ಹುಬ್ಬಳ್ಳಿ(ಜ.12): ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನಯಾನಕ್ಕೆ ಹೆಚ್ಚು ಅನುಕೂಲವಾಗುವಂತೆ ಹೆಚ್ಚು ನಿಖರವಾದ ರೇಡಿಯೊ ಸಿಗ್ನಲ್ ನ್ಯಾವಿಗೇಷನ್ ಮತ್ತು ರನ್‌ವೇ ಕುರಿತು ಮಾಹಿತಿ ಒದಗಿಸುವ ಐಎಲ್‌ಎಸ್ (ಇನ್ಟ್ರೂಮೆಂಟ್ಸ್ ಲ್ಯಾಂಡಿಂಗ್ ಸಿಸ್ಟಮ್) ಅಳವಡಿಕೆ ಮಾಡಲಾಗಿದ್ದು, ಇದು ಮಾರ್ಚ್ ಬಳಿಕ ಕಾರ್ಯಾರಂಭ ಮಾಡಲಿದೆ. 

ಐಎಲ್‌ಎಸ್ ಪೈಲೆಟ್‌ಗಳಿಗೆ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ವೇಳೆ ಭೂಮಾರ್ಗದ ಕುರಿತಾಗಿ ಹೆಚ್ಚಿನ ಮಾರ್ಗದರ್ಶನ ನೀಡುತ್ತದೆ. ಇದರಿಂದ ಲ್ಯಾಂಡಿಂಗ್ ವೇಳೆ ಉಂಟಾಗುವ ಗೊಂದಲ ನಿವಾರಣೆ ಆಗಲಿದ್ದು, ಸಮಸ್ಯೆ ತಪ್ಪಿಸುವಲ್ಲಿ ನೆರವಾಗಲಿದೆ. ಅಗತ್ಯ ಪರವಾನಗಿ ದೊರೆತ ಬಳಿಕ ಮಾರ್ಚ್‌ನಿಂದ ಐಎಲ್‌ಎಸ್ ಕಾರ್ಯ ಆರಂಭಿಸಲಾಗುವುದು ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕೂರ್ ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿಮಾನ ನಿಲ್ದಾಣದ ಮೂಲಸೌಕರ್ಯ ಮತ್ತು ನ್ಯಾವಿಗೇಷನಲ್ ಸೌಲಭ್ಯಗಳ ನವೀಕರಣವನ್ನು ಮುಂದುವರಿಸಲು ಎಎಐ (ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ಬದ್ಧವಾಗಿದೆ. ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ ವಿಮಾನ ನಿಲ್ದಾಣವು ಎಲ್ಲ ವಿಮಾನಯಾನ ನಿರ್ವಾಹಕರನ್ನು ಉತ್ತರ ಕರ್ನಾಟಕದ ವಾಯುಯಾನ ಮಾರುಕಟ್ಟೆಯತ್ತ ಆಹ್ವಾನಿಸಲಿದೆ ಎಂದು ಅವರು ತಿಳಿಸಿದ್ದಾರೆ.