ಬೇಲೂರಿನಿಂದ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಈಗಲೇ ಫಿಕ್ಸ್ : ಗೆಲುವು ಫಿಕ್ಸ್ ಎಂದ ವಿಜಯೇಂದ್ರ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇನ್ನೆರಡು ವರ್ಷ ಬಾಕಿ ಇರುವಾಗಲೇ ಈಗಲೇ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಫಿಕ್ಸ್ ಮಾಡಲಾಗಿದೆ.
ಬೇಲೂರು (ನ.30): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದಿಂದ ಎಚ್.ಕೆ. ಸುರೇಶ್ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶ ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳುವುದರ ಮೂಲಕ ಬಿಜೆಪಿ ಅಭ್ಯರ್ಥಿಯ ಗೊಂದಲಕ್ಕೆ ತೆರೆ ಎಳೆದಂತಾಗಿದೆ.
ತಾಲೂಕಿನ ಮಾದಿಹಳ್ಳಿ ಹೋಬಳಿಯ ಹಗರೆಯಲ್ಲಿ ಶನಿವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೆ.ಆರ್. ಪೇಟೆ ಮತ್ತು ಶಿರಾ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಹಾಸನದ ಮುಖಂಡರ ಪಾತ್ರ ಬಹಳ ಮುಖ್ಯವಾಗಿದೆ. ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಹಾಸನದ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲು ಈಗಾಗಲೇ ಬಿಜೆಪಿ ಸನ್ನದ್ಧವಾಗಿದೆ ಎಂದರು.
ಅಲ್ಲದೆ ನನಗೆ ಬೇಲೂರು ಕ್ಷೇತ್ರದ ಮೇಲೆ ವಿಶ್ವಾಸವಿದ್ದು ಸೂರ್ಯ, ಚಂದ್ರ ಇರುವುದು ಎಷ್ಟುಸತ್ಯವೋ ಮುಂಬರುವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬೇಲೂರಿನಲ್ಲಿ ಎಚ್.ಕೆ. ಸುರೇಶಣ್ಣ ಗೆಲ್ಲುವುದು ಅಷ್ಟೇ ಸತ್ಯ ಎಂದು ಹೇಳಿ ಸುರೇಶ್ ಅವರನ್ನು ಮುಂದಿನ ವಿಧಾನಸಭೆ ಚುನಾವಣೆಯ ಬೇಲೂರಿನ ಅಭ್ಯರ್ಥಿ ಎಂದು ಬಿಂಬಿಸಿದರು.
ಕಂದಾಯ ಸಚಿವರಾದ ಆರ್. ಅಶೋಕ್ ಅವರು ಬೇಲೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಚ್.ಕೆ. ಸುರೇಶ್ ಅವರು ಗೆಲ್ಲಬೇಕೆಂದರೆ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಅತಿ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕರೆ ನೀಡುವ ಮೂಲಕ ಸುರೇಶ್ ಪಕ್ಷದ ಅಭ್ಯರ್ಥಿ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಪೌರಾಡಳಿತ ಸಚಿವ ನಾರಾಯಣಗೌಡ ತಮ್ಮ ಭಾಷಣದಲ್ಲಿ ಎಚ್.ಕೆ. ಸುರೇಶ್ ಅವರು 2 ಬಾರಿ ಚುನಾವಣೆ ಸ್ಪಧಿರ್ಸಿ ಸೋತಿದ್ದು ಈ ಬಾರಿ ಬೇಲೂರು ವಿಧಾನಸಭಾ ಅಭ್ಯರ್ಥಿ ಅವರೇ ಎಂದು ಒತ್ತಿ ಹೇಳಿದರು.
ಎಚ್.ಕೆ. ಸುರೇಶ್ ಹೆಸರು ಪ್ರಸ್ತಾಪಿಸಿದಾಗ ಸಮಾವೇಶದಲ್ಲಿ ಸೇರಿದ್ದ ಸಾವಿರಾರು ಜನ ಕಾರ್ಯಕರ್ತರು ಚಪ್ಪಾಳೆ, ಶಿಳ್ಳೆ ಹಾಗೂ ಜೈಕಾರ ಹಾಕುವುದರ ಮೂಲಕ ಸುರೇಶ್ ಅವರಿಗೆ ವ್ಯಾಪಕ ಬೆಂಬಲ ತೋರಿದರು.