ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳ ರಕ್ಷಿಸಿದ ಕೆಎಸ್‌ಆರ್‌ಟಿಸಿ ಚಾಲಕಗೆ ಸನ್ಮಾನ
ತುಮಕೂರು ವಿಭಾಗದ ಶಿರಾ ಘಟಕದ ಚಾಲಕ ಮಂಜುನಾಥ್ ಅವರಿಗೆ 10 ಸಾವಿರ ರು.ನಗದು ಪುರಸ್ಕಾರ ಮತ್ತು ಅಭಿನಂದನಾ ಪತ್ರ ವಿತರಿಸಿ ಗೌರವಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್.
ಬೆಂಗಳೂರು(ಫೆ.01): ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣುಮಕ್ಕಳ ಜೀವ ರಕ್ಷಿಸಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಎಂ. ಮಂಜುನಾಥ್ ಅವರ ಕಾರ್ಯ ಮೆಚ್ಚಿ ಕೆಎಸ್‌ಆರ್‌ಟಿಸಿ ಸಂಸ್ಥೆ 10 ಸಾವಿರ ರು.ನಗದು ಪುರಸ್ಕಾರ ನೀಡಿ ಗೌರವಿಸಿದೆ.
ಮಂಗಳವಾರ ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ತುಮಕೂರು ವಿಭಾಗದ ಶಿರಾ ಘಟಕದ ಚಾಲಕ ಮಂಜುನಾಥ್ ಅವರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರು, 10 ಸಾವಿರ ರು.ನಗದು ಪುರಸ್ಕಾರ ಮತ್ತು ಅಭಿನಂದನಾ ಪತ್ರ ವಿತರಿಸಿ ಗೌರವಿಸಿದರು.
ಜೋಳ ಹಾಗೂ ರಾಗಿಯ ಬೆಂಬಲ ಬೆಲೆ ನಡುವಿನ ವ್ಯತ್ಯಾಸ ಸರಿಪಡಿಸಿ
ಎಂ.ಮಂಜುನಾಥ ಅವರು ಚಾಲಕರಾಗಿರುವ ಬಸ್ ಶಿರಾದಿಂದ ಹೊರಟು ನಾಗಪ್ಪನಹಳ್ಳಿ ಗೇಟ್ ಮಾರ್ಗದಲ್ಲಿ ಸಾಗುತ್ತಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಸ್ಸು ಹಂದಿಗುಂಟೆ ಅಗ್ರಹಾರ ಕೆರೆಯ ಪಕ್ಕ ಸಾಗುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಕೂಗಿಕೊಂಡು ಬಂದು ಮಕ್ಕಳು ನೀರಿನಲ್ಲಿ ಮುಳುಗುತ್ತಿದ್ದಾರೆ, ರಕ್ಷಿಸಿ ಎಂದು ಕೇಳಿಕೊಂಡಿದ್ದರು. ಈ ವೇಳೆ ಮಂಜುನಾಥ್ ಅವರು ಕ್ಷಣವೂ ಹಿಂದೆ ಮುಂದೆ ಯೋಚಿಸದೆ ಕೆರೆಗೆ ಧುಮುಕಿ ಇಬ್ಬರನ್ನು ನೀರಿನಿಂದ ಮೇಲೆತ್ತಿ ರಕ್ಷಿಸಿದ್ದರು.
ಈ ವೇಳೆ ಮಾತನಾಡಿದ ವಿ.ಅನ್ಬುಕುಮಾರ್ ಅವರು, ಜಗತ್ತಿನಲ್ಲಿ ಇನ್ನೂ ಮಾನವೀಯ ಮೌಲ್ಯಗಳು ಉಳಿದಿವೆ ಎಂಬುದಕ್ಕೆ ಚಾಲಕ ಮಂಜುನಾಥ ಜೀವಂತ ಉದಾಹರಣೆ. ಈಜು ಬರುವ ಎಷ್ಟೋ ಜನ ನೀರಿಗೆ ಧುಮುಕಿ ಇತರರ ಪ್ರಾಣ ಉಳಿಸುವ ಕಾರ್ಯ ಮಾಡಲು ಹಲವು ಬಾರಿ ಯೋಚಿಸುತ್ತಾರೆ. ಆದರೆ, ಮಂಜುನಾಥ್ ಅವರ ಕಾರ್ಯದಿಂದ ಇಬ್ಬರು ಮಕ್ಕಳ ಜೀವ ಉಳಿದಿದೆ. ಮಂಜುನಾಥ್ ಅವರ ಮಾನವೀಯ ಕಾಯ ಇತರರಿಗೆ ಪ್ರೇರಕ ಶಕ್ತಿಯಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ನಿರ್ದೇಶಕ (ಸಿಬ್ಬಂದಿ ಜಾಗೃತ) ಪ್ರಶಾಂತ್‌ಕುಮಾರ್ ಮಿಶ್ರ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.