Asianet Suvarna News Asianet Suvarna News

ಬಲವಂತ ಮತಾಂತರ ನಿಷೇಧಕ್ಕೆ ಕಾಯ್ದೆ?: ಸಚಿವ ಆರಗ ಜ್ಞಾನೇಂದ್ರ

*  ಅವರವರು ಅವರವರ ಧರ್ಮದಲ್ಲಿ ಬದುಕಬೇಕು
*  ಒತ್ತಾಯಪೂರ್ವಕ ಮತಾಂತರದಿಂದ ಕ್ಷೋಭೆ ನಿರ್ಮಾಣ 
*  ಬಲವಂತ ಮತಾಂತರ ಕಡಿವಾಣಕ್ಕೆ ಸರ್ಕಾರ ಬದ್ಧ 
 

Home Minister Araga Jnanendra Talks Over Act for the Prohibition of Conversion grg
Author
Bengaluru, First Published Sep 29, 2021, 7:15 AM IST

ಮೈಸೂರು(ಸೆ. 29):  ಬಲವಂತದ ಆಮಿಷದ ಮತಾಂತರ ನಿಷೇಧಕ್ಕೆ ಕಾಯಿದೆ ತರಲು ಚಿಂತನೆ ಮಾಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra)ತಿಳಿಸಿದ್ದಾರೆ. 

ಮೈಸೂರಿನ ಪೊಲೀಸ್‌ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆಯ ನಡೆಸಿದ ಬಳಿಕ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರವರು ಅವರವರ ಧರ್ಮದಲ್ಲಿ ಬದುಕಬೇಕು. ಒತ್ತಾಯಪೂರ್ವಕ ಮತಾಂತರದಿಂದ(Conversion) ಕ್ಷೋಭೆ ನಿರ್ಮಾಣವಾಗುತ್ತದೆ. ಇದರ ಕಡಿವಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಸಹಕಾರದೊಂದಿಗೆ ಅಪರಾಧ ಮತ್ತು ವ್ಯಸನಮುಕ್ತ ಕರ್ನಾಟಕ ನಿರ್ಮಾಣಕ್ಕೆ ಪಣತೊಟ್ಟಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಶಕ್ತಿ ತುಂಬು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 113 ಠಾಣೆಗಳಿಗೆ ಸ್ವಂತ ಕಟ್ಟಡಗಳಿರಲಿಲ್ಲ. ಈ ವರ್ಷ 100 ಠಾಣೆಗಳ ಕಟ್ಟಡ ನಿರ್ಮಾಣಕ್ಕೆ . 200 ಕೋಟಿ ನೀಡಲಾಗಿದೆ. ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ನಿರ್ಮಾಣ ಕಾರ್ಯ ಆರಂಭವಾಗಲಿದೆ. ಈ ವರ್ಷದಲ್ಲೇ ಉಳಿದ 13 ಠಾಣೆಗಳ ನಿರ್ಮಾಣಕ್ಕೆ ಕ್ರಮ ವಹಿಸುವುದಾಗಿ ಅವರು ತಿಳಿಸಿದರು.

ಯಾದಗಿರಿಯಲ್ಲಿ ಇನ್ನೂ ನಿಂತಿಲ್ಲ ಮತಾಂತರ, ಸಹಾಯದ ನೆಪದಲ್ಲಿ ಜನರಿಗೆ ಬ್ರೇನ್‌ವಾಶ್

ಆನ್‌ಲೈನ್‌ ಜೂಜು ನಿಷೇಧ:

ಆನ್‌ಲೈನ್‌ ಜೂಜು ವ್ಯಾಪಕವಾಗಿ ಹಬ್ಬಿದೆ. ಕಾಲೇಜು ವಿದ್ಯಾರ್ಥಿಗಳು ಲಕ್ಷಾಂತರ ಕಳೆದುಕೊಂಡಿದ್ದಾರೆ. ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ. ಕುಟುಂಬಗಳ ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಆನ್‌ಲೈನ್‌ ಜೂಜು ನಿಷೇಧಿಸುತ್ತೇವೆ ಎಂದರು. ನಗರದಲ್ಲಿ ಮಾದಕ ವಸ್ತು ಜಾಲ ದೊಡ್ಡ ಪ್ರಮಾಣದಲ್ಲಿ ಇರುವ ಬಗ್ಗೆ ಮಾಹಿತಿ ಇದೆ. ವಿದ್ಯಾರ್ಥಿಗಳು ದಾಸರಾಗುತ್ತಿರುವುದು ಕಳವಳಕಾರಿ. ಕಳೆದ 3 ವರ್ಷಗಳಲ್ಲಿ 61 ಪ್ರಕರಣಗಳು ದಾಖಲಾಗಿದ್ದು, 104 ಜನರನ್ನು ಬಂಧಿಸಲಾಗಿದೆ. ನಗರದಲ್ಲಿ ಹುಕ್ಕಾಬಾರ್‌ ತೆರೆದಿರುವ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ಮುಚ್ಚಿಸುವಂತೆ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದೇವೆ. ಪಾಲಿಕೆಯಿಂದ ಅನುಮತಿ ಪಡೆದು ಕೆಲವರು ನಡೆಸುತ್ತಿದ್ದಾರೆ. ಆದರೆ ಹುಕ್ಕಾಬಾರ್‌ನಲ್ಲಿ ಮಾದಕ ವಸ್ತು ಇದ್ದರೆ ಖಂಡಿತ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಶಿಕ್ಷೆ ಪ್ರಮಾಣ ಕಡಿಮೆ:

ನಗರ ವ್ಯಾಪ್ತಿಯಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇದೆ. 2018ರಲ್ಲಿ ಶೇ.38.54, 2019ರಲ್ಲಿ 25.27, 2020ರಲ್ಲಿ ಶೇ. 44.22, 2021ರಲ್ಲಿ 37.77 ಶಿಕ್ಷೆ ಪ್ರಮಾಣ ಇದೆ. ಸಾಕ್ಷಿಗಳಿಗೆ ವಿಶ್ವಾಸ ತುಂಬಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಶಿಕ್ಷೆ ಕೊಡಿಸಬೇಕು. ಇಲ್ಲದಿದ್ದರೆ ಅಪರಾಧ ಕಡಿಮೆಯಾಗುವುದಿಲ್ಲ ಎಂದರು.

ಪೊಲೀಸರು ಸಮನ್ಸ್‌ ಜಾರಿ ಮಾಡುವುದರಿಂದ ಬಹಳ ಶ್ರಮ ಇದೆ. ಸಮಯ ವ್ಯರ್ಥವಾಗುತ್ತಿದೆ. ಇದನ್ನು ಉಳಿಸಲು ಖಾಸಗಿಯವರಿಗೆ ಅಥವಾ ಅಂಚೆ ಇಲಾಖೆಗೆ ವಹಿಸುವ ಚಿಂತನೆ ಇದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದರು. ಶಾಸಕ ಎಲ್‌. ನಾಗೇಂದ್ರ, ಮೈಲ್ಯಾಕ್‌ ಅಧ್ಯಕ್ಷ ಎನ್‌.ವಿ. ಫಣೀಸ್‌, ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಎಸ್ಪಿ ಆರ್‌. ಚೇತನ್‌ ಇದ್ದರು.
 

Follow Us:
Download App:
  • android
  • ios