ಅಧಿಕಾರಿಗಳು ಕಣ್ಣೆತ್ತಿ ನೋಡದ ಬಿಬಿಎಂಪಿ ಗುಂಡಿ ಸಮಸ್ಯೆಯನ್ನು, ತಿರುಗಿ ನೋಡುವಂತೆ ಮಾಡಿದ ಕುರ್ಚಿ!
ಕೊರಮಂಗಲದಲ್ಲಿ 20 ದಿನಗಳಿಂದ ದುರಸ್ತಿಯಾಗದ ಗುಂಡಿಗೆ ಸ್ಥಳೀಯರು ಹಾಳಾದ ಕುರ್ಚಿಯನ್ನಿಟ್ಟು ಪ್ರತಿಭಟಿಸಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಬಿಬಿಎಂಪಿ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಆದರೆ, ಇದು ತಾತ್ಕಾಲಿಕ ಪರಿಹಾರವಾಗಿದ್ದು, ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬೆಂಗಳೂರು (ಜ.4): ಇದು ಯಾರು ದೂರು ಕೊಟ್ಟು ಬಳಿಕ ಅಧಿಕಾರಿಗಳು ಸರಿಪಡಿಸಿದ ಕಥೆಯಲ್ಲ. ಜನ ಸಾಮಾನ್ಯರು ಬುದ್ದಿ ಉಪಯೋಗಿಸಿ ವಿಭಿನ್ನವಾಗಿ ಸಮಸ್ಯೆ ಇರುವಲ್ಲಿಗೆಯೇ ಅಧಿಕಾರಿಗಳ ಕಣ್ಣು ಬೀಳುವಂತೆ ಮಾಡಿದ್ದಾರೆ. ಆಸ್ಪತ್ರೆಯ ಸಮೀಪವೇ ಇದ್ದರೂ ವಾರಗಟ್ಟಲೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಯಾವಾಗ ವಿಎಇಯೋ ವೈರಲ್ ಆಯ್ತು ಅಧಿಕಾರಿಗಳು ಕೂಡ ನಿದ್ದೆಯಿಂದ ಎದ್ದಿದ್ದಾರೆ.
ಕೊರಮಂಗಲದ 5ನೇ ಮುಖ್ಯ, 17ನೇ ಅಡ್ಡ ರಸ್ತೆಯಲ್ಲಿರುವ ಗುಂಡಿಗೆ ಯಾರೋ ಒಡೆದ ಕುರ್ಚಿಯನ್ನಿಟ್ಟಿದ್ದು ಬಿಬಿಎಂಪಿಗೆ ಎಚ್ಚರಿಕೆಯ ಗಂಟೆ ನೀಡಿದ್ದಾರೆ. ಅಕ್ಯೂರಾ ಆಸ್ಪತ್ರೆಯ ಬಳಿ ಇರುವ ಈ 4 ಅಡಿ ಅಗಲದ ಗುಂಡಿ 20 ದಿನಗಳಿಂದಲೂ ಹಾಗೆಯೇ ಇತ್ತು. ಆಸ್ಪತ್ರೆಗೆ ಬರುವ ಆಂಬ್ಯುಲೆನ್ಸ್‌ಗಳು ಮತ್ತು ಇತರ ವಾಹನಗಳಿಗೆ ಈ ಗುಂಡಿ ತೊಂದರೆಯನ್ನುಂಟುಮಾಡುತ್ತಿತ್ತು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವ್ಯಾಪ್ತಿಯಲ್ಲಿ ಬರುವ ಈ ಗುಂಡಿಗೆ ಕುರ್ಚಿ ಹಾಕಿರುವ ವಿಡಿಯೋ ವೈರಲ್ ಆದ ನಂತರವೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
200 ಕೋಟಿ ವೆಚ್ಚದಲ್ಲಿ ಬೆಂಗಳೂರಿಗರಿಗೆ 7.22 KM ಉದ್ದದ ಹೊಸ ರಸ್ತೆ; ನೋ ಟ್ರಾಫಿಕ್, ಫುಲ್ ಜಾಲಿ ರೈಡ್
ಸ್ಥಳೀಯ ನಿವಾಸಿಗಳು ಮತ್ತು ಅಂಗಡಿಯವರು ಈ ಸಮಸ್ಯೆ ಪದೇ ಪದೇ ಮರುಕಳಿಸುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಒಬ್ಬರು, “BWSSB ಮ್ಯಾನ್‌ಹೋಲ್ ಮೇಲೆ ಈ ಗುಂಡಿ ಉಂಟಾಗಿತ್ತು. ಕುರ್ಚಿಯ ವಿಡಿಯೋ ನೋಡಿದ ತಕ್ಷಣ, BWSSB ವ್ಯಾಪ್ತಿಯಲ್ಲಿದ್ದರೂ ನಾವೇ ತಕ್ಷಣ ದುರಸ್ತಿ ಮಾಡಿದೆವು” ಎಂದು ಹೇಳಿದರು. ವಿಡಿಯೋ ವೈರಲ್ ಆದ ದಿನವೇ ದುರಸ್ತಿ ಕಾರ್ಯ ನಡೆಸಲಾಗಿದೆ.
ಅಕ್ಯೂರಾ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ನಂದ ಕಿಶೋರ್ ಶಾ, “ಈ ಗುಂಡಿ ಪದೇ ಪದೇ ಮರುಕಳಿಸುತ್ತದೆ. ರಾತ್ರಿಯ ವೇಳೆ ಇದು ಅಪಾಯಕಾರಿ. ಆಂಬ್ಯುಲೆನ್ಸ್‌ಗಳು ಮತ್ತು ಗರ್ಭಿಣಿಯರನ್ನು ಕರೆದೊಯ್ಯುವ ವಾಹನಗಳು ಈ ರಸ್ತೆಯನ್ನು ನಿಯಮಿತವಾಗಿ ಬಳಸುತ್ತವೆ” ಎಂದು ಹೇಳಿದರು.
ಸ್ಥಳದ ಬಳಿ ಟೀ ಅಂಗಡಿ ಇಟ್ಟುಕೊಂಡಿರುವ ಅಜೇಶ್, “ಗುಂಡಿ ವಾರಗಳಿಂದ ಇತ್ತು, ಆದರೆ ಯಾರೋ ಕುರ್ಚಿ ಹಾಕಿದ ನಂತರವೇ ಅಧಿಕಾರಿಗಳು ಕ್ರಮ ಕೈಗೊಂಡರು. ಅವರು ಕುರ್ಚಿಯನ್ನು ತೆಗೆದು ಅದೇ ದಿನ ಗುಂಡಿಯನ್ನು ಮುಚ್ಚಿದರು. ಆದರೆ, ಈ ತಾತ್ಕಾಲಿಕ ದುರಸ್ತಿ ಹೆಚ್ಚು ದಿನ ಉಳಿಯುವುದಿಲ್ಲ” ಎಂದರು.
ಬೆಂಗ್ಳೂರಲ್ಲಿ 400ಕ್ಕೂ ಹೆಚ್ಚು ಅಕ್ರಮ ಕಟ್ಟಡ ನೆಲಸಮಕ್ಕೆ ಬಿಬಿಎಂಪಿ ಆದೇಶ
ಹೋಟೆಲ್ ನಡೆಸುತ್ತಿರುವ ಸೈಯದ್ ಕಾಸಿಂ, “ಮೇಲ್ನೋಟಕ್ಕೆ ಚಿಕ್ಕದಾಗಿ ಕಾಣುವ ಈ ಗುಂಡಿ ಅಪಾಯಕಾರಿ. ಭಾರೀ ಮಳೆಯ ನಂತರ, ಅದನ್ನು ನೋಡುವುದೇ ಕಷ್ಟ” ಎಂದು ಹೇಳಿದರು. ಕನಿಷ್ಠ 20 ದಿನಗಳಿಂದ ನಿರಂತರ ಸಮಸ್ಯೆಯಾಗಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಅಂಗಡಿಯವರು ಮತ್ತು ನಿವಾಸಿಗಳು ತಾತ್ಕಾಲಿಕ ದುರಸ್ತಿ ಬದಲು ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. “ಈ ಗುಂಡಿ ಮಳೆ ಬಂದಾಗಲೆಲ್ಲಾ ಮತ್ತೆ ಕಾಣಿಸಿಕೊಳ್ಳುತ್ತದೆ. ಇದು ಮತ್ತೆ ಮರುಕಳಿಸದಂತೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು” ಎಂದು ಸ್ಥಳೀಯ ಅಂಗಡಿಯವರು ಹೇಳಿದರು. ಈ ಘಟನೆ ನಾಗರಿಕ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದನೆ ದೊರೆಯದಿರುವ ಬೆಂಗಳೂರಿನ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ.