ಶಿಗ್ಗಾಂವಿ(ಮೇ.26): ಇದುವರೆಗೆ ಕೋವಿಡ್‌ ಕುರಿತು ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜತೆ ಸಂವಾದ ನಡೆಸುತ್ತಿದ್ದ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್‌ ಬೊಮ್ಮಾಯಿ ಅವರು ವಿನೂತನ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದು, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ 12 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಜತೆ ಕೋವಿಡ್‌ ಸ್ಥಿತಿಗತಿ ಕುರಿತು ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು.

ಇದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್‌ ನಿಯಂತ್ರಣಕ್ಕೆ ಭದ್ರ ಬುನಾದಿ ಹಾಕಿದರು. ಶಿಗ್ಗಾಂವಿ ತಾಲೂಕಿನ ತಡಸ, ಕುನ್ನೂರು, ದುಂಡಸಿ, ಹೊಸೂರು, ಚಂದಾಪುರ, ಅಂದಲಗಿ, ಹಿರೇಬೆಂಡಿಗೇರಿ, ಬನ್ನೂರು ಕಬನೂರು, ಬಸವನಾಳ, ಕ್ಯಾಲಕೊಂಡ, ಅತ್ತಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ಹಲವಾರು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು. ಅವುಗಳನ್ನು ಈಡೇರಿಸುವಂತೆ ಸಚಿವರಿಗೆ ಮನವಿ ಮಾಡಿದರು.

"

ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳ ಅಸಹಕಾರದ ಕುರಿತು ಕೆಲವರು ಬೇಸರ ವ್ಯಕ್ತಪಡಿಸಿದರು. ಮನೆಯಲ್ಲಿರುವ ಸೋಂಕಿತರ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಅವರ ಆರೋಗ್ಯ ತಪಾಸಣೆ ಮಾಡಿ. ಸೋಂಕಿತರಲ್ಲಿ ಸಮಸ್ಯೆ ಹೆಚ್ಚಾಗುವ ಲಕ್ಷಣಗಳು ಕಂಡುಬಂದರೆ ಅಂತವರನ್ನು ಕೋವಿಡ್‌ ಕೇರ್‌ ಕೇಂದ್ರಕ್ಕೆ ದಾಖಲು ಮಾಡಿ. ಗ್ರಾಮಗಳಲ್ಲಿ ಮಿನಿ ಕಂಟೈನ್ಮೆಂಟ್‌ ಜೋನ್‌ಗಳನ್ನು ಮಾಡಿ. ಅದರ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಿ. ಸೋಂಕಿತ ಮಹಿಳೆಯರಿಗೆ ಮಹಿಳಾ ವೈದ್ಯರಿಂದಲೇ ತಪಾಸಣೆಗೆ ವ್ಯವಸ್ಥೆ ಮಾಡಿ. ಆಶಾ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್‌, ಮಾಸ್ಕ್‌ ಹ್ಯಾಂಡ್‌ ಗ್ಲೌಸ್‌ ಸ್ಯಾನಿಟೈಸರ್‌ ಒದಗಿಸಿ ಎಂದು ಸಚಿವರು ಸಲಹೆ ನೀಡಿದರು.

ಕೊರೋನಾ ನಿಯಂತ್ರಣಕ್ಕೆ ಆದ್ಯತೆ ನೀಡದ ಸರ್ಕಾರ: ಎಸ್‌.ಆರ್‌. ಪಾಟೀಲ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ ರಚನೆ ಮಾಡಿ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಘ- ಸಂಸ್ಥೆಗಳನ್ನು ಕಾರ್ಯಪಡೆಗೆ ಜೋಡಣೆ ಮಾಡಿ. ಪ್ರಾಥಮಿಕ ಸಂಪರ್ಕಿತರನ್ನು ಆರ್‌ಟಿಪಿಸಿಆರ್‌ ತಪಾಸಣೆಗೆ ಒಳಪಡಿಸಿ. ದ್ವಿತೀಯ ಸಂಪರ್ಕಿತರನ್ನು ರಾಪಿಡ್‌ ಆಂಟಿಜನ್‌ ಟೆಸ್ಟಿಗೆ ಒಳಪಡಿಸಿ ಎಂದು ಸೂಚಿಸಿದರು.

ಸೋಂಕಿತರಿಗೆ ಆಹಾರದ ಕಿಟ್‌ ವಿತರಿಸಲು ಸೂಚನೆ

ಶಿಗ್ಗಾಂವಿ ತಾಲೂಕಿನಲ್ಲಿರುವ ಕೋವಿಡ್‌ ಸೋಂಕಿತರ ಮನೆ ಮನೆಗೆ ತೆರಳಿ ಆಹಾರದ ಕಿಟ್‌ಗಳನ್ನು ವಿತರಣೆ ಮಾಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಾಲೂಕು ಆಡಳಿತಕ್ಕೆ ಸೂಚಿಸಿದರು.

ಸೋಂಕಿತರ ಮನೆಯಲ್ಲಿ ಹಲವಾರು ಸಮಸ್ಯೆಗಳಿರುತ್ತವೆ. ಸೋಂಕಿತರು ಹೋಂ ಐಸೋಲೇಷನ್‌ನಲ್ಲಿದ್ದರೆ ಸಮಸ್ಯೆಗಳು ಇನ್ನಷ್ಟು ಜಾಸ್ತಿ. ಹೀಗಾಗಿ ಸೋಂಕಿತರ ಮನೆಗೆ ತೆರಳಿ ಅಕ್ಕಿ, ಬೇಳೆ, ಬೆಲ್ಲ, ಅಡುಗೆ ಎಣ್ಣೆ, ಕಾರ, ಮಸಾಲೆ ಪೌಡರ್‌ ಸೇರಿದಂತೆ ಇತರೆ ಪದಾರ್ಥಗಳ ಕಿಟ್ಟನ್ನು ವಿತರಣೆ ಮಾಡಬೇಕು. ಇದಕ್ಕೆ ತಗುಲುವ ವೆಚ್ಚವನ್ನು ಎಸ್‌ಡಿಆರ್‌ಎಫ್‌ ನಿಧಿಯಿಂದ ಬಳಕೆ ಮಾಡಬೇಕೆಂದು ಶಿಗ್ಗಾಂವಿ ತಹಸೀಲ್ದಾರರಿಗೆ ಸೂಚಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona