವಿಮಾನ ನಿಲ್ದಾಣ ಎಂದು ಘೋಷಿಸಲಾಗಿದೆ.
ಈ ವರೆಗೆ ಕೇವಲ ಡಸ್ಟ್‌ಬಿನ್ ಇತ್ತು. ಇದರಲ್ಲಿ ಪ್ರಯಾಣಿಕರು ಪ್ಲಾಸ್ಟಿಕ್ ಬಾಟಲಿ ಸೇರಿ ಇತರೆ ತ್ಯಾಜ್ಯ ಎಸೆಯುತ್ತಿದ್ದರು. ಇವುಗಳನ್ನು ಪ್ರತ್ಯೇಕ ಮಾಡುತ್ತಿರಲಿಲ್ಲ. ಇದೀಗ ಶ್ರೆಡ್ಡಿಂಗ್ ಮಷಿನ್ ಅಳವಡಿಕೆ ಮಾಡಿದ್ದು, ಇದರಲ್ಲಿಯೆ ಬಾಟಲಿ ಹಾಕಲು ತಿಳಿಸಲಾಗುತ್ತಿದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹವಾಗಲಿದೆ. ಸದ್ಯ ಒಂದು ಶ್ರೆಡ್ಡಿಂಗ್ ಮಷಿನ್ ಇದ್ದು, ಮುಂದಿನ ದಿನಗಳಲ್ಲಿ ಮತ್ತೆ ಕೆಲ ಮಷಿನ್ ಅಳವಡಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಕುರಿತು ಮಾತನಾಡಿದ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕ್ರೆ, ಪ್ಲಾಸ್ಟಿಕ್ ಶ್ರೆಡ್ಡಿಂಗ್ ಮಷಿನ್‌ನ್ನು ಅಳವಡಿಸಲಾಗಿದೆ. ಶ್ರೆಡ್ಡಿಂಗ್ ಮಷಿನ್‌ನಲ್ಲಿ ಪುಡಿಯಾದ ಪ್ಲಾಸ್ಟಿಕ್‌ನ್ನು ಮರುಬಳಕೆಗೆ ನೀಡಲು ತೀರ್ಮಾನಿಸಲಾಗಿದೆ. ಹೆಚ್ಚು ಪ್ಲಾಸ್ಟಿಕ್ ಪುಡಿ ಸಂಗ್ರಹವಾದ ಬಳಿಕ ಹರಾಜು ನಡೆಸಲಾಗುವುದು. ಇದರಿಂದ ನಿಲ್ದಾಣದ ಆವರಣ ಸ್ವಚ್ಛವಾಗಿರುವ ಜತೆಗೆ, ಪರಿಸರ ಪ್ರಿಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಸಿಗಲಿದೆ ಎಂದರು.
ಸಹಜವಾಗಿ ನಿಲ್ದಾಣದ ಒಳಗೆ ಯಾರೂ ಪ್ಲಾಸ್ಟಿಕ್ ಎಸೆಯುವುದಿಲ್ಲ. ಆದರೂ ನಾವು ಆವರಣ ಸೇರಿದಂತೆ ಎಲ್ಲಿಯೂ ಎಸ್‌ಯುಪಿ ಮಾದರಿ ಪ್ಲಾಸ್ಟಿಕ್ ವಸ್ತು ಎಸೆಯದಂತೆ ತಿಳಿಸುತ್ತಿದ್ದೇವೆ. ದಂಡ ವಿಧಿಸುವ ಕುರಿತಂತೆ ಸದ್ಯ ಯಾವುದೆ ನಿರ್ಣಯ ಕೈಗೊಂಡಿಲ್ಲ. ಆದರೆ, ದಿನಗಳಲ್ಲಿ ಈ ಕುರಿತು ನಿರ್ಧರಿಸಲಾಗುವುದು ಎಂದರು.
ಕೇಂದ್ರ ಸರ್ಕಾರದ ಸೂಚನೆಯಂತೆ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಪೂರಕವಾಗಿ ವಿಮಾನ ನಿಲ್ದಾಣದಲ್ಲಿ ಕ್ರಮಕೈಗೊಂಡಿದ್ದು, ಶ್ರೆಡ್ಡಿಂಗ್ ಮಷಿನ್ ಅಳವಡಿಸಲಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕ್ರೆ ಅವರು ತಿಳಿಸಿದ್ದಾರೆ.