ಹುಬ್ಬಳ್ಳಿ:(ಸೆ.21)  ಗೇಮ್‌ ಆಡುವ ನೆಪದಲ್ಲಿ ಮೊಬೈಲ್‌ ಪಡೆದುಕೊಂಡು ಗೂಗಲ್‌ ಪೇ ಮೂಲಕ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದ ಮೂವರನ್ನು ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ  ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.

ಬಂಧಿತರನ್ನ ಹುಬ್ಬಳ್ಳಿ ನಗರದ ನಿವಾಸಿಗಳಾದ ನೀಲೇಶ, ಸಾಗರ ಮತ್ತು ವೈಭವ ಅಲಿಯಾಸ್‌ ತುಕಾರಾಮ ಎಂದು ಗುರುತಿಸಲಾಗಿದೆ. ಗುರುನಾಥ ವಿಷ್ಣುಸಾ ದಲಬಂಜನ್‌ ಎಂಬುವರು ವಂಚನೆಗೆ ಒಳಗಾಗಿದ್ದರು. ನೀಲೇಶ ಹಾಗೂ ವಿಷ್ಣುಸಾ ಸ್ನೇಹಿತರು. ಸಾಗರ ಹಾಗೂ ತುಕಾರಾಮ ನಿಲೇಶನ ಪರಿಚಯದವರು. ಸಾಗರ ತನ್ನ ಮೊಬೈಲ್‌ಗೆ ಬೇರೆ ಸಿಮ್‌ ಅಳವಡಿಸಿ ನಿಲೇಶ ಕಡೆಯಿಂದ ಹಿಂದಿಯಲ್ಲಿ ಮಾತನಾಡಿಸಿ ತುಕಾರಾಮನ ಅಕೌಂಟ್‌ ನಂ. ವಿವರ ಪಡೆದು ಕಮಿಷನ್‌ ನೀಡುವುದಾಗಿ ತಿಳಿಸಿದ್ದನು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಬಳಿಕ ಜೂ. 27ರಂದು ನಗರದ ಓಯಾಸಿಸ್‌ ಮಾಲ್‌ನಲ್ಲಿರುವ ಗುರುನಾಥ ಅಂಗಡಿಗೆ ಬಂದು ಮೊಬೈಲ್‌ ಫೋನ್‌ನ್ನು ಗೇಮ್‌ ಆಡಿಕೊಡುವುದಾಗಿ ಪಡೆದು ಗೂಗಲ್‌ ಪೇ ಮೂಲಕ ಖಾತೆಯಲ್ಲಿದ್ದ 20 ಸಾವಿರ ರೂ. ಹಣವನ್ನು ತುಕಾರಾಂ ಖಾತೆಗೆ ವರ್ಗಾಯಿಸಿದ್ದ. ಹಣ ವಿತ್‌ಡ್ರಾ ಆಗಿದ್ದ ಮೆಸೆಜ್‌ ಡಿಲಿಟ್‌ ಮಾಡಿ ಮೊಬೈಲ್‌ ವಾಪಸ್‌ ನೀಡಿದ್ದನು. ಮರುದಿನ ಹಣ ಡ್ರಾ ಆಗಿರುವ ಕುರಿತು ಗಮನಿಸಿದ ವಿಷ್ಣುಸಾ ಸೈಬರ್‌ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.


ಮೂರು ದಿನ ಮಾತ್ರ ಬಳಕೆಯಲ್ಲಿದ್ದ ಸಿಮ್ 


ಮೂರು ದಿನಗಳ ಮಾತ್ರ ಕೃತ್ಯಕ್ಕೆ ಬಳಸಿದ್ದ ಸಿಮ್‌ ಬಳಕೆಯಲ್ಲಿತ್ತು. ಆದರೆ, ಬೇರೆಯವರಿಗೆ ಮಾಡಿದ ಕರೆ ಆಧಾರದ ಮೇಲೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ತನಿಖೆ ವೇಳೆ ತುಕಾರಾಂಗೆ 2,500 ರೂ. ಕಮೀಷನ್‌ ನೀಡಿದ್ದಾಗಿ ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಬಳಸಿದ ಸಾಗರನ ಮೊಬೈಲ್‌ ವಶಪಡಿಸಿಕೊಂಡು . 8-9 ಸಾವಿರ ವಂಚನೆ ಮಾಡಿದ್ದ ಹಣವನ್ನು ಪಡೆಯಲಾಗಿದೆ. ಇವರ ವಿರುದ್ಧ ಐಟಿ (66 ಬಿ ಆ್ಯಂಡ್‌ಸಿ) ಆ್ಯಕ್ಟ್ 420, 419 ಸೆಕ್ಷನ್‌ಗಳಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಪ್ರಭುಗೌಡ ಡಿ.ಕೆ. ನೇತೃತ್ವದಲ್ಲಿ ವೈಜ್ಞಾನಿಕವಾಗಿ ತನಿಖೆ ಕೈಗೊಂಡು ಸೈಬರ್‌ ಕ್ರೈಂ ಠಾಣೆಯ ಸಿಬ್ಬಂದಿ ಎಎಸ್‌ಐ ಎಂ.ಬಿ. ಅಣ್ವೇಕರ, ಎಸ್‌.ಜಿ. ಸಿದ್ದಪ್ಪಗೌಡ್ರ, ವೈ.ಎಫ್‌. ದಾಸಣ್ಣವರ, ಪಿ.ಬಿ. ಹಿರಗಣ್ಣವರ, ಗಿರೀಶ ಬಡಿಗೇರ, ವೆಂಕಟೇಶ ವಗ್ಗರ, ಹಾಗೂ ಟೆಕ್ನಿಕಲ್‌ ವಿಭಾಗದ ಮಲ್ಲಿಕಾರ್ಜುನ ಚಿಕ್ಕಮಠ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.