ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಗೆ ಮದ್ಯವ್ಯಸನಿಯೊಬ್ಬ ಹುಸಿ ಬಾಂಬ್‌ ಕರೆ ಮಾಡಿ ಆತಂಕ ಸೃಷ್ಟಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. 

ನಗರದ ಬೆಳವಾಡಿ ನಿವಾಸಿ ಗಂಗಾಧರ್‌(42) ಎಂಬಾತನೇ ಹುಸಿ ಬಾಂಬ್‌ ಕರೆ ಮಾಡಿ ಸಿಕ್ಕಿಬಿದ್ದವ. ಸಹೋದರರೊಂದಿಗೆ ಆಸ್ತಿ ವಿಚಾರದಲ್ಲಿ ಜಗಳವಾಡಿ ಮನನೊಂದಿದ್ದ ಗಂಗಾಧರ ಮದ್ಯ ಸೇವಿಸಿ ಬೆಳಗ್ಗೆ 9.25 ಹಾಗೂ 9.29ಕ್ಕೆ ಎರಡು ಬಾರಿ ಕರೆ ಮಾಡಿ, ಅರಮನೆ ಬಾಂಬ್‌ ಇರಿಸಿದ್ದಾಗಿ ಬೆದರಿಸಿದ್ದಾನೆ. ಗಂಗಾಧರ್‌ ಕರೆ ಸ್ವೀಕರಿಸಿದ ಕಂಟ್ರೋಲ್‌ ರೂಂ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಬಾಂಬ್‌ ಪತ್ತೆ ದಳ, ಶ್ವಾನ ದಳದ ಸಿಬ್ಬಂದಿ ಅರಮನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದು ಇದೊಂದು ಹುಸಿಕರೆ ಎಂಬುದನ್ನು ಖಾತ್ರಿ ಪಡಿಸಿಕೊಂಡಿದ್ದಾರೆ. ಈ ನಡುವೆ ಮೊಬೈಲ್‌ ಸಂಖ್ಯೆ ಮತ್ತು ಟವರ್‌ ಆಧಾರ ಮೇಲೆ ಬಾರ್‌ವೊಂದರಲ್ಲಿ ಕುಡಿಯುತ್ತಿದ್ದ ಗಂಗಾಧರನನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ದೇವರಾಜ ಠಾಣೆಯಲ್ಲಿ ಗಂಗರಾಜು ವಿರುದ್ಧ ಪ್ರಕರಣ ದಾಖಲಾಗಿದೆ.