ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ಬೆಳೆಯುವ ಸೇಬನ್ನು ಕರ್ನಾಟಕದಲ್ಲೂ ಬೆಳೆಯಲು ಸಾಧ್ಯವೇ? ಇಂತಹ ಪ್ರಶ್ನೆ ಬಂದಾಗ ಸಾಧ್ಯವಿಲ್ಲ ಎಂದೇ ಹೇಳಬಹುದು. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿ ಗ್ರಾಮದ ರೈತರೊಬ್ಬರು ತಮ್ಮ ಪ್ರಯತ್ನದ ಮೂಲಕ ಈ ಮಾತನ್ನು ಸುಳ್ಳು ಮಾಡಿದ್ದಾರೆ.
ಕಾಶ್ಮೀರ, ಹಿಮಾಚಲ ಪ್ರದೇಶದಂತಹ ತಂಪು ವಾತಾವರಣವಿರುವ ಪ್ರದೇಶಗಳಲ್ಲಿ ಬೆಳೆಯುವ ಸೇಬನ್ನು ನಮ್ಮ ಕರ್ನಾಟಕದಲ್ಲೂ ಬೆಳೆಯಲು ಸಾಧ್ಯವೇ? ಸಾಮಾನ್ಯವಾಗಿ ಇಂತಹ ಪ್ರಶ್ನೆ ಬಂದಾಗ ಹಲವರು ಸಾಧ್ಯವಿಲ್ಲ ಎಂದೇ ಹೇಳಬಹುದು. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿ ಗ್ರಾಮದ ರೈತರೊಬ್ಬರು ತಮ್ಮ ಪ್ರಯತ್ನದ ಮೂಲಕ ಈ ಮಾತನ್ನು ಸುಳ್ಳು ಮಾಡಿದ್ದಾರೆ. ರಾಗಿ ಬೆಳೆಯುವ ಪ್ರದೇಶದಲ್ಲೇ ಸೇಬು ಬೆಳೆದು ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಒಂದು ಎಕರೆ ಜಮೀನಿನಲ್ಲಿ ಬರೋಬ್ಬರಿ 442 ಸೇಬು ಗಿಡಗಳನ್ನು ಬೆಳೆಸಿ ಮೊದಲ ಬೆಳೆಯಲ್ಲೇ ಉತ್ತಮ ಫಸಲು ಪಡೆದಿದ್ದಾರೆ.
ಮಗನ ವಿದ್ಯಾಭ್ಯಾಸದ ಚಿಂತನೆಯಿಂದ ಹುಟ್ಟಿದ ಸೇಬು ಕೃಷಿಯ ಆಲೋಚನೆ
ಸಿದ್ದೇನಹಳ್ಳಿ ಗ್ರಾಮದ ಬಸವರಾಜು ಎಂಬ ರೈತ ಈ ವಿಭಿನ್ನ ಪ್ರಯತ್ನ ಮಾಡಿದವರು. ಸೇಬು ಕೃಷಿ ಮಾಡಬೇಕು ಎಂಬ ಆಲೋಚನೆ ಅವರಿಗೆ ಬಂದಿದ್ದು ಸುಮಾರು ಎರಡು ವರ್ಷಗಳ ಹಿಂದೆ. ಅದಕ್ಕೆ ಮುಖ್ಯ ಕಾರಣ ತಮ್ಮ ಮಗನ ವಿದ್ಯಾಭ್ಯಾಸದ ಬಗ್ಗೆ ಇದ್ದ ಚಿಂತೆ. ಈ ಹಿಂದೆ ಬಸವರಾಜು ಅವರು ಸೊಪ್ಪು ಬೆಳೆದು ಮಾರಾಟ ಮಾಡುತ್ತಿದ್ದರು. ಅದರಿಂದ ಬರುತ್ತಿದ್ದ ಆದಾಯ ಕುಟುಂಬದ ಖರ್ಚಿಗೆ ಮಾತ್ರ ಸಾಕಾಗುತ್ತಿತ್ತು. ಇದೇ ಸಂದರ್ಭದಲ್ಲಿ ಅವರ ಮಗ ಎಸ್ಎಸ್ಎಲ್ಸಿ ಮುಗಿಸಿದ ಬಳಿಕ ಪಿಯುಸಿ ಓದಲು ಹಣ ಬೇಕಾಗುತ್ತದೆ, ಅದನ್ನು ಎಲ್ಲಿಂದ ತರುತ್ತೀರಿ ಎಂದು ತಂದೆಯನ್ನೇ ಪ್ರಶ್ನಿಸಿದ್ದನಂತೆ.
ತೋಟಗಾರಿಕೆ, ಕೃಷಿ ಇಲಾಖೆಯಲ್ಲೂ ಸಿಗದ ಮಾಹಿತಿ
ಸೇಬು ಗಿಡಗಳನ್ನು ಎಲ್ಲಿ ಖರೀದಿಸಬೇಕು? ಕರ್ನಾಟಕದ ವಾತಾವರಣದಲ್ಲಿ ಅವು ಬೆಳೆಯುತ್ತವೆಯೇ? ಹೇಗೆ ನಾಟಿ ಮಾಡಬೇಕು? ಎಂಬ ಹಲವು ಪ್ರಶ್ನೆಗಳೊಂದಿಗೆ ಬಸವರಾಜು ಅವರು ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯನ್ನು ಸಂಪರ್ಕಿಸಿದರು. ಆದರೆ ಅಲ್ಲಿಯೂ ಅವರಿಗೆ ಸೂಕ್ತ ಮಾಹಿತಿ ಸಿಗಲಿಲ್ಲ. ನಂತರ ವಿವಿಧ ಕಡೆ ವಿಚಾರಿಸಿದ ಅವರು, ಸೇಬು ಕೃಷಿ ಮಾಡುತ್ತಿರುವವರ ಸಂಪರ್ಕ ಪಡೆದು ಮಾಹಿತಿ ಸಂಗ್ರಹಿಸಿದರು. ಕೊನೆಗೆ ಬಿಜಾಪುರದ ಸಚಿನ್ ಬಾಲಕೊಂಡ ಅವರ ಮೂಲಕ ಸೇಬು ಗಿಡಗಳನ್ನು ತರಿಸಿಕೊಳ್ಳಲು ನಿರ್ಧರಿಸಿದರು. ಆರಂಭದಲ್ಲಿ 500 ಗಿಡಗಳನ್ನು ತರಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಒಂದು ಎಕರೆ ಜಮೀನಿನಲ್ಲಿ ಸುಮಾರು 400 ಗಿಡಗಳನ್ನು ಬೆಳೆಸಬಹುದು ಎಂಬ ಲೆಕ್ಕಾಚಾರದಲ್ಲಿ ಮುಂಚಿತವಾಗಿಯೇ ಜಮೀನಿನಲ್ಲಿ ಗುಂಡಿಗಳನ್ನು ಸಿದ್ಧಪಡಿಸಿದ್ದರು.
ಒಂದು ಗಿಡಕ್ಕೆ ₹300 ಖರ್ಚು
ಬಸವರಾಜು ಅವರು ಒಟ್ಟು 442 ಸೇಬು ಗಿಡಗಳನ್ನು ನಾಟಿ ಮಾಡಿದ್ದಾರೆ. ಪ್ರತಿ ಗಿಡಕ್ಕೆ ₹300 ವೆಚ್ಚವಾಗಿದೆ. ಗಿಡಗಳು ಸುಮಾರು ಒಂದರಿಂದ ಒಂದೂವರೆ ಅಡಿ ಎತ್ತರದಲ್ಲಿದ್ದಾಗ ಖರೀದಿಸಿ ತೋಟಕ್ಕೆ ತರಿಸಿಕೊಂಡಿದ್ದರು. ಈ ತೋಟದಲ್ಲಿ 94 ಡಾರ್ಸೆಟ್ ಗೋಲ್ಡ್ ಸೇರಿದಂತೆ ಮೂರು ತಳಿಯ ಸೇಬು ಗಿಡಗಳಿವೆ ಎಂದು ಅವರು ತಿಳಿಸಿದ್ದಾರೆ. ಗಿಡಗಳನ್ನು ನಾಟಿ ಮಾಡುವಾಗ ಗುಂಡಿಗಳಿಗೆ ಮಣ್ಣು, ಗೊಬ್ಬರ ಮತ್ತು ಬೇವಿನ ಹಿಂಡಿಯನ್ನು ಬಳಸಿದ್ದಾರೆ. ಗಿಡಗಳ ನಡುವೆ 10 ಅಡಿ ಅಂತರ ಕಾಯ್ದುಕೊಂಡಿದ್ದಾರೆ. ಗಿಡಗಳು ಚೆನ್ನಾಗಿ ಬೆಳೆಯಲು ಮತ್ತು ಹೆಚ್ಚು ಕವಲೊಡೆಯಲು ಕೊಂಬೆಗಳನ್ನು ಕತ್ತರಿಸುವುದು ಸೇರಿದಂತೆ ಅಗತ್ಯ ನಿರ್ವಹಣೆ ಮಾಡಿದ್ದಾರೆ.
ರಾಸಾಯನಿಕ ಗೊಬ್ಬರವಿಲ್ಲ, ಬೇವಿನ ಎಣ್ಣೆಯೇ ರಕ್ಷಣೆ
ಸೇಬು ಗಿಡಗಳ ನಿರ್ವಹಣೆಯಲ್ಲಿ ಬಸವರಾಜು ಅವರು ಸಾಧ್ಯವಾದಷ್ಟು ಸಾವಯವ ಪದ್ಧತಿಯನ್ನು ಅನುಸರಿಸಿದ್ದಾರೆ. ಯೂರಿಯಾ ಸೇರಿದಂತೆ ರಾಸಾಯನಿಕ ಗೊಬ್ಬರಗಳನ್ನು ಬಳಸಿಲ್ಲ. ಬೇವಿನ ಹಿಂಡಿ ಮತ್ತು ಬೇವಿನ ಎಣ್ಣೆಯನ್ನು ಮಾತ್ರ ಬಳಸಿರುವುದಾಗಿ ತಿಳಿಸಿದ್ದಾರೆ. ಆರಂಭದಲ್ಲಿ ಮೂರು ದಿನಗಳಿಗೊಮ್ಮೆ ಒಂದು ಗಂಟೆ ಡ್ರಿಪ್ ಮೂಲಕ ನೀರುಣಿಸುತ್ತಿದ್ದರು. ಹೊಸ ಚಿಗುರುಗಳು ಬಂದ ನಂತರ ಪ್ರತಿದಿನ ಒಂದು ಗಂಟೆ ನೀರು ನೀಡುತ್ತಿದ್ದಾರೆ. ಗಿಡಗಳ ಬೆಳವಣಿಗೆಗೆ ಅನುಗುಣವಾಗಿ ಕೊಂಬೆಗಳ ಕತ್ತರಿಸುವಿಕೆ ಮತ್ತು ಆಕಾರ ನೀಡುವ ಕೆಲಸವನ್ನೂ ಮಾಡಿದ್ದಾರೆ.
ಒಂದೂವರೆ ವರ್ಷದಲ್ಲೇ ಸೇಬು ಫಸಲು
ಸೇಬು ಗಿಡಗಳನ್ನು ನಾಟಿ ಮಾಡಿದ ಸುಮಾರು ಒಂದು ವರ್ಷ ಎಂಟು ತಿಂಗಳ ನಂತರ ಫಸಲು ಕಾಣಿಸಿಕೊಂಡಿದೆ. ಮೊದಲ ಬೆಳೆಯಲ್ಲೇ ಗಿಡಗಳಲ್ಲಿ ಸೇಬು ಹಣ್ಣುಗಳು ಮೂಡಿರುವುದು ಬಸವರಾಜು ಅವರಿಗೆ ಸಂತಸ ತಂದಿದೆ.
ಒಂದು ಎಕರೆ ಜಮೀನಿನಲ್ಲಿ 442 ಗಿಡಗಳಿದ್ದು, ಪ್ರತಿ ಗಿಡಕ್ಕೆ ಸರಾಸರಿ ಐದು ಕೆಜಿ ಇಳುವರಿ ಸಿಗಬಹುದು ಎಂಬುದು ಅವರ ಅಂದಾಜು. ಕೆಲವು ಗಿಡಗಳಲ್ಲಿ 10ರಿಂದ 15 ಕೆಜಿವರೆಗೂ ಹಣ್ಣು ಬಂದಿದ್ದರೆ, ಇನ್ನು ಕೆಲವು ಗಿಡಗಳಲ್ಲಿ ಕಡಿಮೆ ಪ್ರಮಾಣದ ಫಸಲು ಬಂದಿದೆ.
ಕೆಜಿಗೆ ₹120ಕ್ಕೆ ಮಾರಾಟ, ಈಗಾಗಲೇ 800 ಕೆಜಿಗೂ ಹೆಚ್ಚು ಸೇಲ್
ಆರಂಭದಲ್ಲಿ ಬಸವರಾಜು ಅವರ ತೋಟಕ್ಕೆ ಬಂದ ಕೆಲವರು ಇಲ್ಲಿನ ವಾತಾವರಣದಲ್ಲಿ ಸೇಬು ಬೆಳೆಯಲು ಸಾಧ್ಯವಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಹಣ್ಣುಗಳು ಬಿಟ್ಟಾಗಲೂ ಅವು ಸೇಬಿನಂತೆ ಕಾಣುತ್ತಿಲ್ಲ ಎಂದು ಕೆಲವರು ಹೇಳಿದ್ದರಂತೆ. ಆದರೆ ಹಣ್ಣುಗಳು ಸಂಪೂರ್ಣ ಬಣ್ಣ ಪಡೆದು ಸೇಬಿನ ರೂಪದಲ್ಲಿ ಕಾಣಿಸಿಕೊಂಡ ನಂತರ ಎಲ್ಲರ ಅಭಿಪ್ರಾಯ ಬದಲಾಗಿದೆ. ಸುತ್ತಮುತ್ತಲಿನ ಜನರು ತೋಟಕ್ಕೆ ಬಂದು ಸೇಬು ಖರೀದಿಸಲು ಆರಂಭಿಸಿದ್ದಾರೆ. ಬಸವರಾಜು ಅವರು ಆರಂಭದಲ್ಲಿ ಕೆಜಿಗೆ ₹150ಕ್ಕೆ ಮಾರಾಟ ಮಾಡುವ ಆಲೋಚನೆ ಹೊಂದಿದ್ದರು. ಆದರೆ ಮಾಧ್ಯಮವೊಂದರಲ್ಲಿ ಕೆಜಿಗೆ ₹120 ಎಂದು ಹೇಳಿದ್ದರಿಂದ ಅದೇ ಬೆಲೆಗೆ ಮಾರಾಟ ಮುಂದುವರಿಸಿದ್ದಾರೆ. ಈವರೆಗೆ 800 ಕೆಜಿಗೂ ಹೆಚ್ಚು ಸೇಬು ಮಾರಾಟವಾಗಿದ್ದು, ಇನ್ನೂ ಅರ್ಧದಷ್ಟು ಫಸಲು ಮಾರಾಟಕ್ಕೆ ಬಾಕಿ ಇದೆ ಎಂದು ತಿಳಿಸಿದ್ದಾರೆ.
ಒಟ್ಟು ₹3 ಲಕ್ಷ ಹೂಡಿಕೆ, ಮುಂದಿನ ಬೆಳೆಯ ಮೇಲೆ ಭರವಸೆ
ಒಂದು ಎಕರೆ ಸೇಬು ತೋಟ ಸಿದ್ಧಪಡಿಸಲು ಬಸವರಾಜು ಅವರಿಗೆ ಒಟ್ಟು ಸುಮಾರು ₹3 ಲಕ್ಷ ಖರ್ಚಾಗಿದೆ. ಇದರಲ್ಲಿ ಗಿಡಗಳ ಖರೀದಿ, ಗೊಬ್ಬರ, ಗುಂಡಿ ತಯಾರಿ ಮತ್ತು ಕಾಂಪೌಂಡ್ ನಿರ್ಮಾಣದ ವೆಚ್ಚವೂ ಸೇರಿದೆ. ಸೇಬು ಕೃಷಿಯ ಮೊದಲ ಪ್ರಯತ್ನದಲ್ಲೇ ಫಸಲು ಪಡೆದಿರುವ ಅವರು, ಮುಂದಿನ ಬೆಳೆಯಲ್ಲಿ ಇನ್ನಷ್ಟು ಉತ್ತಮ ಗುಣಮಟ್ಟದ ಮತ್ತು ದೊಡ್ಡ ಗಾತ್ರದ ಹಣ್ಣುಗಳನ್ನು ಪಡೆಯುವ ಗುರಿ ಹೊಂದಿದ್ದಾರೆ. ಇದಕ್ಕಾಗಿ ಬಿಜಾಪುರಕ್ಕೆ ತೆರಳಿ ಗಿಡಗಳನ್ನು ಪೂರೈಸಿದವರಿಂದ ಮುಂದಿನ ನಿರ್ವಹಣೆ, ಗಿಡಗಳ ಎತ್ತರ ಮತ್ತು ಕತ್ತರಿಸುವಿಕೆ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಯೋಜಿಸಿದ್ದಾರೆ. ತಮ್ಮ ಕೃಷಿ ಪ್ರಯತ್ನಕ್ಕೆ ತೋಟಗಾರಿಕೆ ಅಥವಾ ಕೃಷಿ ಇಲಾಖೆಯಿಂದ ಹೆಚ್ಚಿನ ನೆರವು ಸಿಕ್ಕಿಲ್ಲ ಎಂದು ಬಸವರಾಜು ಬೇಸರ ವ್ಯಕ್ತಪಡಿಸಿದ್ದಾರೆ. ಸೇಬು ಹಣ್ಣುಗಳನ್ನು ಸಂಗ್ರಹಿಸಿಡಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂಬುದು ಅವರ ಅಭಿಪ್ರಾಯ.










