ವಿಜಯಪುರ(ಡಿ.08): ನಗರದ ಬಂಗಾರ ಆಭರಣ ಮಳಿಗೆ ಮಾಲೀಕನೊಬ್ಬನನ್ನು ಹೆದರಿಸಿ, ಆತನಿಂದ 15 ಲಕ್ಷ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.

ವಿಜಯಪುರದ ದಾನಮ್ಮ ಮಹಾಂತೇಶ ಹಿರೇಮಠ (35), ಸುಧೀರ ವಿವೇಕಾನಂದ ಘಟ್ಟೆನ್ನವರ, ಬಬಲೇಶ್ವರದ ರವಿ ಸಿದ್ರಾಯ ಕಾರಜೋಳ, ಬೊಮ್ಮನಳ್ಳಿಯ ಮಲ್ಲಿಕಾರ್ಜುನ ಚನ್ನಪ್ಪ ಮುರಗುಂಡಿ ಹಾಗೂ ಸಿಂದಗಿಯ ಶ್ರೀಕಾಂತ ಸೋಮಜಾಳ ಬಂಧಿತ ಆರೋಪಿತರು. ಈ ನಾಲ್ವರು ಆರೋಪಿತರು 20 ರಿಂದ 28 ವಯೋಮಾನದವರಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಬಂಧಿಸಲಾಗಿದೆ. ಇದರಲ್ಲಿ ಇನ್ನೂ ಹಲವರ ಪಾತ್ರ ಇರುವ ಬಗ್ಗೆ ಸಂಶಯವಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಬಂಧಿತ ಆರೋಪಿಗಳಿಂದ ದೂರುದಾರನಿಂದ ದರೋಡೆ ಮಾಡಿದ ಬಂಗಾರದ ಉಂಗುರ, ಆಧಾರ್‌, ಪಾನ್‌ ಕಾರ್ಡ್‌ ಹಾಗೂ 15 ಲಕ್ಷ ನಗದು ಹಾಗೂ ಪ್ರಕರಣಕ್ಕೆ ಬಳಸಿದ್ದ ಮಾರುತಿ ಬ್ರೆಜಾ ಕಾರು, ಒಂದು ಮೋಪೆಡ್‌ ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಎಸ್ಪಿ ಪ್ರಕಾಶ್‌ ನಿಕ್ಕಂ ವಿವರಿಸಿದರು.

ಏನಿದು ಘಟನೆ?:

ಪ್ರಮುಖ ಆರೋಪಿ ದಾನಮ್ಮ ಹಿರೇಮಠ ದೂರುದಾರನ ಬಂಗಾರದ ಅಂಗಡಿಗೆ ಭೇಟಿ ನೀಡಿ ಸ್ನೇಹ ಬೆಳೆಸಿದ್ದಳು. ಬಂಗಾರದ ಆಭರಣಗಳನ್ನು ನೇರವಾಗಿ ಮನೆಗೆ ತಲುಪಿಸುವ ಸೇವೆಯನ್ನೂ ಆ ಬಂಗಾರ ಅಂಗಡಿದಾರ ಮಾಡುತ್ತಿದ್ದ. ಸಮಯ ಸಾಧಿಸಿ ಚಿನ್ನದ ವ್ಯಾಪಾ​ರಿ​ಯನ್ನು ಆರೋಪಿತರು ಮನೆಗೆ ಕರೆಯಿಸಿಕೊಂಡು ವಿವಸ್ತ್ರಗೊಳಿಸಿ ಚಿತ್ರ ತೆಗೆದು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ಈ ಚಿತ್ರಗಳನ್ನು ಕ್ಲಿಕ್‌ ಮಾಡಿ ವೈರಲ್‌ ಮಾಡುವುದಾಗಿ ಹೇಳಿ ಹೆದರಿಸಿದ್ದರು. ನಂತರ ಕೋಣೆಯೊಂದರಲ್ಲಿ ಕೂಡಿಹಾಕಿ ಜೀವ ಬೆದರಿಕೆ ಹಾಕಿದ್ದಾರೆ. 6 ಗ್ರಾಂ ಬಂಗಾರದ ಹರಳಿನ ಉಂಗುರ, ಜೇಬಿನಲ್ಲಿದ್ದ ದ9 ಸಾವಿರ ನಗದು, ಪಾನ್‌ಕಾರ್ಡ್‌, ಆಧಾರ್‌ ಕಾರ್ಡ್‌ ಕಿತ್ತುಕೊಂಡು 25 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಪೈಕಿ ಚಿನ್ನದ ವ್ಯಾಪಾ​ರಿ​ಯಿಂದ 15 ಲಕ್ಷ ಹಣವನ್ನೂ ಪಡೆದುಕೊಂಡಿದ್ದಾರೆ. ನಂತರ ಉಳಿದ 10 ಲಕ್ಷ ಹಣವನ್ನು ಕೊಡಿ ಎಂದು ಫೋನ್‌ನಲ್ಲಿ ಕಿರುಕುಳ ನೀಡಿದ್ದಾರೆ. ಇದರಿಂದಾಗಿ ಬಂಗಾರ ಅಂಗಡಿ ಮಾಲೀಕ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದರು. ದೂರು ದಾಖಲಾದ 24 ಗಂಟೆಯೊಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್‌ ಇಲಾಖೆ ಯಶಸ್ವಿಯಾಗಿದೆ.

ಪೊಲೀಸರ ಕಾರ್ಯ ಶ್ಲಾಘನೆ:

ಈ ಪ್ರಕರಣವನ್ನು 24 ಗಂಟೆಯೊಳಗಾಗಿ ಭೇದಿ​ಸು​ವಲ್ಲಿ ಯಶಸ್ವಿಯಾದ ಪೊಲೀಸ್‌ ಅಧಿಕಾರಿಗಳಾದ ಮಹಾಂತೇಶ ದ್ಯಾಮಣ್ಣವರ, ಆನಂದ ಠಕ್ಕನ್ನವರ, ಬಿ.ಐ. ಹಿರೇಮಠ, ಜಿ.ಬಿ. ಬಿರಾದಾರ, ಮಹಿಳಾ ಎಎಸ್‌ಐ ಗಂಗೂ ಬಿರಾದಾರ, ಸಿಬ್ಬಂದಿಗಳಾದ ವಿ.ಎಸ್‌. ನಾಗಠಾಣ, ಎಂ.ಎನ್‌. ಮುಜಾವರ, ಜಿ.ವೈ. ಹಡಪದ, ಆರ್‌.ಡಿ. ಅಂಜುಟಗಿ, ಎಲ್‌.ಎಸ್‌. ಹಿರೇಗೌಡರ, ಎಸ್‌.ಬಿ. ಜೋಗಿ ನೇತೃತ್ವದ ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಲಾಗಿದ್ದು, ಸೂಕ್ತ ಬಹುಮಾನ ನೀಡಲಾಗುವುದು ಎಂದು ಎಸ್‌.ಪಿ. ಪ್ರಕಾಶ ನಿಕ್ಕಂ ಪ್ರಶಂಸಿದರು.

ವಿಜಯಪುರ ಡಿವೈಎಸ್‌ಪಿ ಲಕ್ಷ್ಮೇನಾರಾಯಣ, ಸಿಪಿಐ ಮಹಾಂತೇಶ ದ್ಯಾಮಣ್ಣವರ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.