ಕಲಬುರಗಿಯಲ್ಲಿ ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್ ದಂಧೆ: ಸಂತ್ರಸ್ತೆಯರ ಆರೋಪ
ನಗರದಲ್ಲಿ ಅಸಹಾಯಕ ಯುವತಿಯರನ್ನು ಮುಂದಿಟ್ಟುಕೊಂಡು ದಲಿತ ಸೇನೆಯವರು ಎಂದು ಹೇಳಿಕೊಂಡ ಮುಖಂಡರು, ಕಾರ್ಯಕರ್ತರು ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ.
ಕಲಬುರಗಿ (ಸೆ.08): ನಗರದಲ್ಲಿ ಅಸಹಾಯಕ ಯುವತಿಯರನ್ನು ಮುಂದಿಟ್ಟುಕೊಂಡು ದಲಿತ ಸೇನೆಯವರು ಎಂದು ಹೇಳಿಕೊಂಡ ಮುಖಂಡರು, ಕಾರ್ಯಕರ್ತರು ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಅವರಿಂದ ಸಂಕಷ್ಟಕ್ಕೊಳಗಾಗಿರುವ ತಾವು ನಗರ ಪೊಲೀಸರಿಗೆ ದೂರು ನೀಡಿದ್ದರೂ ಪ್ರಕರಣ ದಾಖಲಾಗುತ್ತಿಲ್ಲವೆಂದು ಸಂತ್ರಸ್ತ ಯುವತಿಯರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇಲ್ಲಿನ ಪತ್ರಿಕಾ ಭವನದಲ್ಲಿ ಭೀಮ ಆರ್ಮಿ ಭಾರತ ಏಕತಾ ಮಿಶನ್ ಅಧ್ಯಕ್ಷ ಎಸ್.ಎಸ್. ತಾವಡೆ ಜೊತೆಗೂಡಿಕೊಂಡು ಮುಂಬೈ, ಅಕ್ಕಲಕೋಟೆ ಮೂಲದ ಇಬ್ಬರು ಸಂತ್ರಸ್ತೆಯರು, ಕಮಲಾಪುರದ ಡೊಂಗರಗಾಂವ್ ಮೂಲದ ಓರ್ವ ಸಂತ್ರಸ್ತೆ ಗೃಹಿಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ಹೇಗೆ ಮೋಸದ ಬಲೆಗೆ ಬಿದ್ದೇವೆಂಬುದನ್ನು ವಿವರಿಸಿ ನ್ಯಾಯ ಕೇಳಿ ಪೊಲೀಸರ ಬಳಿ ಹೋದರೂ ಕೇಸ್‌ಗಳಾಗುತ್ತಿಲ್ಲ. ಪ್ರಕರಣದ ತನಿಖೆಯಾಗುತ್ತಿಲ್ಲವೆಂದು ಗೋಳಾಡಿದರು. ಮುಂಬೈ ಮೂಲದ ಯುವತಿ ತನ್ನನ್ನು ವ್ಯಾಪಾರಿಯೊಬ್ಬರೊಂದಿಗೆ ಪರಿಚಯಿಸಿ ಹನಿಟ್ರ್ಯಾಪ್‌ಗೆ ಪ್ರಚೋದಿಸಲಾಗಿದೆ.
ಕಿಮ್ಸ್ ಬದಲು ಕೆಎಂಸಿಆರ್‌ಐ ಹೆಸರು ಮರು ನಾಮಕರಣ: ಡಾ.ಎಸ್.ಎಫ್.ಕಮ್ಮಾರ
ಮುಂಬೈನ ಹೋಟೆಲ್‌ನಲ್ಲಿದ್ದ ತನ್ನನ್ನು ಕಲಬುರಗಿಯಲ್ಲೇ ಉದ್ಯೋಗ ಕೊಡಿಸೋ ನೆಪದಲ್ಲಿ ನನ್ನನ್ನು ಕರೆತಂದು ಇಂತಹ ಕೆಲಸ ಮಾಡಿಸಿದ್ದಾರೆ. ಹೇಳಿದಂತೆ ಕೇಳದಿದ್ದರೆ ಕೊಲೆ ಮಾಡೋದಾಗಿಯೂ ಬೆದರಿಕೆ ಒಡ್ಡಿದ್ದಾರೆ. ವ್ಯಾಪಾರಿ ಜೊತೆಗಿದ್ದ ಫೋಟೋ, ವಿಡಿಯೋ ಮಾಡಿ 35 ಲಕ್ಷ ರು. ಡೀಲ್ ಕುದುರಿಸಿದ್ದಾರೆ. ದೂರು ನೀಡಿದರೂ ಕೇಸ್ ದಾಖಲಾಗುತ್ತಿಲ್ಲ ಎಂದು ಆರೋಪಿಸಿದರು. ಲೈಂಗಿಕವಾಗಿ ಕಿರುಕುಳಕ್ಕೊಳಗಾದ ಅಕ್ಕಲಕೋಟೆ ಮೂಲದ ಯುವತಿ ಮಾತನಾಡಿ, ತನಗೂ ಮೋಸ, ವಂಚನೆ ಮಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿ ಗರ್ಭಪಾತ ಕೂಡಾ ಮಾಡಿಸಿದ್ದಾರೆ. ಎಫ್‌ಐಆರ್ ಆದರೂ ಆರೋಪಿಗಳ ವಿರುದ್ಧ ಕ್ರಮ ಆಗಿಲ್ಲವೆಂದು ದೂರಿದರು.
ಡೊಂಗರಗಾಂವ್ ಮೂಲದ ಸಂತ್ರಸ್ತೆ ಮಾತನಾಡಿ, ತನಗೆ ಇಬ್ಬರು ಮಕ್ಕಳಿದ್ದಾರೆ. ಮನೆಯಲ್ಲಿ ಕೌಟುಂಬಿಕ ಸಸ್ಯೆಯಿಂದ ಜರ್ಜರಿತಳಾದಾಗ ಈ ಮುಖಂಡರು ಪರಿಚಯವಾದರು. ಪೊಲೀಸ್ ಪೇದೆಯೊಬ್ಬರು ನನ್ನ ಜೊತೆ ನಡೆದುಕೊಂಡ ಧೋರಣೆಗೆ ನಾನು ವ್ಯಗ್ರಳಾಗಿದ್ದೆ. ಆಗ ನ್ಯಾಯ ಕೊಡಿಸುವುದಾಗಿ ಹೇಳಿದ್ದ ಈ ಮುಖಂಡರು ಪೇದೆಗೆ ಟ್ರ್ಯಾಪ್ ಮಾಡುವ ಮೋಸದ ಜಾಲ ಹೆಣೆದು ನನ್ನನ್ನು ಬಳಸಿಕೊಡಿದ್ದಾರೆ. ಅವರಿಂದ 7 ಲಕ್ಷ ರು. ಹಣ ಪಡದು ನನಗೂ 1 ಲಕ್ಷ ರು. ಕೊಟ್ಟಂತೆ ಮಾಡಿ ನಂತರ ವಾಪಸ್ ಪಡೆದಿದ್ದಾರೆ. ಹೀಗೆ ಮೋಸ ಮಾಡಿ ನನಗಂತೂ ಕಲಬುರಗಿ ಬಿಟ್ಟು ಹೋಗುವಂತೆ ಜೀವ ಬೆದರಿಕೆ ಹಾಕಿದ್ದರೆಂದು ಯುವತಿ ಮುಖಂಡರ ವಿರುದ್ಧ ದೂರಿದ್ದಾರೆ. 30ರಿಂದ 35 ಯುವತಿಯರು ಈ ಕಾರ್ಯಕರ್ತರಿಂದ ಮೋಸ, ವಂಚನೆಗೊಳಗಾಗಿದ್ದಾರೆ. ಇವರ ಈ ಕೆಲಸಕ್ಕೆ ಕಡಿವಾಣ ಹಾಕಲೇಬೇಕು ಎಂದು ಅವರು ಆಗ್ರಹಿಸಿದರು.
ಮಹದಾಯಿ ಯೋಜನೆ ಜಾರಿಗೆ ಬಿಜೆಪಿ ಬದ್ಧ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಭೀಮ ಆರ್ಮಿಯ ಎಸ್‌ಎಸ್ ತಾವಡೆ ಮಾತನಾಡಿ, ಈ ಸಂತ್ರಸ್ತೆಯರ ಆರೋಪಗಳನ್ನು ಪರಾಮರ್ಶೆಗೊಳಪಡಿಸಿದಾಗ, ನೆರವು ಅರಸಿ ಬರುವ ಅಸಹಾಯಕ ಯುವತಿಯರು, ಗೃಹಿಣಿಯರನ್ನೇ ಬಳಸಿಕೊಂಡು ಸಿರಿವಂತ ಉದ್ಯಮಿಗಳು, ರಿಯಲ್ ಎಸ್ಟೇಟ್ ಕುಳಗಳು, ಅಧಿಕಾರಿಗಳ ಬಳಿ ಉಪಾಯವಾಗಿ ಕಳುಹಿಸಿ, ಫೋಟೋ- ವಿಡಿಯೋ ಮಾಡಿ ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್ ಮಾಡುತ್ತ ಹಣ ಸುಲಿಗೆ ಮಾಡುವ ಬಹುದೊಡ್ಡ ಜಾಲ ಕಲಬುರಗಿಯಲ್ಲಿ ಕೆಲಸ ಮಾಡುತ್ತಿದೆ. ಅನೇಕರಿಗೆ ಕಿರುಕುಳ ನೀಡುತ್ತಿದ್ದಾರೆ. ಪೊಲೀಸರು ತಕ್ಷಣ ಇದನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.