ಸೂಲಿಬೆಲೆ [ನ.17] : ಕಾಂಗ್ರೆಸ್ ಪಕ್ಷ ಎಂಟಿಬಿ ನಾಗರಾಜ್‌ಗೆ ಎಲ್ಲವೂ ಕೊಟ್ಟಿತ್ತು. ಪಕ್ಷಕ್ಕೆ ಹಾಗೂ ಮತದಾರರಿಗೆ ದ್ರೋಹ ಬಗೆದು ಬೆನ್ನಿಗೆ ಚೂರಿ ಹಾಕಿಹೋದವನನ್ನು ಸುಪ್ರೀಂಕೋರ್ಟ್ ಅನರ್ಹ ಎಂದು ಹೇಳಿದ್ದು, ಈ ಚುನಾವಣೆಯಲ್ಲಿ ಹೊಸಕೋಟೆ ಮತದಾರರು ಈ ಅನರ್ಹನನ್ನು ಮನೆಗೆ ಕಳುಹಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ, ಅನರ್ಹ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೊಸಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ನಾಮಪತ್ರ ಸಲ್ಲಿಕೆಯ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಪತಕ್ಕೆ ಕಾರಣರಾದ ಅನರ್ಹರನ್ನು ಪಕ್ಷಾಂತರ ಮಾಡಿಸುತ್ತಿಲ್ಲ ಎಂದು ಹೇಳಿದ್ದ ಬಿಜೆಪಿ, ಸುಪ್ರೀಂ ತೀರ್ಪು ಬಂದ ಮೇಲೆ ಯಡಿಯೂರಪ್ಪ, ಅಮಿತ್ ಶಾ ಅವರೇ ಮಾಡಿಸಿದ್ದು ಅಂತ ಒಬ್ಬೊಬ್ಬರೆ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ದ್ರೋಹ ಮಾಡಿ ಹೋದ: ಎಂಟಿಬಿಯನ್ನು ಮಂತ್ರಿ ಮಾಡ್ದೆ, ಬೋರ್ಡ್ ಛೇರ್ಮನ್ ಮಾಡ್ದೆ. ಎಲ್ಲ ಅನುಭವಿಸಿ ಪಕ್ಷ ದ್ರೋಹ ಮಾಡಿ ಬಿಜೆಪಿಯ ಯಡಿಯೂರಪ್ಪ ಅವರ ಹತ್ತಿರ ಹೋದ. ಇಂಥ ನಾಚಿಕೆಗೆಟ್ಟ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕು. ರಾಜಕಾರಣ ಶುದ್ಧವಾಗಿರಬೇಕಾದರೇ, ಹೊಸಕೋಟೆ ಸ್ವಾಭಿಮಾನ ಉಳಿಯಬೇಕಾದರೇ ಈ ಅನರ್ಹನನ್ನು ಮನೆಗೆ ಕಳುಹಿಸಿ ಎಂದರು.

ಕೆರೆ ತುಂಬಿಸುವ ಯೋಜನೆ ಕೊಟ್ಟಿದ್ದು ನಾನು. ಮೊನ್ನೆ ಯಡಿಯೂರಪ್ಪ ಅವರನ್ನು ಕರೆದುಕೊಂಡು ಬಂದು ಕೆರೆಗಳು ತುಂಬಿಸುವ 100 ಕೋಟಿ ಯೋಜನೆಗೆ ಹಣ ಕೊಟ್ಟಿದ್ದು ನಮ್ಮ ಸರ್ಕಾರ, ಯಡಿಯೂರಪ್ಪ ಕೊಟ್ಟಿದ್ದಲ್ಲ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೇ ಕಾಂಗ್ರೆಸ್ ಗೆಲ್ಲಬೇಕು. ದಲಿತರ ಸೇರಿದಂತೆ ಎಲ್ಲ ವರ್ಗದವರಿಗೂ ಸಮಾನ ನ್ಯಾಯ, ಅವಕಾಶ ಕೊಡುವುದು ಕಾಂಗ್ರೆಸ್ ಮಾತ್ರ ಎಂದರು. 

ಕೋಮುವಾದಿಗಳಿಗೆ ಪಾಠ ಕಲಿಸಿ: ಎಲ್ಲ ಕೊಟ್ಟ ಪಕ್ಷಕ್ಕೆ, ಮತಕೊಟ್ಟು ಅಧಿಕಾರ ನೀಡಿದ ಮತದಾರರಿಗೆ ದ್ರೋಹ ಬಗೆದ ಎಂಟಿಬಿ ನಾಗರಾಜ್ ಕೋಮುವಾದ ಪಕ್ಷಕ್ಕೆ ಹೋಗಿದ್ದಾರೆ. ಇಷ್ಟು ದಿನ ಎದೆಬಗೆದ್ರೆ ಸಿದ್ದರಾಮಯ್ಯ ಅಂತಿದ್ದ. ಈಗ ಯಡಿಯೂರಪ್ಪ ಅಂತಿದ್ದಾರೆ.
2018ರಲ್ಲಿ ಈ ಕ್ಷೇತ್ರದ ಜನತೆ ಇವತ್ತು ಅನರ್ಹಗೊಂಡ ವ್ಯಕ್ತಿಗೆ ಆಶೀರ್ವಾದ ಮಾಡಿದ್ದೀರಿ. ಪಕ್ಷಾಂತರ ಮಾಡಿದ್ದಕ್ಕೆ ರಮೇಶ್ ಕುಮಾರ್ ಅನರ್ಹ ಮಾಡಿದ್ದರು. ಸುಪ್ರೀಂ ಕೋರ್ಟ್‌ಗಿಂತ ಮಿಗಿಲಾದದ್ದು ಯಾವುದು ಇಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಮಾಲೀಕರು ಎಂದು ಸಿದ್ದರಾಮಯ್ಯ ಹೇಳಿದರು.

ನಿಮ್ಮಿಂದ ಅನರ್ಹಗೊಳ್ಳಲಿ: ಬಿಜೆಪಿ ಹೋಗಿ ರುವುದು ಸಂವಿಧಾನ ವಿರೋಧಿ. ಶಾಸಕರಾಗಿ ಇರಬಾರದು ಎಂದು ಸುಪ್ರೀಂಕೋರ್ಟ್ ಅನರ್ಹ ಮಾಡಿದೆ. ಸುಪ್ರೀಂಕೋರ್ಟಿನಿಂದ ಅನರ್ಹಗೊಂಡ ವ್ಯಕ್ತಿ ನಿಮ್ಮಿಂದ ಅನರ್ಹಗೊಳ್ಳಬೇಕಿದೆ. ಈ ಚುನಾವಣೆಯಲ್ಲಿ 
ಅನರ್ಹಗೊಳಿಸುತ್ತಿರೋ ಇಲ್ವ ಎಂದು ಮತದಾರರನ್ನು ಪ್ರಶ್ನೆಸಿ ಇವರಿಗೆ ಪಾಠ ಕಲಿಸಿ ಇಡೀ ದೇಶಕ್ಕೆ ನೀತಿ ಪಾಠ ಸಾರಬೇಕಿದೆ ಎಂದು ಮನವಿ ಮಾಡಿದರು. 

ಸ್ವಾಭಿಮಾನ ತಂದುಕೊಡಿ: ಎಂಟಿಬಿಯನ್ನು ಅನರ್ಹಗೊಳಸಿದರೇ ಹೊಸಕೋಟೆ ಮತದಾರ ಸ್ವಾಭಿಮಾನಿಗಳಾಗ್ತೀರಾ? ಮತದಾರರಿಗೆ ಅಪಮಾನ ಮಾಡಿರುವ ವ್ಯಕ್ತಿಯನ್ನು ಡಿ.5ರಂದು ಮನೆಗೆ ಕಳುಹಿಸಿ. ವಸತಿ ಮಂತ್ರಿ ಮಾಡ್ದೆ, ಏನು ಅನಾಯ್ಯವಾಗಿತ್ತು ನಮ್ಮ ಪಕ್ಷದಲ್ಲಿ? ಎಂದು ತರಾಟೆಗೆ ತೆಗೆದುಕೊಂಡರು. ಇಂಥ ನಾಚಿಕೆಗಟ್ಟ ವ್ಯಕ್ತಿಗಳಿಗೆ ಪಾಠ ಕಲಿಸಿ ಸ್ವಾಭಿಮಾನ ಮೆರೆಯಿರಿ. ಇಷ್ಟು ದಿನ ಬಿಜೆಪಿ ಸುಳ್ಳುಹೇಳುತ್ತಿತ್ತು. ನಾವು ಪಕ್ಷಾಂತರ ಮಾಡಿಸುತ್ತಿಲ್ಲ ಅಂತ. ಈಗ ಒಬ್ಬಬ್ಬರೇ ಇವರೇ ನಿಜ ಹೇಳಲು ಶುರು ಮಾಡಿದ್ದಾರೆ. ವಿಶ್ವನಾಥ್, ರಮೇಶ್ ಜಾರಕಿಹೊಳಿ ಸೇರಿದಂತೆ ಬೇರೆ ಬೇರೆ ಹೇಳುತ್ತಿದ್ದಾರೆ. ಯಡಿಯೂರಪ್ಪ, ಅಮಿತ್ ಶಾ ಅವರೇ ಮಾಡಿಸಿದ್ದು ಅಂತ. ಈಗ ಜನತಾ ನ್ಯಾಯಾಲಯದಲ್ಲಿ ನೀವು ತೀರ್ಪು
ಕೊಡಬೇಕು ಎಂದರು.

ಎಂಟಿಬಿ ಮೂರನೇ ಸ್ಥಾನಕ್ಕೆ ಹೋಗ್ತಾನೆ: ಈ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಮೂರನೇ ಸ್ಥಾನಕ್ಕೆ ಹೋಗ್ತಾನೆ. ಎರಡನೇ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಬರಬಹುದು. ಕಾಂಗ್ರೆಸ್ ಗೆಲ್ಲುತ್ತೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು. ಹೊಸಕೋಟೆ ಜನ ತೀರ್ಮಾನ ಮಾಡಿದ್ದು ಮನೆಗೆ ಕಳುಹಿಸುತ್ತಾರೆ. ಪಕ್ಷಕ್ಕೆ ಚೂರಿ ಹಾಕಿದವರು ರಾಜಕೀಯದಲ್ಲಿ ಇರಬಾರದು ಎಂದರು ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕೃಷ್ಣಬೈರೇಗೌಡ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ನಜೀರ್ ಅಹಮದ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಭಾಗವಹಿಸಿದ್ದರು.