ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಫಿಕ್ಸಾ?: ಸಚಿವ ಬೊಮ್ಮಾಯಿ ಹೇಳಿದ್ದಿಷ್ಟು
ಸಿಎಂ ಸರ್ವಪಕ್ಷ ಸಭೆ ಕರೆಯುತ್ತಿದ್ದಾರೆ. ಅಲ್ಲಿ ಎಲ್ಲವೂ ಚರ್ಚೆಯಾಗುತ್ತದೆ| ಸರ್ವಪಕ್ಷ ಸಭೆಯಲ್ಲಿ ತಜ್ಞ ವರದಿ ಬಗ್ಗೆ ಕೂಡ ಚರ್ಚೆ| ಲಾಕ್‌ಡೌನ್ ಮಾಡದೆ ಮಹಾಮಾರಿ ಕೊರೋನಾ ನಿಯಂತ್ರಣ ಮಾಡುವುದು ನಮ್ಮ ಉದ್ದೇಶ: ಬಸವರಾಜ ಬೊಮ್ಮಾಯಿ|
ಬೀದರ್(ಏ.14): ಕಳೆದ ಬಾರಿ ಕೊರೋನಾ ನಿಭಾಯಿಸಿದ ಅನುಭವ ಇದೆ. ಲಾಕ್‌ಡೌನ್ ಇಲ್ಲದೇ ಕೋವಿಡ್ ನಿಯಂತ್ರಣ ಮಾಡೋದು ನಮ್ಮ ಉದ್ದೇಶವಾಗಿದೆ. ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನ ಪಾಲನೆ ಮಾಡಬೇಕು ಎಂದು ಈಗಾಗಲೇ ಸೂಚನೆ ಕೊಟ್ಟಿದ್ದೇವೆ. ಪದೇ ಪದೆ ಹೇಳುತ್ತಿದ್ದೇವೆ ಸಾರ್ವಜನಿಕರು ಕೂಡ ಸಹಕಾರ ಕೊಡಬೇಕು. ಲಾಕ್‌ಡೌನ್ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಈಗಾಗಲೇ ಸಿಎಂ ಮತ್ತು ಆರೋಗ್ಯ ಇಲಾಖೆ ಸಚಿವರು ಸ್ಪಷ್ಟಪಡಿಸಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು(ಬುಧವಾರ) ಜಿಲ್ಲೆಯ ಹುಮನಾಬಾದ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಅವರು ಸರ್ವಪಕ್ಷ ಸಭೆ ಕರೆಯುತ್ತಿದ್ದಾರೆ. ಅಲ್ಲಿ ಎಲ್ಲವೂ ಚರ್ಚೆಯಾಗುತ್ತದೆ. ಸರ್ವಪಕ್ಷ ಸಭೆಯಲ್ಲಿ ತಜ್ಞ ವರದಿ ಬಗ್ಗೆ ಕೂಡ ಚರ್ಚೆಯಾಗುತ್ತದೆ ಎಂದು ಹೇಳಿದ್ದಾರೆ.
ವೈರಸ್ ದಾಳಿಗೆ ನಲುಗಿದ ಸಿಲಿಕಾನ್ ಸಿಟಿ: ಬೆಂಗ್ಳೂರಿಗೆ ಮತ್ತಷ್ಟು ಟಫ್ ರೂಲ್ಸ್..?
ಲಾಕ್‌ಡೌನ್ ಮಾಡದೆ ಮಹಾಮಾರಿ ಕೊರೋನಾ ನಿಯಂತ್ರಣ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ಬಗ್ಗೆ ಸಾಕಷ್ಟು ಊಹಾಪೋಹಗಳು ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು. ವೀಕ್ ಎಂಡ್ ಲಾಕ್‌ಡೌನ್ ಪರಿಸ್ಥಿತಿ ಅನುಗುಣವಾಗಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.