ಕೋಲಾರ(ಸೆ.23): ನೆರೆ ಸಂತ್ರಸ್ತರಿಗೆ ಐದು ತಿಂಗಳ ಬಾಡಿಗೆಯನ್ನು ಒಂದೆ ಕಂತಿನಲ್ಲಿ ನೀಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರದಿಂದ ಸದ್ಯ ಬಾಡಿಗೆ ಮನೆಗಾಗಿ 5 ಸಾವಿರ ರು. ನೀಡಲಾಗುತ್ತಿದೆ. ಆದರೆ, ಕೆಲವೆಡೆಗಳಲ್ಲಿ ಮುಂಗಡ ಹಣ ಕೇಳುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಐದು ತಿಂಗಳ ಬಾಡಿಗೆ ಹಣವಾಗಿ 25 ಸಾವಿರ ರು. ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದಿದ್ದಾರೆ.

ಪ್ರತಿ ಮನೆಗೆ 10 ಸಾವಿರ ಪರಿಹಾರ ನೀಡಲಾಗುತ್ತಿದ್ದು, ಮನೆ ನಿರ್ಮಾಣಕ್ಕೆ 5 ಲಕ್ಷ ರು. ನೀಡಲಾಗುತ್ತಿದೆ. ಕೂಡಲೇ ಶೆಡ್‌ ನಿರ್ಮಿಸಿಕೊಳ್ಳುವವರಿಗೆ 50 ಸಾವಿರ ರೂ. ನೀಡಲಾಗುತ್ತಿದೆ. ಜತೆಗೆ ಮನೆ ನಿರ್ಮಿಸಿಕೊಳ್ಳುವವರಿಗೆ 1 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದ್ದಾರೆ.

'ಅನರ್ಹ ಶಾಸಕರ ಪರ-ವಿರೋಧ ತೀರ್ಪು ಬಂದ್ರೆ ಬಿಜೆಪಿ ಬಳಿ ಪ್ಲಾನ್ A, B ರೆಡಿ'

ಪ್ರವಾಹದಲ್ಲಿ ಶೇ.15 ರಿಂದ 75ರಷ್ಟುಮನೆ ಹಾನಿಯಾಗಿರುವ ಮನೆಗಳ ಮಾಹಿತಿಯನ್ನು ತಹಸೀಲ್ದಾರರಿಂದ ಪಡೆದುಕೊಂಡು, ಹಾನಿಯಾಗಿರುವುದು ಸರಿಪಡಿಸಿಕೊಳ್ಳಲು ನೇರವಾಗಿ ಸಂತ್ರಸ್ತರ ಬ್ಯಾಂಕ್‌ ಖಾತೆಗೆ ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಅಶೋಕ್‌ ಹೇಳಿದ್ದಾರೆ.

ಚೆಕ್‌ ಇಲ್ಲ, RTGS ಮಾಡಿ:

ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿನ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಚೆಕ್‌ ಬದಲಿಗೆ, RTGS ಮೂಲಕ ಪರಿಹಾರ ಹಣ ಪಾವತಿಸುವಂತೆ ಜಿಲ್ಲಾಕಾರಿಗಳಿಗೆ ಸೂಚನೆ ನೀಡಲಾಗಿದೆ. ಆ ಮೂಲಕ ಹಣದ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕೇಂದ್ರದಿಂದ ಪರಿಹಾರ ಬರುವ ಭರವಸೆಯಿದೆ:

ಪ್ರವಾಹ ಕೇವಲ ಕರ್ನಾಟಕದಲ್ಲಿ ಮಾತ್ರವೇ ಆಗಿಲ್ಲ. ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಆಗಿದ್ದು, ಎ ವರದಿ ಆಧರಿಸಿ ಕೇಂದ್ರ ಸರಕಾರ ಪರಿಹಾರ ಬಿಡುಗಡೆ ಮಾಡುವ ಭರವಸೆಯಿದೆ ಎಂದ ಅವರು, ದ್ವೇಷದ ರಾಜಕಾರಣದಲ್ಲಿ ನಮಗೆ ನಂಬಿಕೆಯಿಲ್ಲ ಎಂದು ಅನುದಾನ ಕಡಿತದ ಕುರಿತ ಪ್ರಶ್ನೆಗೆ ಉತ್ತರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ